ಧಾರವಾಡ: ಮಾಸ್ಕ್ ಹಾಕದೇ ಇದ್ರೆ ಹುಷಾರ್ ನಾಳೆಯಿಂದ ‌ಮತ್ತೆ ದಂಡ ವಸೂಲಿ, ಜಿಲ್ಲಾಡಳಿತ ಎಚ್ಚರಿಕೆ

ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ತಲಾ 80 ಜಂಬೋ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳು ಲಭ್ಯ ಇದ್ದು ಸದಾಕಾಲ ಅವು ಭರ್ತಿಯಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಖಾಸಗಿ ಆಸ್ಪತ್ರೆಗಳು ಕೋರಿದರೆ ತಾತ್ಕಾಲಿಕವಾಗಿ ಅವರಿಗೆ ನೆರವು ನೀಡಲು ಸಿದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸೂಚಿಸಿದರು.

news18-kannada
Updated:September 24, 2020, 2:29 PM IST
ಧಾರವಾಡ: ಮಾಸ್ಕ್ ಹಾಕದೇ ಇದ್ರೆ ಹುಷಾರ್ ನಾಳೆಯಿಂದ ‌ಮತ್ತೆ ದಂಡ ವಸೂಲಿ, ಜಿಲ್ಲಾಡಳಿತ ಎಚ್ಚರಿಕೆ
ಧಾರವಾಡ ಜಿಲ್ಲಾ ಭವನ.
  • Share this:
ಧಾರವಾಡ : ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯಗೋಳಿಸಲಾಗಿತ್ತು.  ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಮಾಸ್ಕ್ ಬಳಕೆ ಮಾಡದವರಿಂದ ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 30 ಲಕ್ಷ ರೂ. ದಂಡ ಸಂಗ್ರಹ ಮಾಡಲಾಗಿದೆ. ಈಗ ಮತ್ತೆ ದಂಡ ವಿಧಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಲು  ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ‌ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕರು‌ ಮುಖಕ್ಕೆ ಮಾಸ್ಕ್ ಹಾಕದೇ ಇರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಸೆ.25) ರಿಂದ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದಿದ್ದಾರೆ.

ಮಾಸ್ಕ್ ಬಳಕೆಯಿಂದ ಕೊರೊನಾ ವೈರಾಣು ಹರಡುವಿಕೆ ನಿಯಂತ್ರಿಸಬಹುದು ಎಂಬುದು ಈಗಾಗಲೇ ವೈದ್ಯಕೀಯವಾಗಿ ದೃಢಪಟ್ಟಿದ್ದು, ಮಾರುಕಟ್ಟೆ, ಹೋಟೆಲ್ , ಪಾನ್ ಶಾಪ್ ಮತ್ತಿತರ ಅಂಗಡಿ- ಮುಂಗಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಈ ನಿಯಮ ಉಲ್ಲಂಘಿಸಿದರೆ ನಗರ ಪ್ರದೇಶಗಳಲ್ಲಿ 200 ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲು ಸರ್ಕಾರ ಸೂಚಿಸಿದೆ.

ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ದಂಡ ವಿಧಿಸಲು ಪೊಲೀಸ್, ಮಹಾನಗರ ಪಾಲಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಕಂದಾಯ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡಗಳು ಹುಬ್ಬಳ್ಳಿ- ಧಾರವಾಡ ಅವಳಿನಗರ ಎಲ್ಲಾ ತಾಲೂಕು ಕೇಂದ್ರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ಆಕರಿಸಲಿವೆ.

ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂಬುದು ಇದರ ಉದ್ದೇಶವಾಗಿದ್ದು, ಸಂಗ್ರಹವಾದ ದಂಡ ಶುಲ್ಕದ ಮಾಹಿತಿಯನ್ನು ಗೂಗಲ್ ಸ್ಪ್ರೆಡ್ ಶೀಟ್ ನಲ್ಲಿ ಕಾಲಕಾಲಕ್ಕೆ ನವೀಕರಿಸಲಾಗುತ್ತದೆ.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಪಾಲಿಸಲಾಗುತ್ತಿದ್ದು. ಆಕ್ಸಿಜನ್ ಪೂರೈಕೆ, ವೆಂಟಿಲೇಟರುಗಳ ವ್ಯವಸ್ಥೆ ಬಗ್ಗೆ ಸರ್ಕಾರ ನೀಡುವ ನಿರ್ದೇಶನಗಳನ್ನು ಅನುಸರಿಸಲಾಗುತ್ತಿದೆ. ಬೇರೆ ಜಿಲ್ಲೆಯ ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡ ಅವರ ಸರಿಯಾದ ವಿಳಾಸ, ತಾಲೂಕು, ಜಿಲ್ಲೆಯ ಮಾಹಿತಿಯನ್ನು ಎಸ್ ಆರ್ ಎಫ್ ಗುರುತಿನ ಸಂಖ್ಯೆ ಸೃಜಿಸುವ ಸಂದರ್ಭದಲ್ಲಿ ಸರಿಯಾಗಿ ದಾಖಲಿಸಬೇಕು. ಈ ಕುರಿತು ಆ ಹಂತದ ಸಿಬ್ಬಂದಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : MSP Crisis - ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರ ಬದ್ಧ; ಆದರೆ ಕಾನೂನಾಗಿ ಸೇರಿಸುವುದಿಲ್ಲ: ಕೇಂದ್ರ ಕೃಷಿ ಸಚಿವ

ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದಿಂದ ವೆಂಟಿಲೇಟರ್ ಸರ್ಕಾರದ ವೈದ್ಯಕೀಯ ಸಂಸ್ಥೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್, ಹೈ ಫ್ಲೋ ಆಕ್ಸಿಜನ್ ಸರಬರಾಜು ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೂ ಸಹ ಅವರ ಕೋರಿಕೆ ಮೇರೆಗೆ ಒದಗಿಸಿ ನೆರವು ನೀಡಲು  ಸರ್ಕಾರ ಅವಕಾಶ ನೀಡಿದೆ. ಖಾಸಗಿ ಆಸ್ಪತ್ರೆಗಳು ಈ ಕುರಿತು ಮನವಿ ಸಲ್ಲಿಸಿದರೆ ಕ್ರಮ ವಹಿಸಲಾಗುವುದು. ಜೀವ ರಕ್ಷಣೆಯೇ ಮೊದಲ ಆದ್ಯತೆಯಾಗಿರುವುದರಿಂದ ಸಮರೋಪಾದಿಯಲ್ಲಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು.

ಧಾರವಾಡ ಜಿಲ್ಲಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ತಲಾ 80 ಜಂಬೋ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳು ಲಭ್ಯ ಇದ್ದು ಸದಾಕಾಲ ಅವು ಭರ್ತಿಯಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ಖಾಸಗಿ ಆಸ್ಪತ್ರೆಗಳು ಕೋರಿದರೆ ತಾತ್ಕಾಲಿಕವಾಗಿ ಅವರಿಗೆ ನೆರವು ನೀಡಲು ಸಿದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
Published by: MAshok Kumar
First published: September 24, 2020, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading