19 ಜನರನ್ನು ಬಲಿ ಪಡೆದ ಧಾರವಾಡದ ಬಹುಮಹಡಿ‌ ಕಟ್ಟಡ ದುರಂತದ ವರದಿ ಇನ್ನೂ ನಿಗೂಢ‌

ಧಾರವಾಡದ ಬಹುಮಹಡಿ‌ ಕಟ್ಟಡ ದುರಂತ ನಡೆದು ಎರಡು ವರ್ಷ ಗತಿಸಿದರೂ ತಜ್ಞರ ವರದಿ ಇನ್ನೂ ವರದಿಯನ್ನು ಬಹಿರಂಗ ಪಡಿಸದೇ ಇರುವುದು ಹಾಗೂ ಕೆಲವು ಗಾಯಾಳುಗಳಿಗೆ ಮಾತ್ರ ಪರಿಹಾರ ನೀಡಿದ್ದು‌ ಹಲವು ಅನುಮಾನಗಳಿಗೆ ದಾರಿ‌ ಮಾಡಿಕೊಟ್ಟಿದೆ.

ಧಾರವಾಡದಲ್ಲಿ ಮೃತಪಟ್ಟ ಕುಟುಂಬಸ್ಥರ ಫೋಟೋಗೆ ನಮಸ್ಕರಿಸಿದ ಬಾಲಕಿ

ಧಾರವಾಡದಲ್ಲಿ ಮೃತಪಟ್ಟ ಕುಟುಂಬಸ್ಥರ ಫೋಟೋಗೆ ನಮಸ್ಕರಿಸಿದ ಬಾಲಕಿ

  • Share this:
ಧಾರವಾಡ : ಧಾರವಾಡದ ಬಹುಮಹಡಿ ಕಟ್ಟಡ ದುರಂತ ನಡೆದು 2 ವರ್ಷಗಳು ಗತಿಸಿವೆ. ಆ ದುರಂತದಲ್ಲಿ 19 ಜನರು ಸಾವನಪ್ಪಿ, 57 ಜನರಿಗೆ ಗಾಯವಾಗಿತ್ತು. ಕಳೆದ ‌ಎರಡು ವರ್ಷಗಳ‌ ಹಿಂದೆ‌ ಘಟನೆ ಇಂದಿಗೂ ಸಹ ಮಾಸಿಲ್ಲ. ಈ ಕಟ್ಟಡ ದುರಂತದ ಕುರಿತು ಅಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದೆ. ಆದರೆ ವರದಿಯಲ್ಲಿ ಏನಿದೆ ಎಂಬುದನ್ನು ಇನ್ನೂ ಸಹ ಬಹಿರಂಗ ಪಡಿಸಿಲ್ಲ. ಅಲ್ಲದೆ ಗಾಯವಾದ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಿಲ್ಲ ಎಂದು ರ್ಯಾಲಿ ಮಾಡಲಾಯಿತು.

ಧಾರವಾಡದ ಕುಮಾರೇಶ್ವರ ನಗರದಲ್ಲಿದ್ದ ಬಹುಮಹಡಿ‌ಕಟ್ಟಡ. ಜನಜಾಗೃತಿ ವೇದಿಕೆ ಯಿಂದ ಈ ಕಟ್ಟಡದಲ್ಲಿ ದುರಂತದಲ್ಲಿ ಮೃತಪಟ್ಟವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ‌ಕೋರಿದರು. ಅಲ್ಲದೇ ಒಂದು‌ ನಿಮಿಷ ಮೌನಾಚರಣೆ ‌ಮಾಡಿದರು. ಬಳಿಕ ಕಟ್ಟಡ ದುರಂತ ನಡೆದ ಸ್ಥಳದಿಂದ‌ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಇದೇ ವೇಳೆ‌ ಮಾತನಾಡಿದ ಜನಜಾಗೃತಿ ವೇದಿಗೆ ಸಂಘಟನೆಯ ಅಧ್ಯಕ್ಷ ಬಸವರಾಜ ಕೊರವರ, ಕಟ್ಟಡ ದುರಂತದಲ್ಲಿ ಮೃತಪಟ್ಟು 19 ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಕೇವಲ 7 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೆ, ಈ ಘಟನೆಯಲ್ಲಿ ಗಾಯವಾದ ಗಾಯಾಳುಗಳಲ್ಲಿ ಕೇವಲ 4 ಜನರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಿದೆ. ಆದರೆ, ಉಳಿದ ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೆ ಕಟ್ಟಡ ದುರಂತ ಕುರಿತು ತಜ್ಞ ವರದಿಯನ್ನು ಪಡೆದು ಅಂದಿನ‌ ಜಿಲ್ಲಾಧಿಕಾರಿ 14/03/2020 ರಂದು  ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ ಏಕೆ? ಎಂದು ಪ್ರಶ್ನಿಸಿದರು. ಅಲ್ಲದೆ ಸರ್ಕಾರ ಕಟ್ಟಡ ಮಾಲೀಕರ ರಕ್ಷಣೆಗೆ ನಿಂತಿರುವ ಲಕ್ಷಣವಿದೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: Yadagiri: ಕೊರೋನಾಗೆ ಬ್ರೇಕ್ ಹಾಕಲು ಯಾದಗಿರಿ ಪ್ರವೇಶಿಸುವವರ ಮೇಲೆ ಹದ್ದಿನ ಕಣ್ಣು; ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಈ ಬಹುಮಹಡಿ ಕಟ್ಟಡದಲ್ಲಿ ಮೃತಪಟ್ಟವರ ಪೈಕಿ ಮಹೇಶ್ವರ ಹಿರೇಮಠ ಹಾಗೂ ಅಶ್ವಥ್ ಹಿರೇಮಠ ಅವರು ಸಹ ಮೃತರಾಗಿದ್ದಾರೆ. ಆದರೆ ಕುಟುಂಬಕ್ಕೆ ಆಸರೆಯಾಗಿದ್ದ ಇಬ್ಬರು ಪುರುಷರು  ಮೃತರಾಗಿರೊ ಹಿನ್ನೆಲೆ ಸೊಸೆ ಹಾಗೂ ಅತ್ತೆ ಸೇರಿ ಒಂದುವರೆ ವರ್ಷದ ಪುಟ್ಟ ಬಾಲಕಿ ಈ ಮೂವರು ಇಂದು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಇಬ್ಬರು ಮೃತರಾಗಿರೊ ಹಿನ್ನೆಲೆ ಸರ್ಕಾರ ತಲಾ 7 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆದರೆ ಬಣ್ಣದ ಅಂಗಡಿಗಾಗಿ ಸಾಲಸೋಲ ಮಾಡಿ 40 ಲಕ್ಷ ಹಣ ಹೂಡಿಕೆ ಮಾಡಿದ್ದರು. ಕಟ್ಟಡ ಕುಸಿದ ಪರಿಣಾಮ ಒಂದು ಬಿಡಿಕಾಸು ಸಿಗಲಿಲ್ಲ. ಹಾಕಿದ ಹಣ ಹಾಗೂ ಎರಡು ಜೀವಗಳು ಬಲಿಯಾಗಿವೆ. ಮೃತರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆ ಹಿರೇಮಠ ಅವರ ಕುಟುಂಬ ಮೃತರ ಆತ್ಮಕ್ಕೆ ಶಾಂತಿ ಕೋರಿ ತಮ್ಮ ಮನೆಯಲ್ಲಿಯೇ ಪುಣ್ಯತಿಥಿ ಮಾಡಿದ್ದಾರೆ.

ಒಟ್ಟಾರೆಯಾಗಿ ಧಾರವಾಡದ ಬಹುಮಹಡಿ‌ ಕಟ್ಟಡ ದುರಂತ ನಡೆದು ಎರಡು ವರ್ಷ ಗತಿಸಿದರೂ ತಜ್ಞರ ವರದಿ ಇನ್ನೂ ವರದಿಯನ್ನು ಬಹಿರಂಗ ಪಡಿಸದೇ ಇರುವುದು ಹಾಗೂ ಕೆಲವು ಗಾಯಾಳುಗಳಿಗೆ ಮಾತ್ರ ಪರಿಹಾರ ನೀಡಿದ್ದು‌ ಹಲವು ಅನುಮಾನಗಳಿಗೆ ದಾರಿ‌ ಮಾಡಿಕೊಟ್ಟಿದೆ. ಏನೇ ಆಗಲಿ ಸರ್ಕಾರ ಇನ್ನಾದರು ಎಚ್ಚೆತುಕೊಂಡು ಕಟ್ಟಡ ದುರಂತ ವರದಿ ಬಹಿರಂಗ ಪಡಿಸಿ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕಿದೆ.

(ವರದಿ: ಮಂಜುನಾಥ ಯಡಳ್ಳಿ)
Published by:Sushma Chakre
First published: