ಧರ್ಮಸ್ಥಳ; ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವು ನಾಳಿದ್ದು (ಜೂ.8) ಭಕ್ತರ ದರ್ಶನಕ್ಕೆ ತೆರೆಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನದ ದರ್ಶನ ನಿಯಮದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಕೇಂದ್ರ ಸರಕಾರ ಸೂಚಿಸಿದ ಎಲ್ಲಾ ಮಾರ್ಗದರ್ಶಿಗಳನ್ನು ಪಾಲಿಸಲು ದೇವಸ್ಥಾನ ಆಡಳಿತ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇವಸ್ಥಾನಕ್ಕೆ ಪ್ರವೇಶಿಸುವ ಎಲ್ಲಾ ಭಕ್ತರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಬೇಕೆಂದು ಸೂಚಿಸಲಾಗಿದೆ. ದೇವಸ್ಥಾನದ ಅನ್ನಛತ್ರದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡೇ ಅನ್ನ ಸಂತರ್ಪಣೆ ನೆರವೇರಿಸಲೂ ತೀರ್ಮಾನಿಸಲಾಗಿದೆ.
ಅನಾರೋಗ್ಯ ಇದ್ದವರು ದೇವಸ್ಥಾನಕ್ಕೆ ಭೇಟಿ ನೀಡದಂತೆ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದ್ದು, ಇಂಥವರು ಬಂದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎನ್ನುವ ಸೂಚನೆಯನ್ನೂ ನೀಡಿದೆ. ಅಲ್ಲದೇ ಭಕ್ತಾಧಿಗಳು ಈ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಭದ್ರತಾ ವ್ಯವಸ್ಥೆಯನ್ನೂ ಕ್ಷೇತ್ರದ ವತಿಯಿಂದ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿಗಳ ನಿರ್ದೇಶನವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎನ್ನುವ ಮನವಿಯನ್ನು ಮಾಡಲಾಗಿದೆ.
ಇದನ್ನು ಓದಿ: ಮಳೆಗಾಲ ಎದುರಿಸುವುದಕ್ಕೆ ಬಿಬಿಎಂಪಿಗೆ ಬೇಕಿರುವುದು ಕಾರ್ಯಯೋಜನೆಯೇ ಹೊರತು ಆ್ಯಪ್, ವೆಬ್ಸೈಟ್ಗಳಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ