news18-kannada Updated:January 14, 2021, 3:09 PM IST
ಚಿಕ್ಕಲ್ಲೂರು
ಚಾಮರಾಜನಗರ (ಜನವರಿ 14); ಜಿಲ್ಲೆಯ ಕೊಳ್ಳೇಗಾಲ ತಾಲೂಕು ಚಿಕ್ಕಲ್ಲೂರು ಗ್ರಾಮದಲ್ಲಿ ಜನವರಿ 28 ರಿಂದ ಫೆಬ್ರವರಿ 1 ರವರೆಗೆ ನಡೆಯಲಿರುವ ಸಿದ್ದಾಪ್ಪಾಜಿ ಜಾತ್ರಾ ಮಹೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಮತ್ತು ಈ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸದೇ ಇರಲು ತೀರ್ಮಾನಿಸಲಾಗಿದೆ. ಕೊಳ್ಳೇಗಾಲ ಶಾಸಕ ಎನ್. ಮಹೆಶ್, ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಾರಿ ಜನವರಿ 28 ರಿಂದ ಫೆಬ್ರವರಿ 1ರವರೆಗೆ ನಿಗಧಿಯಾಗಿರುವ ಸಿದ್ದಾಪ್ಪಾಜಿ ಜಾತ್ರಾ ಮಹೋತ್ಸವವನ್ನು ಕೋವಿಡ್-19ರ ನಿಯಮ ಪ್ರಕಾರ ಅತ್ಯಂತ ಸರಳವಾಗಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಕೈಗೊಳ್ಳಬೇಕಾದ ಸಾಂಪ್ರದಾಯಿಕ ಪೂಜಾ ಕೈಂಕರ್ಯ ಹಾಗು ವಿಶೇಷ ಸೇವೆಗಳನ್ನು ಸ್ಥಳೀಯ ಸಿದ್ದಾಪ್ಪಾಜಿ ದೇವಸ್ಥಾನದ ಟ್ರಸ್ಟ್ ಹಾಗೂ ಮಠಗಳಿಗೆ ಸೇರಿದ ಗರಿಷ್ಠ 100 ಮಂದಿ ಮಾತ್ರ ಪಾಲ್ಗೊಂಡು ನೆರವೇರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದನ್ನು ನಿಷೇಧಿಸಲಾಗಿದ್ದು ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ಕ್ರಮಗಳನ್ನು ಕೈಗೊಳ್ಳಲು ಸಹ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಐದು ದಿನಗಳ ಕಾಲ ನಡೆಯುವ ಚಿಕ್ಕಲ್ಲೂರು ಸಿದ್ದಾಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತೀ ವರ್ಷ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ಇಲ್ಲಿಯೇ ಬಿಡಾರ ಹೂಡಿ ಚಂದ್ರಮಂಡಲೋತ್ಸವ, ಪಂಕ್ತಿಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ಸಂಪ್ರದಾಯವಿದೆ. ಹಾಗಾಗಿ ಈ ಬಾರಿ ಕೋವಿಡ್ ಕಾರಣದಿಂದ ಚಿಕ್ಕಲ್ಲೂರು ಕ್ಷೇತ್ರಕ್ಕೆ ಪ್ರವೇಶ ನೀಡದಿರುವ ಬಗ್ಗೆ ವ್ಯಾಪಕವಾಗಿ ಆದಷ್ಟು ಮುಂಚಿತವಾಗಿಯೇ ಪ್ರಚುರ ಪಡಿಸಬೇಕು. ಕರಪತ್ರ, ಪೋಸ್ಟರ್ಗಳ ಮೂಲಕ ಮಾಹಿತಿ ನೀಡಬೇಕು. ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿಯೂ ಸಹ ಜಾತ್ರಾ ಮಹೋತ್ಸವಕ್ಕೆ ಭಕ್ತಾಧಿಗಳಿಗೆ ಅವಕಾಶವಿಲ್ಲದಿರುವ ಬಗ್ಗೆ ಪ್ರಚುರ ಪಡಿಸುವ ಕ್ರಮಗಳಿಗೆ ಸೂಚಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದ್ದರೂ ಸಹ ಜಾತ್ರಾ ಪ್ರದೇಶದಲ್ಲಿ ಕುಡಿಯುವ ನೀರು, ನೈರ್ಮಲೀಕರಣದಂತಹ ವ್ಯವಸ್ಥೆಗಳಿಗೆ ಯಾವುದೇ ಕೊರತೆಯಾಗಬಾರದು. ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಸಿಹಿ ಪ್ರಸಾದ ವಿತರಣೆಗೂ ಮೊದಲು ಆರೋಗ್ಯ ಸುರಕ್ಷತಾ ಅಧಿಕಾರಿಗಳು ಪರೀಕ್ಷಿಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಇದನ್ನು ಓದಿ: MP Renukacharya: ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ!; ಎಂ.ಪಿ ರೇಣುಕಾಚಾರ್ಯ ಆಕ್ರೋಶ
ಪ್ರತಿವರ್ಷ ಜನವರಿಯಲ್ಲಿ ಐದು ದಿನಗಳ ಕಾಲ ನಡೆಯಲಿರುವ ಚಿಕ್ಕಲ್ಲೂರು ಜಾತ್ರೆ, ಮೊದಲ ದಿನ ನಡೆಯುವ ಚಂದ್ರಮಂಡಲೋತ್ಸವ ಹಾಗೂ ನಾಲ್ಕನೇ ದಿನ ನಡೆಯುವ ಪಂಕ್ತಿಸೇವೆಗೆ ಹೆಸರುವಾಸಿಯಾಗಿದೆ. ಬಿದಿರಿನಿಂದ ಕಿರೀಟ ಆಕಾರದಲ್ಲಿ ಚಂದ್ರ ಮಂಡಲ ತಯಾರಿಸಿ ಅದಕ್ಕೆ ಎಣ್ಣೆ ಅದ್ದಿದ ಬಟ್ಟೆ ಸುತ್ತಲಾಗುತ್ತದೆ. ಬಳಕ ಪೂಜೆ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಧಗಧಗನೆ ಉರಿಯುವ ಚಂದ್ರ ಮಂಡಲ ಜ್ಯೋತಿಗೆ ಭಕ್ತರು ದವಸ ಧಾನ್ಯ, ನಗನಾಣ್ಯ ಎರಚಿ ನಮಿಸುತ್ತಾರೆ.
ಚಂದ್ರಮಂಡಲದ ಬೆಂಕಿಯ ಜ್ವಾಲೆ ಯಾವ ದಿಕ್ಕಿನ ಕಡೆ ಉರಿಯುವುದೋ ಆ ದಿಕ್ಕಿಗೆ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂಬ ನಂಬಿಕ ಇದೆ.
ಜಾತ್ರೆಯ ನಾಲ್ಕನೇ ದಿನ ಸಹಸ್ರಾರು ಭಕ್ತರು ಕುರಿಕೋಳಿಗಳನ್ನು ತಂದು ಮಾಂಸದ ಅಡುಗೆ ಮಾಡಿ ಪಂಕ್ತಿ ಸೇವೆ ಮಾಡುತ್ತಾರೆ. ಸಿದ್ದಪ್ಪಾಜಿ ದೇವಾಲಯದ ಸುತ್ತಮುತ್ತ ಬಿಡಾರ ಹೂಡುವ ಭಕ್ತರು, ತಮ್ಮ ತಮ್ಮ ಬಿಡಾರಗಳಲ್ಲಿ ಸಿದ್ದಪ್ಪಾಜಿ ಕಂಡಾಯ ಪ್ರತಿಷ್ಠಾಪಿಸಿ ಪೂಜೆ ಮಾಡಿ ಮಾಂಸಾಹಾರ ತಯಾರಿಸಿ ನೈವೈದ್ಯ ಮಾಡುತ್ತಾರೆ. ತಮ್ಮ ಬಿಡಾರಗಳಿಗೆ ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಿ ಮಾಂಸಾಹಾರದ ಊಟ ಬಡಿಸುವ ಮೂಲಕ ಪಂಕ್ತಿಸೇವೆ ಮಾಡುತ್ತಾರೆ.
Published by:
HR Ramesh
First published:
January 14, 2021, 3:09 PM IST