• Home
  • »
  • News
  • »
  • district
  • »
  • ಮಠದ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಜಾಗದ ಮಾಲೀಕರ ಪತ್ತೆಗೆ ಮುಂದಾದ ಅಬಕಾರಿ ಇಲಾಖೆ

ಮಠದ ಆವರಣದಲ್ಲಿ ಗಾಂಜಾ ಗಿಡ ಪತ್ತೆ; ಜಾಗದ ಮಾಲೀಕರ ಪತ್ತೆಗೆ ಮುಂದಾದ ಅಬಕಾರಿ ಇಲಾಖೆ

ಮಠದ ಆವರಣದಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡ

ಮಠದ ಆವರಣದಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡ

ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮಠಕ್ಕೆ ಯಾರೂ ಸ್ವಾಮೀಜಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇಲ್ಲಿ ಗಾಂಜಾ ಗಿಡಗಳನ್ನು ಹೇಗೆ ಬೆಳೆಯಲಾಗಿದೆ ಎಂಬುದರ ಕುರಿತು ತನಿಖೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

  • Share this:

ವಿಜಯಪುರ (ನ. 28); ಇದು ನಂಬಲು ಕಷ್ಟವಾದರೂ ನಂಬಲೇಬೇಕಾದ ಘಟನೆ. ಹೀಗೂ ಇರುತ್ತಾ ಎಂದು ಯೋಚಿಸುವ ಪ್ರಸಂಗ. ಹೀಗಾದರೆ ಹೇಗೆ ಎಂದೂ ಚಿಂತಿಸಬೇಕಾದ ವಿಷಯ. ಇಂಥದ್ದೊಂದು ಘಟನೆಗೆ ಸಾಕ್ಷಿಯಾಗಿದ್ದು, ಬಸವನಾಡು ವಿಜಯಪುರ ಜಿಲ್ಲೆ.


ಅಬಕಾರಿ ಪೊಲೀಸರ ಒಂದು ಕಾರ್ಯಾಚರಣೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.  ಅದೂ ಕೂಡ ಪಕ್ಕಾ ಮಾಹಿತಿಯಂತೆ ದಾಳಿ ನಡೆಸಿರುವ ಅಬಕಾರಿ ಇಲಾಖೆಯ ಪ್ರಭಾರ ಡಿಸಿ ಈ ದೃಶ್ಯ ಕಂಡು ಖುದ್ದು ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ಅಬಕಾರಿ ಇಲಾಖೆ ಪ್ರಭಾರ ಡಿಸಿ ಅರುಣಕುಮಾರ ತಮ್ಮ ಸಿಬ್ಬಂದಿಯೊಂದಿಗೆ ನಿನ್ನೆ ಬಸವನ ಬಾಗೇವಾಡಿಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ತಾವು ಡಿಸಿಯಾಗಿರುವ ಚಿಕ್ಕೋಡಿ ಭಾಗದಲ್ಲಿ ಗಾಂಜಾ ಬೆಳೆದ ಪ್ರಸಂಗವೊಂದನ್ನು ಪ್ರಸ್ತಾಪಿಸಿದ್ದರು. ಆಗ, ಅಬಕಾರಿ ಇನ್ಸ್​ಪೆಕ್ಟರೊಬ್ಬರು ಇದೇ ರೀತಿಯ ಮಾಹಿತಿ ವಿಜಯಪುರ ಜಿಲ್ಲೆಯಲ್ಲಿಯೂ ಇದೇ ಎಂದು ಹೇಳಿದ್ದಾರೆ.


ಆಗ, ತಡ ಮಾಡದೇ ಪ್ರಭಾರ ಡಿಸಿ ಮತ್ತು ಸಿಬ್ಬಂದಿಯಾದ ಇನ್ಸ್​ಪೆಕ್ಟರ್ ಮಹಾದೇವ ಪೂಜಾರ, ಜಿ.ಎಸ್. ಪಾಟೀಲ, ಸುರೇಶ ಚೌಗುಲಾ, ಆರ್. ಐ. ಹಟ್ಟಿ, ಬಿ. ಎಸ್. ಕುಂಬಾರ, ಪರಶುರಾಮ ತೆಲಗಿ ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಈ ದಾಳಿ ನಡೆದಿದ್ದು ಬಸವನ ಬಾಗೇವಾಡಿ ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಯಲ್ಲಾಲಿಂಗ ಮಠದ ಆವರಣದಲ್ಲಿ. ಈ ಮಠದ ಹಿಂಬದಿಯಲ್ಲಿರುವ ಜಾಗದಲ್ಲಿ ಹೋಗಿ ನೋಡಿದಾಗ ಸುಮಾರು 5 ಅಡಿ ಎತ್ತರಕ್ಕೆ ಬೃಹದಾಕಾರವಾಗಿ ಬೆೆಳೆದ ಗಾಂಜಾ ಗಿಡಗಳು ಪತ್ತೆಯಾಗಿವೆ.  ಹೂವು ಮತ್ತು ಬೀಜಗಳನ್ನು ಬಿಟ್ಟಿರುವ ಗಿಡಗಳು ಇವಾಗಿದ್ದು, ಈ ಗಿಡಗಳನ್ನು ಕತ್ತರಿಸಿ ಜಪ್ತಿ ಮಾಡಿದ್ದಾರೆ.  ಆದರೆ, ಈ ಸಂದರ್ಭದಲ್ಲಿ ಮಠದಲ್ಲಿ ಯಾರೂ ಇರಲಿಲ್ಲ.  ಆರೋಪಿಗಳು ಪರಾರಿಯಾಗಿರುವುದು ಪತ್ತೆಯಾಗಿದೆ.


ಇದನ್ನು ಓದಿ: ಬಿಎಸ್​ವೈ ಪರ ನಿಲ್ಲಲು ಎಸ್​ಟಿಎಸ್ ಕರೆದಿದ್ದ ಮಿತ್ರಮಂಡಳಿ ಸಭೆ ಫ್ಲಾಪ್; ಬುಸುಗುಟ್ಟಿದ ಸದಸ್ಯರು


ಸುಮಾರು 5 ಅಡಿ ಎತ್ತರದ 13 ಹಸಿ ಮತ್ತು ಹೂವು ಹಾಗೂ ಬೀಜ ಬಿಟ್ಟಿರುವ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಸುಮಾರು ರೂ. 1 ಲಕ್ಷ ಮೌಲ್ಯದ 19.90 ಕೆಜಿ ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ, ಈ ಗಾಂಜಾ ಗಿಡಗಳಿದ್ದ ಜಾಗದ ಮಾಲೀಕರು ಯಾರು ಎಂಬುದರ ಕುರಿತು ಪತ್ತೆ ಮಾಡಿ ಮಾಹಿತಿ ನೀಡುವಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಬಸವನ ಬಾಗೇವಾಡಿ ಪುರಸಭೆಗೆ ಕೋರಿದ್ದಾರೆ. ಅಲ್ಲದೇ, ಎನ್ ಡಿ ಪಿ ಎಸ್. ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಮಠಕ್ಕೆ ಯಾರೂ ಸ್ವಾಮೀಜಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇಲ್ಲಿ ಗಾಂಜಾ ಗಿಡಗಳನ್ನು ಹೇಗೆ ಬೆಳೆಯಲಾಗಿದೆ ಎಂಬುದರ ಕುರಿತು ತನಿಖೆಯ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು