news18-kannada Updated:November 9, 2020, 7:13 AM IST
ಈರಮ್ಮ
ಕಲಬುರ್ಗಿ(ನವೆಂಬರ್ 09): ಮಹಿಳೆಯೊಬ್ಬರು ಆಧಾರ್ ಕಾರ್ಡ್ ಗಾಗಿ ಅಲೆದಾಡುತ್ತಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 30 ವರ್ಷದ ಈ ಮಹಿಳೆ ಆಧಾರ್ ಕಾರ್ಡ್ ಗಾಗಿ ಇದುವರೆಗೂ ಬರೋಬ್ಬರಿ 12 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಬೆರಳಿನ ಮಾದರಿ ಕೊಟ್ಟು, ಫೋಟೋ ತೆಗೆಯಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಆಧಾರ್ ಗಾಗಿ ಅಲೆದಾಡುತ್ತಲೇ ಇರುವ ಮಹಿಳೆ, ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಲು ಪರದಾಡುತ್ತಿದ್ದಾರೆ. ಹೀಗೆ ಪದೇ ಪದೇ ರಿಜೆಕ್ಟ್ ಆಗಲು ಕಾರಣವೇನೆಂದು ಪತ್ತೆ ಹಚ್ಚಿದಾಗ ಅಚ್ಚರಿ ಕಾದಿದೆ. ಮಗನ ಆಧಾರ್ ಗೆ ತನ್ನ ಬೆರಳಚ್ಚು ನೀಡಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಈಕೆ ಹೆಸರು ಈರಮ್ಮ. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದ ನಿವಾಸಿ. ಈ ಮಹಿಳೆ ಆಧಾರ್ ಮಾಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿ ಸುಸ್ತಾಗಿ ಕುಳಿತಿದ್ದಾರೆ. ಆಧಾರ್ ನೋಂದಣಿಗಾಗಿ ಬರೋಬ್ಬರಿ 12 ಬಾರಿ ಬೆರಳಿನ ಮಾದರಿ ನೀಡಿ, ಫೋಟೋ ತೆಗೆಯಿಸಿಕೊಂಡಿದ್ದಾರೆ.
2008 ರಿಂದ ಇಲ್ಲಿಯವರೆಗೂ ನೋಂದಣಿಗಾಗಿ ಅರ್ಜಿ ಹಾಕುತ್ತಲೇ ಇದ್ದಾರೆ. ಬೆರಳಚ್ಚು ಸ್ಕ್ಯಾನಿಂಗ್ ಮಾಡಿಸುವುದು, ಕಣ್ಣಿನ ಮಾದರಿ ಹಾಗೂ ಭಾವಚಿತ್ರ ತೆಗೆಯಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ಆಧಾರ್ ಕಾರ್ಡ್ ಮಾತ್ರ ಜನರೇಟ್ ಆಗುತ್ತಿಲ್ಲ. ತನ್ನ ಕೆಲಸ ಬಿಟ್ಟು ಹಲವು ವರ್ಷಗಳಿಂದ ಆಧಾರ್ ಗಾಗಿ ಅಡ್ಡಾಡುತ್ತಲೇ ಇದ್ದೇನೆ. ವಾಡಿ, ಚಿತ್ತಾಪುರ ಮತ್ತಿತರ ಕಡೆ ಅಡ್ಡಾಡಿ ಫೋಟೋ ತೆಗೆಯಿಸಿಕೊಂಡಿದ್ದೇನೆ. ಇದಕ್ಕಾಗಿ ಇದುವರೆಗೆ 10 ಸಾವಿರ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿಕೊಂಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈರಮ್ಮ ಅಲವತ್ತುಕೊಂಡಿದ್ದಾರೆ.
ಕೇಂದ್ರ ಸರ್ಕಾರ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಆದರೆ, ಈರಮ್ಮನ ಹೆಸರಲ್ಲಿ ಆಧಾರ್ ಕಾರ್ಡ್ ಇಲ್ಲ. ಹೀಗಾಗಿ ಸರ್ಕಾರದ ಯಾವುದೇ ಯೋಜನೆಯ ಫಲವೂ ಈಕೆಗೆ ಸಿಗುತ್ತಿಲ್ಲ. ಪಡಿತರ ಚೀಟಿ, ಉದ್ಯೋಗ ಖಾತ್ರಿ ಕೂಲಿ ಕೆಲಸ, ಬ್ಯಾಂಕ್ ಖಾತೆ ತೆಗೆಯುವುದು, ಆಶ್ರಯ ಮನೆ ಇತ್ಯಾದಿ ಯಾವುದಕ್ಕೆ ಅರ್ಜಿ ಸಲ್ಲಿಸಿದರೂ ಆಧಾರ್ ಇಲ್ಲದ ಕಾರಣಕ್ಕೆ ತಿರಸ್ಕೃತಗೊಳ್ಳುತ್ತಿವೆ. ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ, ಆಧಾರ್ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈರಮ್ಮಳ ಸಹೋದರ ಜಗದೀಶ್ ಪೂಜಾರಿ ಆಗ್ರಹಿಸಿದ್ದಾನೆ.
ವಾಡಿ ಹಾಗೂ ಚಿತ್ತಾಪುರ ಆಧಾರ್ ನೋಂದಣಿ ಕೇಂದ್ರದಲ್ಲಿ ರಜಿಸ್ಟರ್ ಮಾಡಲು ಹೋಗಿ ಹೋಗಿ ಮಹಿಳೆ ಸುಸ್ತಾಗಿದ್ದಾಳೆ. ಕೊನೆಗೆ ಕಲಬುರ್ಗಿಯ ಮಿನಿ ವಿಧಾನ ಸೌಧದದಲ್ಲಿ ಆಧಾರ್ ನೋಂದಣಿ ಅಧಿಕಾರಿಗಳನ್ನು ಭೇಟಿಯಾದಾಗ ನೋಂದಣಿ ಆಗದೇ ಇರುವುದಕ್ಕೆ ಕಾರಣಗಳು ತಿಳಿದು ಬಂದಿವೆ. 2008 ರಲ್ಲಿ ಈಕೆಯ ಪುತ್ರ ಭೀಮಾಶಂಕರ್ ನ ಆಧಾರ್ ನೋಂದಣಿ ವೇಳೆ ಈರಮ್ಮ ತನ್ನ ಬೆರಳಚ್ಚು ನೀಡಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಇದನ್ನೂ ಓದಿ :
ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ - ನಮಗೂ ಒಳ್ಳೆಯ ಕಾಲ ಬರುತ್ತದೆ: ಮಾಜಿ ಸಚಿವ ಸಂತೋಷ ಲಾಡ್
ನಂತರದಲ್ಲಿ ಎಷ್ಟೇ ಬಾರಿ ಬೆರಳಚ್ಚು ಸ್ಕ್ಯಾನ್ ಮಾಡಿ ಆಧಾರ್ ನೋಂದಣಿಗೆ ಯತ್ನಿಸಿದರೂ ತಾಂತ್ರಿಕ ಕಾರಣದಿಂದಾಗಿ ರಿಜೆಕ್ಟ್ ಆಗಿದೆ. ವಿಚಿತ್ರವೆಂದರೆ ಈರಮ್ಮ ಥಂಬ್ ನೀಡಿದ್ದರಿಂದ ಮಗ ಭೀಮಾಶಂಕರ್ ಹೆಸರಲ್ಲಿ ಒಂದು ಆಧಾರ್ ಕಾರ್ಡ್ ನೋಂದಣಿಯಾಗಿದ್ದರೆ, ಶಾಲೆಯಲ್ಲಿ ಭೀಮಾಶಂಕರ್ ಥಂಬ್ ಆಧರಿಸಿ ಮತ್ತೊಂದು ಆಧಾರ್ ರಜಿಸ್ಟರ್ ಆಗಿದೆ.
ಇದೆಲ್ಲ ಅಂಶಗಳನ್ನು ಕಲಬುರ್ಗಿಯಲ್ಲಿ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇದನ್ನು ಸರಿಪಡಿಸಲು ಪ್ರಯತ್ನಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ಕಾಲಾವಕಾಶವೂ ಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಳೆ ಮಾಡಿದ ಸಣ್ಣ ತಪ್ಪಿನಿಂದಾಗಿ ಎಷ್ಟೇ ಬಾರಿ ಆಧಾರ್ ಮಾಡಿಸಿದರೂ ನೋಂದಣೆಯಾಗದೆ ಪರಿತಪಿಸುವಂತಾಗಿದೆ.
Published by:
G Hareeshkumar
First published:
November 9, 2020, 7:13 AM IST