HOME » NEWS » District » DEPOSITORS STARTS INDEFINITE PROTEST AGAINST NIRANI CREDIT SOUHARDA BANK IN VIJAYAPURA MVSV HK

ನಿರಾಣಿ ಸೌಹಾರ್ದ ಸಹಕಾರಿ ನಿಯಮಿತದಿಂದ ವಂಚನೆ ಆರೋಪ: ಠೇವಣಿದಾರರಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭ

ಮುರುಗೇಶ ನಿರಾಣಿ ಹೆಸರಿನಲ್ಲಿ ಈ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರಿಂದ ತಮಗೆ ಉತ್ತಮ ಲಾಭವಾಗಲಿದೆ ಎಂದು ವಿಶ್ವಾಸ ಹೊಂದಿದ್ದರು. ಆದರೆ, ಕಳೆದ ಒಂದೂವರೆ ವರ್ಷದಿಂದ ತಾವು ಠೇವಣಿ ಇಟ್ಟಿರುವ ಹಣಕ್ಕೆ ಬಡ್ಡಿಯನ್ನೇ ನೀಡಿಲ್ಲ

news18-kannada
Updated:November 26, 2020, 4:36 PM IST
ನಿರಾಣಿ ಸೌಹಾರ್ದ ಸಹಕಾರಿ ನಿಯಮಿತದಿಂದ ವಂಚನೆ ಆರೋಪ: ಠೇವಣಿದಾರರಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭ
ಧರಣಿ ನಡೆಸುತ್ತಿರುವ ಠೇವಣಿದಾರರು
  • Share this:
ವಿಜಯಪುರ( ನವೆಂಬರ್​. 26): ವಿಜಯಪುರದಲ್ಲಿ ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹಣಕಾಸು ಸಂಸ್ಥೆಯ ಠೇವಣಿದಾರರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ವಿಜಯಪುರ ನಗರದ ಅಂಬೇಡ್ಕರ ಸರ್ಕಲ್ ಬಳಿ ಇರುವ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಎದುರು ಠೇವಣಿದಾರರು ಮತ್ತು ಪಿಗ್ಮಿ ಏಜೆಂಟರು ಹಾಗೂ ರೈತರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹೆಸರಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ 17 ಹಣಕಾಸು ಸಂಸ್ಥೆಯ ಶಾಖೆಗಳಿವೆ. 2009 ರಲ್ಲಿ ಈ ಸೌಹಾರ್ಧ ಶಾಖೆಗಳು ಒಂದೊಂದಾಗಿ ವಿಜಯಪುರ ನಗರ ಮತ್ತು ಜಿಲ್ಲೆಯ ನಾನಾ ಕಡೆ ಆರಂಭವಾಗಿದ್ದವು.  ಈ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿ ಹಣ ನೀಡುವುದಾಗಿ ಹೇಳಿದ್ದರಿಂದ ನಿವೃತ್ತ ನೌಕರರು ಮತ್ತು ವ್ಯಾಪಾರಿಗಳು ಹಾಗೂ ಇತರರು ತಮ್ಮ ಲಕ್ಷಾಂತರ ಹಣವನ್ನು ಠೇವಣಿ ಇಟ್ಟಿದ್ದರು.

ಮುರುಗೇಶ ನಿರಾಣಿ ಹೆಸರಿನಲ್ಲಿ ಈ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರಿಂದ ತಮಗೆ ಉತ್ತಮ ಲಾಭವಾಗಲಿದೆ ಎಂದು ವಿಶ್ವಾಸ ಹೊಂದಿದ್ದರು. ಆದರೆ, ಕಳೆದ ಒಂದೂವರೆ ವರ್ಷದಿಂದ ತಾವು ಠೇವಣಿ ಇಟ್ಟಿರುವ ಹಣಕ್ಕೆ ಬಡ್ಡಿಯನ್ನೇ ನೀಡಿಲ್ಲ.  ಅಲ್ಲದೇ, ಈ ಕುರಿತು ವಿಚಾರಿಸಲು ತೆರಳಿದರೆ ಬಹುತೇಕ ಕಚೇರಿಗಳು ಬಾಗಿಲು ಹಾಕಿವೆ. ಈ ಕುರಿತು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ.

ಕೊರೋನಾ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಮನೆಯಿಂದ ಹೊರ ಬರಬೇಡಿ ಎಂದು ಸರಕಾರ ಹೇಳುತ್ತಿದೆ.  ಆದರೆ, ನಿವೃತ್ತ ನೌಕರರಾದ ನಾವು ನಿವೃತ್ತಿಯ ನಂತರ ಬಂದ 22 ಲಕ್ಷ ರೂ ಹಣವನ್ನು ಠೇವಣಿ ಇಟ್ಟಿದ್ದೆ. ಈಗ ಒಂದೂವರೆ ವರ್ಷದಿಂದ ಬಡ್ಡಿ ಹಣವನ್ನೂ ನೀಡಿಲ್ಲ.  ಉಪಜೀವನಕ್ಕೆ ಏನು ಮಾಡಬೇಕು ಎಂದು ನಿವೃತ್ತ ಪಿಎಸ್‌ಐ ವಿಠ್ಠಲ ಬೆಳ್ಳುಬ್ಬಿ ಅಳಲು ತೋಡಿಕೊಂಡಿದ್ದಾರೆ.

ಇನ್ನೂ ತಾವೂ ಕೂಡ ಮುರುಗೇಶ ನಿರಾಣಿ ಅವರ ಹೆಸರಿನಲ್ಲಿಯೇ ಈ ಸಂಸ್ಥೆ ಆರಂಭವಾಗಿದ್ದರಿಂದ ಪಿಗ್ಮಿ ಏಜೆಂಟರಾಗಿ ಕೆಲಸಕ್ಕೆ ಸೇರಿಕೊಂಡಿದ್ದೇವೆ. ಅವರನ್ನು ನಂಬಿ ಸಾರ್ವಜನಿಕರಿಂದ ಠೇವಣಿ ಹಣ ಸಂಗ್ರಹಿಸಿದ್ದೇವೆ. ಬಸವನ ಬಾಗೇವಾಡಿ ತಾಲೂಕು ಒಂದರಲ್ಲಿಯೇ 10 ಜನ ಪಿಗ್ಮಿ ಏಜೆಂಟರು ತಲಾ 10 ಲಕ್ಷ ರೂ ಠೇವಣಿ ಸಂಗ್ರಹಿಸಿ ನೀಡಿದ್ದೇವೆ. ಈಗ ಬಡ್ಡಿ ಹಣವನ್ನೂ ನೀಡುತ್ತಿಲ್ಲ. ಗ್ರಾಹಕರು ಪಿಗ್ಮಿ ಏಜೆಂಟರಿಗೆ ಹಣ ಕೇಳುತ್ತಿದ್ದಾರೆ. ಕೂಡಲೇ ಸರಕಾರ ಮತ್ತು ಮುರುಗೇಶ ನಿರಾಣಿ ಕ್ರಮ ಕೈಗೊಳ್ಳದಿದ್ದರೆ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ದಾರಿ ತುಳಿಯಬೇಕಾಗುತ್ತದೆ ಎಂದು ಪಿಗ್ಮಿ ಏಜೆಂಟರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ನಮಗೆ ಯಡಿಯೂರಪ್ಪನವರೇ ನಾಯಕರು, ನಾಯಕತ್ವದ ಬದಲಾವಣೆ ಇಲ್ಲ: ಡಿಸಿಎಂ ಅಶ್ವತ್ಹನಾರಾಯಣ

ಠೇವಣಿದಾರರ ಹೋರಾಟಕ್ಕೆ ಬೆಂಬಲ ನೀಡಿರುವ ರೈತ ಮುಖಂಡರು, ಬಸವನ ಬಾಗೇವಾಡಿ ತಾಲೂಕು ಒಂದರಲ್ಲಿಯೇ 12 ಕೋಟಿ ರೂ ಬಾಕಿ ಇದೆ. ಸುಮಾರು39 ಕೋಟಿ ರೂ ಬಾಕಿ ಉಳಿಸಿಕೊಂಡಿದ್ದಾರೆ. ಬಡವರ ಹಣವನ್ನು ಸ್ವಂತಕ್ಕೆ ರಿಯಲ್ ಎಸ್ಟೇಟ್ ನಲ್ಲಿ ಬಳಿಸಿಕೊಂಡಿದ್ದಾರೆ. ನಿರಾಣಿ ಕೂಡ ಈಗ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.  ಆರಂಭದಲ್ಲಿ ಸುಮ್ಮನಿದ್ದ ಮುರುಗೇಶ ನಿರಾಣಿ, ನಂತರದ ವರ್ಷಗಳಲ್ಲಿ ತಮ್ಮ ಹೆಸರು ಬಳಸಲಾಗಿದೆ ಎಂದು ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಹಕಾರಿ ಸಂಘಗಳ ಸಹಾಯಕ ನಿರ್ದೇಶಕ ಎಸ್. ಆರ್. ನಾಯಕ, ಈ ಶ್ರೀ ಮುರುಗೇಶ ನಿರಾಣಿ ಸೌಹಾರ್ಧ ಸಹಕಾರಿ ನಿಯಮಿತ 2009ರಲ್ಲಿ ಆರಂಭವಾಗಿತ್ತು. ಐದಾರು ವರ್ಷಗಳ ಹಿಂದೆ ಇದು ಎಸ್ ಎಂ ಎನ್​​ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಎಂದು ಹೆಸರು ಬದಲಾಗಿದೆ. ಈಗ ಈ ಸೌಹಾರ್ಧ ಸೂಪರ್ ಸೀಡ್ ಆಗಿದೆ.  ಅದಕ್ಕೆ ಆಡಳಿತ ಅಧಿಕಾರಿ ಆಯ್ಕೆ ಮಾಡಲಾಗಿದೆ. ಈ ಸೌಹಾರ್ದದಲ್ಲಿ ಠೇವಣಿದಾರರ ಹಣವನ್ನು ಬೇರೆಯವರಿಗೆ ಸಾಲ ನೀಡಲಾಗಿದೆ. ಸಾಲದ ಹಣ ರಿಕವರಿ ಆದರೆ ಠೇವಣಿದಾರರಿಗೆ ಹಣ ವಾಪಸ್ ಕೊಡಬಹುದು. 10 ವರ್ಷಗಳ ಹಿಂದೆ ಸೌಹಾರ್ದ ಆರಂಭಿಸಲಾಗಿತ್ತು. 10 ವರ್ಷ ವ್ಯವಹಾರ ಸರಿಯಾಗಿಯೇ ಇತ್ತು.  ಎಲ್ಲ ಆಡಿಟ್ ಕೂಡ ಆಗಿದೆ.  ಕೊನೆಯ ಘಳಿಗೆಯಲ್ಲಿ ಯಾಕೆ ಹೀಗಾಯ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.ತಾವು ನಡೆಸಿದ ತನಿಖೆಯಲ್ಲಿ ಈ ಸೌಹಾರ್ಧ ಸಹಕಾರಿ ಸಂಸ್ಥೆಯ ಹಿಂದಿನ ಆಡಳಿತ ಮಂಡಳಿ ಸಾಲ ನೀಡುವ ಪ್ರಕ್ರಿಯೆಯಲ್ಲಿ ವಿಫಲರಾಗಿದ್ದಾರೆ.  ರಿಕವರಿ ವಿಷಯದಲ್ಲಿ ಫೇಲ್ ಆಗಿದ್ದಾರೆ. ಅದನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿದರೆ ಪೂರ್ಣ ಹಣ ವಸೂಲಿ ಮಾಡಬಹುದು. ಠೇವಣಿದಾರರಿಗೂ ಹಣ ನೀಡಬಹುದು. ಸೌಹಾರ್ಧದಲ್ಲಿ ರೂ. 61 ಕೋ. ಠೇವಣಿ ಇದೆ. ಆದರೆ, 64 ಕೋ, ರೂ ಸಾಲ ನೀಡಲಾಗಿದ್ದು, ವಸೂಲಿ ಬಾಕಿ ಇದೆ.  ಠೇವಣಿಗಿಂತಲೂ ಸಾಲ ನೀಡಿದ್ದು ಹೆಚ್ಚಾಗಿದೆ. ಎಲ್ಲ ಸಾಲ ವಸೂಲಿಯಾದರೆ ಠೇವಣಿದಾರರಿಗೆ ಹಣ ಮರಳಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿ ವಿಭಜನೆ ಆಯಿತು ; ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿ ವಿಭಜನೆ ಯಾವಾಗ ?

ಈಗ ಮುರಗೇಶ ನಿರಾಣಿಗೂ ಈ ಸೌಹಾರ್ಧ ಸಹಕಾರಿಗೂ ಸಂಬಂಧವಿಲ್ಲ. ಈ ಸಂಸ್ಥೆಯ ಆಡಳಿತಾಧಿಕಾರಿ ನಿರ್ವಹಿಸಿಕೊಂಡು ಹೋಗಲು ಮುಂದೆ ಬರಬೇಕು ಅಥವಾ ಸಮಾಪನಾಧಿಕಾರಿ ನೇಮಕವಾದರೆ ಸಾಲ ವಸೂಲಾತಿ ಪ್ರಕ್ರಿಯೆ ನಡೆಯುತ್ತದೆ. ಸಾಲ ವಸೂಲಾತಿ ಹಣ ಬರುವವರೆಗೂ ಠೇವಣಿದಾರರು ಸಹನೆಯಿಂದ ಇರಬೇಕು. ಈಗಾಗಲೇ ಈ ಕುರಿತು ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಎಂದು ವಿಜಯಪುರ ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ಎಸ್. ಆರ್. ನಾಯಕ ತಿಳಿಸಿದ್ದಾರೆ.

ಒಟ್ಟಾರೆ, ಈಗ ಹೆಚ್ಚಿನ ಬಡ್ಡಿಹಣದ ಆಸೆಗಾಗಿ ಹಿರಿಯ ಜೀವಗಳು ಇಟ್ಟಿದ್ದ ಠೇವಣಿಗೆ ಬಡ್ಡಿಯೂ ಇಲ್ಲದೇ, ಮೂಲ ಅಸಲೂ ಬಾರದೆ ಪರದಾಡುವಂತಾಗಿದೆ. ಸರಕಾರ ಈ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿ ಠೇವಣಿದಾರರಿಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಹಣ ಒದಗಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.
Published by: G Hareeshkumar
First published: November 26, 2020, 4:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories