news18-kannada Updated:January 22, 2021, 4:15 PM IST
ಮೃತ ದೇಹವನ್ನು ಸಾಗಿಸುತ್ತಿರುವ ಪೊಲೀಸರು.
ಗೋಕರ್ಣ: ಪ್ರವಾಸಿಗರನ್ನು ಆಕರ್ಷಿಸುವ ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಇದೀಗ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಸ್ತಬ್ಧವಾಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಲಾಕ್ಡೌನ್ ತೆರವಿನ ನಂತರ ಪುನರಾರಂಭವಾಗಿದ್ದು, ಇಲ್ಲಿಯವರೆಗೆ ಹತ್ತಕ್ಕೂ ಅಧಿಕ ಪ್ರವಾಸಿಗರು ಕಡಲತೀರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮುರಡೇಶ್ವರ ಹಾಗೂ ಗೋಕರ್ಣದ ಮುಖ್ಯ ಕಡಲತೀರ, ಕುಡ್ಲೆ ಕಡಲತೀರದಲ್ಲಿ ಪ್ರವಾಸಿಗರು ಈಜಲು ತೆರಳಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಹೊರ ಊರುಗಳಿಂದ ಬರುವ ಪ್ರವಾಸಿಗರು ಕಡಲತೀರದಲ್ಲಿ ಆಳದ ಅರಿವಿಲ್ಲದೇ ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ತಮ್ಮ ಪ್ರಾಣವನ್ನ ಬಿಡುತ್ತಿದ್ದಾರೆ.
ಈ ಹಿಂದೆ ಪ್ರವಾಸಿಗರು ಕಡಲ ತೀರದಲ್ಲಿ ಮುಳುಗಿ ಸಾವನ್ನಪ್ಪುವುದನ್ನ ತಡೆಯಲು ಲೈಫ್ ಗಾರ್ಡ್ ಗಳನ್ನ ನೇಮಕ ಮಾಡಲಾಗಿತ್ತು. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಹೊನ್ನಾವರ ಹಾಗೂ ಮುರಡೇಶ್ವರದ ಕಡಲ ತೀರದಲ್ಲಿ ಜೊತೆಗೆ ಕೆಲ ಫಾಲ್ಸ್ ಗಳಲ್ಲಿ ಸೇರಿ ಒಟ್ಟು 24 ಲೈಫ್ ಗಾರ್ಡರ್ ಗಳನ್ನ ನೇಮಿಸಿಕೊಳ್ಳಲಾಗಿತ್ತು. ಅಲ್ಲದೇ ಕಡಲ ತೀರದಲ್ಲಿ ಟೂರಿಸ್ಟ್ ಮಿತ್ರಗಳನ್ನ ನೇಮಿಸಿ ಪ್ರವಾಸಿಗರು ಆಳ ಸಮುದ್ರಕ್ಕೆ ಈಜಲು ತೆರಳದಂತೆ ಜಾಗೃತ ಮೂಡಿಸುವ ಕಾರ್ಯವನ್ನ ಮಾಡಲಾಗುತ್ತಿತ್ತು. ಇನ್ನು ಮುಳುಗುತ್ತಿದ್ದ ಹಲವು ಪ್ರವಾಸಿಗರನ್ನ ಲೈಫ್ ಗಾರ್ಡ್ ಗಳು ರಕ್ಷಣೆ ಮಾಡುತ್ತಿದ್ದರಿಂದ ಪ್ರವಾಸಿಗರ ಸಾವಿನ ಸಂಖ್ಯೆ ಸಹ ಕಡಿಮೆಯಾಗಿತ್ತು.
ಆದರೆ, ಸದ್ಯ ಲಾಕ್ಡೌನ್ ನಂತರ ಪ್ರವಾಸಿಗರು ಕಡಲತೀರಗಳತ್ತ ಹೆಚ್ಚಿನ ಸಂಖ್ಯೆಯೇ ಆಗಮಿಸುತ್ತಿದ್ದು, ಸಮುದ್ರಕ್ಕೆ ಈಜಲು ಇಳಿಯುವ ಪ್ರವಾಸಿಗರು ನೀರಿನ ಆಳದ ಅರಿವಿಲ್ಲದೇ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಹಲವರು ಈಜಲು ತೆರಳಿ ಪ್ರಾಣ ಬಿಟ್ಟಿದ್ದಾರೆ. ಕಡಲ ತೀರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದು ಪ್ರವಾಸಿಗರಿಗೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಎದುರಾಗುತ್ತಿದೆ.
ಲಾಕ್ಡೌನ್ ವೇಳೆ ಕಡಲತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇರದೇ ಇರುವ ಹಿನ್ನಲೆಯಲ್ಲಿ ಲೈಫ್ ಗಾರ್ಡ್ ಗಳಿಗೆ ಅರ್ಧ ವೇತನ ನೀಡಲಾಗಿತ್ತು. ಲಾಕ್ಡೌನ್ ತೆರವಾದ ನಂತರ ಹಲವೆಡೆ ಲೈಫ್ ಗಾರ್ಡ್ ಗಳು ತಮ್ಮ ಕೆಲಸವನ್ನ ಬಿಟ್ಟಿದ್ದಾರೆ. ಇನ್ನು ಜಿಲ್ಲಾಡಳಿತ ಗೋಕರ್ಣ ಹಾಗೂ ಮುರಡೇಶ್ವರದಲ್ಲಿ ಜಲಸಾಹಸ ಕ್ರೀಡೆ ಟೆಂಡರ್ ಪಡೆದವರೇ ಲೈಫ್ ಗಾರ್ಡ್ ಗಳನ್ನು ನೇಮಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಇದರನ್ವಯ ಕಡಲತೀರದಲ್ಲಿ ಕೆಲ ಲೈಫ್ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದರು ಇದರ ನಡುವೆ ಪ್ರವಾಸಿಗರು ಸಾವನ್ನಪ್ಪುತ್ತಿದ್ದು, ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ಹಿನ್ನಲೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ: ಪಕ್ಷಾಂತರವೇ ಮಾರಕವಾಯ್ತಾ ಬಂಗಾಳ ಬಿಜೆಪಿಗೆ? ಅಧಿಕಾರಕ್ಕಾಗಿ ಮೂಲ-ವಲಸಿಗರ ನಡುವೆ ಮಾರಾಮಾರಿ, ವಾಹನಗಳಿಗೆ ಬೆಂಕಿ!
ಲೈಫ್ ಗಾರ್ಡ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ:ಜಿಲ್ಲೆಯ ಮುರಡೇಶ್ವರ ಹಾಗೂ ಗೋಕರ್ಣದ ಕಡಲತೀರದಲ್ಲಿ ಜಲಸಾಹಸ ಕ್ರೀಡೆ ನಡೆಸುವವರೇ ಲೈಫ್ ಗಾರ್ಡರ್ ಗಳನ್ನ ನೇಮಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ಅದರನ್ವಯ ನೇಮಕ ಮಾಡಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ.
ಈ ಹಿಂದೆ ತರಬೇತಿ ಪಡೆದ ಲೈಫ್ ಗಾರ್ಡರ್ ಗಳನ್ನೇ ನೇಮಕ ಮಾಡಿಕೊಳ್ಳುವಂತೆ ಜಲಸಾಹಸ ಕ್ರೀಡೆಗಳ ಟೆಂಡರ್ ಪಡೆದವರಿಗೆ ತಿಳಿಸಲಾಗಿತ್ತು. ಕೆಲವರು ಹೆಚ್ಚಿನ ವೇತನ ಡಿಮ್ಯಾಂಡ್ ಮಾಡಿದ್ದು, ಅನಿವಾರ್ಯವಾಗಿ ಬೇರೆಯವರನ್ನ ನೇಮಕ ಮಾಡಿಕೊಳ್ಳಲಾಗಿದೆ. ಗೋಕರ್ಣದಲ್ಲಿ ಗುರುವಾರ ನಡೆದ ಘಟನೆಯಲ್ಲಿ ಇಬ್ಬರು ಪ್ರವಾಸಿಗರನ್ನ ಲೈಫ್ ಗಾರ್ಡ್ ಗಳೇ ರಕ್ಷಣೆ ಮಾಡಿದ್ದಾರೆ. ಪ್ರವಾಸಿಗರ ರಕ್ಷಣೆಗೆ ಇಲಾಖೆ ಇನ್ನಷ್ಟು ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
Published by:
MAshok Kumar
First published:
January 22, 2021, 4:15 PM IST