ಆಫ್ರಿಕಾ ಪ್ರಜೆ ಹಾಗೂ ಬೆಂಗಳೂರು ನಗರದ ಕೆ.ಆರ್ ಪುರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಜಾನ್ ಎಂಬಾತನ ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿ ಅವನ ಸ್ನೇಹಿತರು ಜೆಸಿ ನಗರ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಮಧ್ಯಾಹ್ನ ಠಾಣೆಯ ಎದುರು ಪ್ರತಿಭಟನೆಗೆ ಮುಂದಾದರು.
ಈ ವೇಳೆ ಪೊಲೀಸರಿಗೂ ಹಾಗೂ ಆಫ್ರಿಕನ್ ಪ್ರಜೆಗಳಿಗೂ ಘರ್ಷಣೆ ಉಂಟಾಗಿದ್ದು, ಘಟನೆ ಸಂಬಂಧ ಎಂಟು ಜನ ವಿದೇಶಿಗರ ಬಂಧನ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಮೃತ ವ್ಯಕ್ತಿ ಆಪ್ರಿಕಾದ ಕಾಂಗೋ ದೇಶದ ಪ್ರಜೆಯಾಗಿದ್ದು, ಡ್ರಗ್ ಫೆಡ್ಲಿಂಗ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗುತ್ತಿತ್ತು. ಅಲ್ಲದೇ ಆತನ ವಿರುದ್ದ ಕೇಸ ಸಹ ದಾಖಲು ಮಾಡಲಾಗಿತ್ತು. ವಿಚಾರಣೆ ವೇಳೆ ಎದೆನೋವು ಎಂದು ಹೇಳಿದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಎದೆನೋವಿನಿಂದ ಈತ ಸಾವನ್ನಪ್ಪಿದ್ದಾನೆ. ಇದನ್ನ ಆಸ್ಪತ್ರೆಯ ವೈದ್ಯರು ಸಹ ದೃಢಪಡಿಸಿದ್ದಾರೆ. ಪ್ರಸ್ತುತ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು, ಸಿಐಡಿ ಅಧಿಕಾರಿಗಳು ಬಂದು ಮಾಹಿತಿ ಕಲೆಹಾಕಿದ್ದಾರೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಪೊಲೀಸರ ಮೇಲೆ ಹಲ್ಲೆ, ಲಾಠಿ ಚಾರ್ಜ್
ಬಂಧಿತ ಜಾನ್ ಬಿಡುಗಡೆಗೊಳಿಸಲು ಪೊಲೀಸರು 30 ಸಾವಿರ ಹಣ ಬೇಡಿಕೆ ಇಟ್ಟಿದ್ದರು, ಅದನ್ನು ಕೊಡಲು ಒಪ್ಪದ ಕಾರಣ ಈ ರೀತಿ ಘಟನೆ ನಡೆದಿದೆ ಎಂದು ಪೊಲೀಸರ ವಿರುದ್ದವೇ ಆರೋಪಿಸಿದ್ದ ಆಫ್ರಿಕನ್ ಪ್ರಜೆಗಳು, ಇನ್ಸ್ ಪೆಕ್ಟರ್ ವಿರುದ್ದ ಘೋಷಣೆ ಕೂಗಿದ್ದಾರೆ. ಈ ಸಾವಿಗೆ ಪೊಲೀಸರೇ ಕಾರಣವಾಗಿದ್ದು, ಜಾನ್ನನ್ನು ಬಂಧಿಸಿದ ಪೊಲೀಸರು ಸ್ಥಳಕ್ಕೆ ಬರುವಂತೆ ಗಲಾಟೆ ನಡೆಸಿದ್ದಾರೆ.
ಇದೇ ವೇಳೆ ಜಾನ್ ಸ್ನೇಹಿತರು ಹಾಗೂ ಪೊಲೀಸರ ನಡುವೆ ತಳ್ಳಾಟ ಉಂಟಾಗಿದೆ, ಜೆಸಿ ನಗರ ಸಬ್ಇನ್ಸ್ಪೆಕ್ಟರ್ ಲತಾ ಅವರನ್ನು ತಳ್ಳಿದ್ದರಿಂದ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ, ಆದ ಕಾರಣ ಆಫ್ರಿಕಾ ಪ್ರಜೆಗಳು ಗಾಯಗೊಂಡಿದ್ದಾರೆ, ಆನಂತರ ಪೊಲೀಸರ ಲಾಠಿ ಕಿತ್ತುಕೊಂಡ ಆಫ್ರಿಕನ್ ಪ್ರಜೆಗಳು, ಕಿತ್ತುಕೊಂಡ ಲಾಠಿಯನ್ನ ಮತ್ತೆ ಮರಳಿ ನೀಡಿದ್ದಾರೆ.
ಬಳಿಕ ಠಾಣೆಯ ಮುಂದೆ ರಾದ್ದಾಂತ ನಡೆಸಿದವರನ್ನು ಬಂಧಿಸಿದ್ದು, ಬಂಧನವಾಗಿರುವವರು ಸಹ ಫೆಡ್ಲರ್ಗಳೆಂದು ಪೊಲೀಸರು ಹೇಳಿದ್ದಾರೆ. ಬಂಧಿತರನ್ನ ವೈದ್ಯಕೀಯ ಪರೀಕ್ಷೆಗೆ ಕಳುಗಿಸಿಲಾಗಿದ್ದು, ಅವರ ಮುಖಂಡರ ಜೊತೆ ಮಾತನಾಡಿದರು ಕೇಳದೆ ಗಲಾಟೆ ಮಾಡಲು ಪ್ರಾರಂಭಿಸಿದರು. ಪೊಲೀಸರ ಮೇಲೆ ಹಲ್ಲೆ ಗೆ ಯತ್ನ ಮಾಡಿದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಲಾಠಿ ಚಾರ್ಜ್ ವೇಳೆ ಗಾಯಗೊಂಡ ಆಫ್ರಿಕನ್ ಪ್ರಜೆಗಳನ್ನು ಆಟೋದಲ್ಲಿ ತುಂಬಿಕೊಂಡು ಕೊಂಡು ವೈದ್ಯಕೀಯ ಪರೀಕ್ಷೆಗೆ ಎಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆ ನಂತರ ಸೌಮೆಂದು ಮುಖರ್ಜಿ ಅವರು ಜೆಸಿ ನಗರ ಠಾಣೆಗೆ ಭೇಟಿ ಕೊಟ್ಟಿದ್ದು, ಘಟನೆಯ ವಿವರ ಪಡೆದಿದ್ದಾರೆ. ಸ್ಥಳಕ್ಕೆ ಹೆಚ್ಚುವರಿಯಾಗಿ ಪೊಲೀಸ್ ಪೋರ್ಸ್ ಕರೆಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಠಾಣೆ ಎದುರು ನಡೆದ ಗಲಾಟೆಯ ಬಗ್ಗೆ ಎಫ್ಐಆರ್ ಹಾಕಲಾಗಿದ್ದು, ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ, ಇದು ತುಂಬಾ ಸೂಕ್ಷ್ಮ ವಿಚಾರ ಆದ ಕಾರಣ 8 ಜನರನ್ನ ವಶಕ್ಕೆ ಪಡೆದಿದ್ದೇವೆ. ಮರಣ ಹೊಂದಿದ ವ್ಯಕ್ತಿಯ ಗುರುತು ಪೊಲೀಸರಿಗೆ ಗೊತ್ತಾಗಿದ್ದು ಮಧ್ಯಾಹ್ನ, ಗಲಾಟೆ ಮಾಡಿದವರ ಹಿನ್ನೆಲೆ ಪರಿಶೀಲಿಸಲಾಗುತ್ತಿದ್ದು, ಅವರುಗಳು ಮಾಡಿರುವ ಆರೋಪ ಸುಳ್ಳು. ಭಾನುವಾರ ರಾತ್ರಿ 2:30 ಮೃತ ಜಾನ್ ಬಂಧನವಾಯಿತು ಬೆಳಗ್ಗೆ 5:30 ಕ್ಕೆ ಆಸ್ಪತ್ರೆಗೆ ಸೇರಿಸಲಾಯಿತು. ಮೃತ ವ್ಯಕ್ತಿಯ ಕಡೆಯಿಂದ 5 ಗ್ರಾಂ ಎಂ.ಡಿ.ಎಂ ಜಪ್ತಿ ಮಾಡಲಾಗಿದ್ದು, ಎನ್.ಹೆಚ್.ಆರ್.ಸಿ ಗೈಡ್ ಲೈನ್ಸ್ ಪ್ರಕಾರವೇ ನಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ ಇದೇ ವೇಳೆ ತಿಳಿಸಿದ್ದಾರೆ.
ಮೃತ ವ್ಯಕ್ತಿ ಕೂಡ ಪೆಡ್ಲರ್ ಆಗಿದ್ದು, 176 ಸಿಆರ್ಪಿಸಿ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದನ್ನ ನಾವು ಕಸ್ಟೋಡಿಯಲ್ ಡೆತ್ ಅಂತ ಪರಿಗಣಿಸಿದ್ದೇವೆ.. ಇದರ ಬಗ್ಗೆ ಸಿಐಡಿ ಮತ್ತು ಮಾನವ ಹಕ್ಕು ಆಯೋಗಕ್ಕೂ ಮಾಹಿತಿ ನೀಡಿದ್ದೇವೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನರ್ ಕಮಲ್ ಪಂತ್ ಹೇಳಿಕೆ ನೀಡಿದ್ದು, ಮಾಹಿತಿ ಕೊರತೆಯಿಂದ ಗಲಾಟೆ ನಡೆದಿದೆ. ಅಡಿಷನಲ್ ಸಿಪಿ ಸೌಮೇಂದು ಮುಖರ್ಜಿ ಸ್ಥಳಕ್ಕೆ ಹೋಗಿದ್ದು, ಪೊಲೀಸರ ಮೇಲಿನ ಹಲ್ಲೆ ಬಗ್ಗೆ ಮಾನವ ಹಕ್ಕು ಆಯೋಗ ಹಾಗೂ ಸಿಐಡಿಗೂ ಮಾಹಿತಿ ರವಾನಿಸಿದ್ದೇವೆ. ಅವರ ಮೇಲೆ ಕಾನೂನಿನ ಕ್ರಮ ಜರುಗಿಸಿ ಎಂದು ತಿಳಿಸಿದ್ದೇನೆ. ದೊಡ್ಡ ಮಟ್ಟದ ಗಲಾಟೆ ಏನೂ ಆಗಿಲ್ಲ, ನಾನು ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಆಫ್ರಿಕಾ ದೇಶದ ರಾಯಭಾರಿ ಜೆಸಿ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಕಾಂಗೋ ದೇಶದ ರಾಯಭಾರಿ ಕಚೇರಿಯ ಅಧಿಕಾರಿ ಮೋಹನ್ ಸುರೇಶ್ ಇದೇ ವೇಳೆ ಚರ್ಚೆ ನಡೆಸಿದ್ದು, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿರಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಮಹಿಳಾ ಹಾಕಿ ತಂಡಕ್ಕೆ ವಿಶೇಷ ಸಂದೇಶ ನೀಡಿದ ಹಳೆಯ ಕೋಚ್ ಕಬೀರ್ ಖಾನ್ ಅಲಿಯಾಸ್ ಶಾರುಖ್ ಖಾನ್!!
ಸಿಐಡಿ ಅಧಿಕಾರಿಗಳು ಸಹ ಜೆಸಿ ನಗರ ಠಾಣೆಯಲ್ಲಿ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ