news18-kannada Updated:January 5, 2021, 8:29 PM IST
ಮಡಿಕೇರಿಯ ಬಾಲಭವನದಲ್ಲಿ ಮಂಗಳವಾರ ನಡೆದ ರಾಜ್ಯ ಬೆಳೆಗಾರರ ಒಕ್ಕೂಟದ ಮಹಾಸಭೆ.
ಕೊಡಗು : ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಹಾಗೂ ಮಲೆನಾಡು ಭಾಗದಲ್ಲಿ ಆನೆಗಳ ದಾಳಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟವು ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ. ಮಡಿಕೇರಿಯ ಬಾಲಭವನದಲ್ಲಿ ಮಂಗಳವಾರ ನಡೆದ ರಾಜ್ಯ ಬೆಳೆಗಾರರ ಒಕ್ಕೂಟದ ಮಹಾಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೇರಳದ ಮಾದರಿಯಲ್ಲಿ ವೈಜ್ಞಾನಿಕವಾಗಿ ಸರ್ವೇ ಕಾರ್ಯ ನಡೆಸದೇ ಎಲ್ಲೋ ಒಂದೆಡೆ ಕುಳಿತು ಸರ್ವೇ ಮಾಡಿರುವುದಾಗಿ ವರದಿ ನೀಡಿದ ಪರಿಣಾಮವಾಗಿ ಇಂದು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಲಕ್ಷಾಂತರ ರೈತರ ಸ್ಥಿತಿ ಡೋಲಾಯಮಾನವಾಗಿದೆ ಎಂದು ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಕಸ್ತೂರಿ ರಂಗನ್ ವರದಿಯಲ್ಲಿ ಬಫರ್ ಝೋನ್ ನಿಂದಾಗಿ ರಾಜ್ಯದ ಮಲೆನಾಡು ಭಾಗದ ಲಕ್ಷಾಂತರ ರೈತರು ಮತ್ತು ಜನರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನ ಮತ್ತೊಮ್ಮೆ ಪರಿಶೀಲಿಸಿ ರಾಜ್ಯದ ರೈತರಿಂದ ನೇರವಾಗಿ ಅಭಿಪ್ರಾಯ ಸಂಗ್ರಹಿಸಿ ವೈಜ್ಞಾನಿಕ ಸರ್ವೇ ಮಾಡಬೇಕು. ಈ ಕುರಿತು ಎನ್ ಜಿಟಿ ಗೂ ಕೂಡ ಮೇಲ್ಮನವಿ ಸಲ್ಲಿಸಿರುವುದಾಗಿಯೂ ಸಭೆಯು ನಿರ್ಧಾರ ತಿಳಿಸಿತು.
ಕೇರಳದಲ್ಲಿ ಕಸ್ತೂರಿ ರಂಗನ್ ವರದಿಗೆ ಜಾರಿಗೆ ಸಂಬಂಧಿಸಿ ವೈಜ್ಞಾನಿಕವಾಗಿ ಸರ್ವೇ ನಡೆಸಲಾಯಿತು. ಇದರಿಂದಾಗಿ ಕೇರಳ ರಾಜ್ಯದಲ್ಲಿದ್ದ 14 ಸಾವಿರ ಚದರ ಕಿಲೋಮೀಟರ್ ಬಫರ್ ಝೋನ್ ಪ್ರದೇಶ ಈಗ ಕೇವಲ 9 ಸಾವಿರ ಚದರ ಕಿಲೋಮೀಟರ್ ತಗ್ಗಿದೆ. ಈ ಕೆಲಸ ರಾಜ್ಯದಲ್ಲೂ ಆಗಬೇಕಾಗಿದೆ ಎಂದು ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ ಆಗ್ರಹಿಸಿದರು.
ಇದನ್ನು ಓದಿ: ಬೆಂಗಳೂರಿನ ಮತ್ತೊಬ್ಬರಲ್ಲಿ ರೂಪಾಂತರಿ ಕೊರೋನಾ ಪತ್ತೆ: 11ಕ್ಕೆ ಏರಿದ ಬ್ರಿಟನ್ ಸೋಂಕಿತರ ಸಂಖ್ಯೆ
ರಾಜ್ಯದ ಮಲೆನಾಡು ಪ್ರದೇಶದಲ್ಲಿ ಆನೆಗಳ ದಾಳಿ ಮಿತಿಮೀರಿದ್ದು ಅಮಾಯಕ ರೈತರು ನಿತ್ಯ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗುತ್ತಿವೆ. ಆದರೆ ಅರಣ್ಯ ಸಚಿವರು ಮಾತ್ರ ಒಂದೇ ಒಂದು ಬಾರಿಯೂ ಇಂತಹ ಘಟನೆಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ. ಆನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವುದನ್ನು ತಪ್ಪಿಸಲು ಶಾಶ್ವತ ಯೋಜನೆಗಳನ್ನು ರೂಪಿಸುವಂತೆ ಅರಣ್ಯ ಇಲಾಖೆ, ಅರಣ್ಯ ಸಚಿವ ಮತ್ತು ಸರ್ಕಾರಕ್ಕೆ ಎಷ್ಟೇ ಮನವಿ ಸಲ್ಲಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ನ್ಯಾಯಾಲಯದ ಮೊರೆ ಹೋಗಿ ಕಾನೂನಾತ್ಮಕ ಹೋರಾಟ ನಡೆಸಲು ಒಕ್ಕೂಟ ನಿರ್ಧರಿಸಿದೆ.
ಇನ್ನು ಕಾಫಿ ಬೆಳೆಗಾರರ ಸ್ಥಿತಿಯಂತು ಶೋಚನೀಯವಾಗಿದೆ. ಇತರೆ ರೈತರಿಗೆ 10 ಹೆಚ್ಪಿ ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವಂತೆ, ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ. ಅಲ್ಲದೆ ಮುಂದಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಮೇಲೆ ಮಹತ್ವದ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಈ ಎಲ್ಲಾ ಗಂಭೀರ ಸಮಸ್ಯೆಗಳನ್ನು ಇಟ್ಟುಕೊಂಡು ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆ ಮತ್ತು ರಾಜ್ಯ ರಾಜಧಾನಿಯಲ್ಲೂ ತೀವ್ರ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟ ನಿರ್ಧರಿಸಿದೆ.
Published by:
HR Ramesh
First published:
January 5, 2021, 8:29 PM IST