ಬಾಗಲಕೋಟೆ: ನಿರ್ಮಾಣ ಹಂತದ ಕಟ್ಟಡದಲ್ಲಿ ತಲೆ ನಜ್ಜುಗುಜ್ಜಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

ಬಾಗಲಕೋಟೆಯ ನವನಗರದ ಕಟ್ಟಡವೊಂದರಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ರಕ್ತದ ಕಲೆ ಒಂದು ಕಡೆ ಹಾಗೂ ಮೃತ ದೇಹ ಮತ್ತೊಂದೆಡೆ ಪತ್ತೆಯಾಗಿದ್ದು ಇದು ಕೊಲೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.

ಬಾಗಲಕೋಟೆಯಲ್ಲಿ ಪತ್ತೆಯಾದ ಮೃತದೇಹ

ಬಾಗಲಕೋಟೆಯಲ್ಲಿ ಪತ್ತೆಯಾದ ಮೃತದೇಹ

  • Share this:
ಬಾಗಲಕೋಟೆ: ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಯಲ್ಲಿ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಆತನ ತಲೆ ನಜ್ಜುಗುಜ್ಜಾದ ಸ್ಥಿತಿಯಲ್ಲಿರುವುದರಿಂದ ಕುಟುಂಬಸ್ಥರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಬಾಗಲಕೋಟೆ ನಗರದ ವಿದ್ಯಾಗಿರಿಯ ಹದಿನಾರನೇ ಕ್ರಾಸ್ ನಲ್ಲಿನ ಸುಗ್ನಾರಾಮ್ ಕಿಲಕ್ ಎಂಬುವರಿಗೆ ಸೇರಿದ  ನಿರ್ಮಾಣ ಹಂತದ  ಕಟ್ಟಡದ ನೆಲ ಮಹಡಿಯಲ್ಲಿ 38 ವರ್ಷದ ಶೇಖಪ್ಪ ನಡಗಡ್ಡಿ  ಎಂಬ ವ್ಯಕ್ತಿಯ ಶವವಾಗಿ  ಪತ್ತೆಯಾಗಿದ್ದು, ತಲೆ ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದು ಸಾವಿನ ಸುತ್ತ ಅನುಮಾನ ಹುತ್ತ ಬೆಳೆದಿದೆ.

ಶವದ ಸ್ಥಿತಿ ನೋಡಿದರೆ ಎರಡು ದಿನದ ಹಿಂದೆ ಶೇಖಪ್ಪ ಮೃತಪಟ್ಟ ಶಂಕೆಯಿದ್ದು ಗುರುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಹಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಕುಟುಂಬಸ್ಥರು ಕಣ್ಣೀರು ಹಾಕಿ ಗೋಳಾಡಿದರು. ಶವ ಕಂಡ ಕುಟುಂಬಸ್ಥರು ಇದು ಕೊಲೆ ಮೂರು ದಿನದ ಹಿಂದೆ ಊರಲ್ಲಿ ನಡೆದಿದ್ದ ಗಲಾಟೆಯನ್ನು ಉಲ್ಲೇಖಿಸಿದರು. ಈತ ಹಾಗೂ ಮೂರು ಜನರ ಮಧ್ಯೆ ಜಗಳ ನಡೆದಿತ್ತು. ಅಂದು ಜಗಳದ ವೇಳೆ ಅವರು ಕೊಲೆ ಬೆದರಿಕೆ ಹಾಕಿದ್ದರು. ಇದು ಕೊಲೆ ಪ್ರಕರಣವಾಗಿದ್ದು ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಮೃತನ ಸಹೋದರ ಹನುಮಂತ ಒತ್ತಾಯಿಸಿದ್ದಾರೆ.

ಇನ್ನು ಶೇಖಪ್ಪ ಮೂಲತಃ ಬಾಗಲಕೋಟೆ ತಾಲ್ಲೂಕಿನ ನಕ್ಕರಗುಂದಿ ಗ್ರಾಮದ ನಿವಾಸಿ. ಈತನಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಊರಲ್ಲಿ ಕೂಲಿ ಜೊತೆಗೆ ಕುಡಿತದ ಚಟಕ್ಕೊಳಗಾಗಿದ್ದ. ಇದರಿಂದ ಮನೆಯಲ್ಲಿ ಜಗಳ ಮಾಡಿಕೊಂಡು, ಮನೆ ಬಿಟ್ಟು ಮೂರ್ನಾಲ್ಕು ದಿನಗಳ ಹಿಂದೆಯೇ ಬಾಗಲಕೋಟೆ ನಗರಕ್ಕೆ ಬಂದಿದ್ದ. ಅಲ್ಲಲ್ಲಿ ಸಿಕ್ಕ‌ ಹಮಾಲಿ ಕೆಲಸ‌ ಮಾಡುತ್ತಿದ್ದ. ಬಂದ ಹಣದಲ್ಲೆ ಕುಡಿತ, ಊಟ ಉಪಚಾರ ಮಾಡುತ್ತಿದ್ದನು. ಸಮೀಪದಲ್ಲಿದ್ದ ಬಾರ್ ನಲ್ಲಿ ಕುಡಿದು ಬಂದು ರಾತ್ರಿ ಆದರೆ ಈ ನಿರ್ಮಾಣ ಹಂತದ ಕಟ್ಟಡ ನೆಲಮಹಡಿಯಲ್ಲಿ ಮಲಗುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಶ್ರೀರಾಮಕೃಷ್ಣ ಆಶ್ರಮದಿಂದ 4 ತಾಲೂಕುಗಳಲ್ಲಿ ಬಡಮಕ್ಕಳಿಗೆ ದೂರತರಂಗ ಶಿಕ್ಷಣ, ಕೌಶಲ್ಯ ನೈಪುಣ್ಯ ಯೋಜನೆ

ಮಂಗಳವಾರ ಕೆರೂರು ಸಂತೆಯಲ್ಲಿ ಎಮ್ಮೆಯೊಂದನ್ನು ಮಾರಾಟ ಮಾಡಿ ಬಂದಿದ್ದು, ಆ ಹಣದಲ್ಲಿ ಕುಡಿಯುವುದಕ್ಕೆ ಬಳಸುತ್ತಿದ್ದನು ಎನ್ನಲಾಗಿದೆ. ಆದರೆ ಶೇಖಪ್ಪ ಈಗ ಅದೇ ಮಹಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ತಲೆಗೆ ಬಲವಾದ ಏಟು ಬಿದ್ದು ನುಜ್ಜುಗುಜ್ಜಾಗಿದೆ‌. ನಾಯಿ ಮತ್ತಿತರ ಪ್ರಾಣಿಗಳು ಕೂಡ ತಲೆಯನ್ನು ತಿನ್ನಲು ಪ್ರಯತ್ನಿಸಿದ ಶಂಕೆ ವ್ಯಕ್ತವಾಗಿದೆ.

ಎರಡು ದಿನದ ಹಿಂದೆಯೇ ಮೃತಪಟ್ಟಿದ್ದರೂ, ಕುಡಿದು ಮಲಗಿರಬಹುದೆಂದು ಸ್ಥಳೀಯರು ಎಂದುಕೊಂಡಿದ್ದರು. ಇನ್ನು ಸುದ್ದಿ ತಿಳಿದು ನವನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ತಲೆಗೆ ಬಲವಾದ ಏಟು ಬಿದ್ದಿದ್ದು, ಇದು ಕೊಲೆನಾ ಅಥವಾ ಬೇರೆ ಏನಾದರೂ ಆಗಿರಬಹುದಾ ಎಂದು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ನೆಲ ಮಹಡಿಯಲ್ಲಿ ರಕ್ತ ಬಿದ್ದಿದೆ. ಆದ್ರೆ ಆತನ ಮೃತದೇಹ ಇನ್ನೊಂದೆಡೆ ಬಿದ್ದಿದೆ. ಪೊಲೀಸರು ರಕ್ತ ಬಿದ್ದಿರುವ ಮಣ್ಣಿನ ಮಾದರಿ, ಹಾಗೂ ಬೊಂಬು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತನ ಸಂಬಂಧಿಕರು ಕೊಲೆ ಎಂದು ದೂರು ನೀಡಿದ್ದು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸಿದೆ.

ಇದೇ ವೇಳೆ, ಸಹೋದರ ಸಾವು ಕಂಡು ಸಹೋದರ,ಸಹೋದರಿ ,ತಾಯಿ ಕಣ್ಣೀರಿಟ್ಟಿದ್ದಾರೆ. ಒಟ್ಟಿನಲ್ಲಿ ಬಡ ಕೂಲಿ ಕಾರ್ಮಿಕನ ಅನುಮಾನಾಸ್ಪದ‌, ನಿಗೂಢ ಸಾವು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಪೊಲೀಸರಿಂದ ಸಮರ್ಪಕ‌ ತನಿಖೆ ಬಳಿಕವಷ್ಟೇ ಇದರ ಸತ್ಯಾಸತ್ಯತೆ ಹೊರಬರಲಿದೆ.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: