ನಾವು ಮುಂಬೈ ಕರ್ನಾಟಕದವರು; ಮುಂಬೈ ನಮ್ಮದು – ಡಿಸಿಎಂ ಹೇಳಿಕೆಯಿಂದ ಗರಿಗೆದರಿದ ಹೋರಾಟಗಾರರ ಹುಮ್ಮಸ್ಸು

ಪದೇ ಪದೇ ಗಡಿ ವಿವಾದ ಕೆಣಕುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಡಿಸಿಎಂ ಲಕ್ಷ್ಮಣ್ ಸವದಿ ಸಖತ್ ತಿರುಗೇಟು ಕೊಟ್ಟು ಮಹಾರಾಷ್ಟ್ರ ಸರ್ಕಾರ ಸೈಲೆಂಟ್ ಆಗುವಂತೆ ಮಾಡಿದ್ದಾರೆ. ಇದು ಕನ್ನಡ ಹೋರಾಟಗಾರರಲ್ಲಿ ನವಚೈತನ್ಯ ಮೂಡಿಸಿದೆ.

ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ

  • Share this:
ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಬಂದ್ಮೇಲೆ ಪದೇಪದೇ ಗಡಿವಿವಾದ ಕೆಣಕುತ್ತಲೇ ಬರುತ್ತಿದೆ. ಮೊನ್ನೆಯಷ್ಟೇ ಗಡಿವಿವಾದ ಕೆಣಕಿದ್ದ ಮಹಾರಾಷ್ಟ್ರ ಸರ್ಕಾರ ನಿನ್ನೆ ‘ಕರ್ನಾಟಕ ಮಹಾರಾಷ್ಟ್ರ ಸೀಮಾವಾದ ಸಂಘರ್ಷ ಆನಿ ಸಂಕಲ್ಪ’ ಎಂಬ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲದೇ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದ್ದು ಅಲ್ಲಿಯವರೆಗೂ ಬೆಳಗಾವಿ,‌ ಕಾರವಾರ, ನಿಪ್ಪಾಣಿ ನಮ್ಮದು. ಅದನ್ನ ಕೇಂದ್ರಾಡಳಿತ ಪ್ರದೇಶ ಅಂತಾ ಘೋಷಿಸಿ ಅಂತಾ ಆಗ್ರಹಿಸಿದ್ದರು. ಈವರೆಗೂ ಮಹಾರಾಷ್ಟ್ರ ನಾಯಕರು ಎಷ್ಟೇ ಮಾತನಾಡಿದರೂ ಸಹ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಕೂರುತ್ತಿದ್ದ ಬೆಳಗಾವಿ ರಾಜಕೀಯ ನಾಯಕರು ಈಗ ಒಬ್ಬೊಬ್ಬರಾಗಿ ಮಾತನಾಡಲು ಶುರು ಮಾಡಿದ್ದಾರೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಲಕ್ಷ್ಮಣ್ ಸವದಿ, ನಮ್ಮ ಕ್ಷೇತ್ರದ ಮೊದಲ ಶಾಸಕರು ಮುಂಬೈ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಾವು ಮುಂಬೈ ಕರ್ನಾಟಕದರು. ಹೀಗಾಗಿ ಮುಂಬೈ ನಮ್ಮದು. ಮುಂಬೈ ಮೇಲೆ ನಮ್ಮದು ಹಕ್ಕಿದೆ. ಕರ್ನಾಟಕದೊಂದಿಗೆ ವಿಲೀನ ಮಾಡುವವರೆಗೂ ಮುಂಬೈಯನ್ನು ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶ ಅಂತಾ ಘೋಷಿಸಲಿ ಅಂತಾ ತಿರುಗೇಟು ನೀಡಿದ್ದರು.

ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆಯಿಂದ ಮಹಾರಾಷ್ಟ್ರ ಸರ್ಕಾರ ಥಂಡಾ ಹೊಡೆದಿದ್ದು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮಹಾರಾಷ್ಟ್ರ ಬಿಜೆಪಿ ಘಟಕ ಲಕ್ಷ್ಮಣ್ ಸವದಿ ಹೇಳಿಕೆ ಕುರಿತು ತನ್ನ ನಿಲುವು ಸ್ಪಷ್ಟಪಡಿಸಲಿ ಅಂತಾ ಎನ್‌ಸಿಪಿ, ಶಿವಸೇನೆ ಹೇಳಿವೆ. ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ಸವದಿ ಹೇಳಿಕೆಯನ್ನ ಇಟ್ಟುಕೊಂಡು ಟೀಕಾಪ್ರಹಾರ ಮಾಡುವ ಯತ್ನವಾಗಿದೆ.

ಇದನ್ನೂ ಓದಿ: Satish Jarkiholi: ಬೆಳಗಾವಿ ಲೋಕಸಭಾ ಉಪ ಚುನಾವಣೆ; ಸತೀಶ್ ಜಾರಕಿಹೊಳಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ

ಇನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಕುಂದಾನಗರಿ ಬೆಳಗಾವಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರುನಾಡ ಸೇವಕರು ಸಂಘಟನೆ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಪ್ರತಿಕೃತಿ ಮಾಡಿ ಚಪ್ಪಲಿ ಏಟು ನೀಡಿ ಶವಯಾತ್ರೆ ಮಾಡಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಯಾರಪ್ಪಂದ ಏನೈತಿ, ಬೆಳಗಾವಿ ಜೊತೆ ಮುಂಬೈ ಸಹ ನಮ್ದೈತಿ ಎಂದು ಘೋಷಣೆ ಕೂಗಿದರು. ಮುಂಬೈ ನಮ್ದು ಎಂದಿದ್ದ ಡಿಸಿಎಂ ಲಕ್ಷ್ಮಣ್ ಸವದಿಗೆ ಜೈಕಾರ ಕೂಗಿದ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂಇಎಸ್ ಪುಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Anand Singh - ಖಾತೆ ಬಗ್ಗೆ ಅಸಮಾಧಾನವಿಲ್ಲ, ಸಚಿವ ಸ್ಥಾನ ಬಿಟ್ಟುಕೊಡಲೂ ಸಿದ್ಧ; ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ

ಒಟ್ಟಿನಲ್ಲಿ ಪದೇ ಪದೇ ಬೆಳಗಾವಿ ನಮ್ದು ಅಂತಿದ್ದ ಮಹಾರಾಷ್ಟ್ರ ನಾಯಕರಿಗೆ ಮುಂಬೈ ನಮ್ದು ಅಂತಾ ಹೇಳುವ ಮೂಲಕ ಡಿಸಿಎಂ ಲಕ್ಷ್ಮಣ್ ಸವದಿ ಸರಿಯಾದ ಚಾಟಿ ಬೀಸಿದ್ಧಾರೆ. ಸವದಿ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮತ್ತೊಂದೆಡೆ ‌ಮಹಾರಾಷ್ಟ್ರ ಸರ್ಕಾರ ಹೊರ ತಂದಿರುವ ಗಡಿವಿವಾದ ಕುರಿತಾದ ಪುಸ್ತಕ ಬ್ಯಾನ್ ಮಾಡಬೇಕು. ಎಂಇಎಸ್ ಮತ್ತು ಶಿವಸೇನೆಯನ್ನ ನಿಷೇಧಿಸಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ.

ವರದಿ: ಲೋಹಿತ್ ಶಿರೋಳ
Published by:Vijayasarthy SN
First published: