ವಿಜಯಪುರ: ಕೊರೋನಾ ಸಂಕಷ್ಟದ ನಡುವೆಯೂ ಸಾರಿಗೆ ಸಿಬ್ಬಂದಿಯ ವೇತನ ಕಡಿತ ಮಾಡಲೇ ಸಂಪೂರ್ಣ ಸಂಬಳ ನೀಡಿದ ರಾಜ್ಯ ಕರ್ನಾಟಕ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ವಿಜಯಪುರದಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರ್ ಟಿ ಓ ಕಚೇರಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಅನೇಕ ಕಡೆ ಆರ್ ಟಿ ಓ ಕಚೇರಿ, ನೂತನ ಕಟ್ಟಡಗಳ ಬೇಡಿಕೆ ಬಂದಿವೆ. ವಿಜಯಪುರ ಕಚೇರಿ ಆವರಣದಲ್ಲಿ ಸಾಕಷ್ಟು ಜಾಗವಿದೆ. ಇಲ್ಲಿ ಡ್ರೈವಿಂಗ್ ಟ್ರ್ಯಾಕ್ ಮಾಡಲಾಗುವುದು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಎ ಆರ್ ಟಿ ಓ ಕಚೇರಿ ಸ್ಥಾಪಿಸಲಾಗುವುದು. ಈ ಕಚೇರಿಗೆ ಅಧಿವೇಶನದ ನಂತರ ಶಂಕುಸ್ಥಾಪನೆ ಮಾಡಲಾಗುವುದು. ಸಿಂದಗಿಯಲ್ಲಿಯೂ ಎ ಆರ್ ಟಿ ಓ ಕಚೇರಿ ಸ್ಥಾಪಿಸಲಾಗುವುದು. ನಾಗಠಾಣದಲ್ಲಿ 1.50 ಕೋಟಿ ರೂ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕ ಸಾರಿಗೆ ಸಮಸ್ಯೆಯನ್ನು ಸರಿಪಡಿಸುವ ಕನಸಿದೆ. ಕೊರೋನಾ ಸಾಕಷ್ಟು ಸಮಸ್ಯೆ ತಂದಿದೆ. ಸಚಿವನಾದ ನಂತರ ನಾಲ್ಕು ನಿಗಮಗಳ ಪರಾಮರ್ಶೆ ಮಾಡಿದಾಗ ರೂ. 2800 ಕೋಟಿ ನಷ್ಟದಲ್ಲಿತ್ತು. ನಿಗಮಗಳನ್ನು ನಷ್ಟದಿಂದ ಲಾಭದೆಡೆಗೆ ತೆಗೆದುಕೊಂಡು ಹೋಗುತ್ತೇವೆ. ಕೊರೊನಾದಿಂದ ಸಾರಿಗೆ ಇಲಾಖೆಗೆ ರೂ. 4000 ಕೋಟಿ ನಷ್ಟವಾಗಿದೆ. ಕೊರೋನಾ ಸಂದರ್ಭದಲ್ಲಿಯೂ 1.30 ಲಕ್ಷ ಸಿಬ್ಬಂದಿಗೆ ಸಂಬಳ ಕಡಿತ ಮಾಡದೇ ರೂ. 1800 ಕೋಟಿ ಹಣ ಪಡೆದು ಸಂಪೂರ್ಣ ಸಂಬಳ ನೀಡಿದ್ದೇವೆ. ಕರ್ನಾಟಕದ ಸಾರಿಗೆ ಇಲಾಖೆ ರೀತಿ ಬೇರೆ ಯಾವ ರಾಜ್ಯದಲ್ಲಿಯೂ ಸಾಧನೆ ಮಾಡಿಲ್ಲ. ರಾಜ್ಯ ಸಾರಿಗೆ ಇಲಾಖೆ 7 ಬಾರಿ ಪ್ರಶಸ್ತಿ ಪಡೆದಿದೆ. ಸಾರಿಗೆ ಇಲಾಖೆಯ 1.30 ಲಕ್ಷ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಇದಕ್ಕೆ ಕಾರಣ. ಇಲಾಖೆ ಕಷ್ಟದಲ್ಲಿದ್ದರೂ ಮುಂದಿನ ದಿನಗಳಲ್ಲಿ ವೇತನ ಕಡಿತ ಮಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಜಿಟಿಡಿ, ಸಂದೇಶ ನಾಗರಾಜ್ರನ್ನ ಜೆಡಿಎಸ್ನಿಂದ ಉಚ್ಛಾಟನೆ ಮಾಡುವಂತೆ ಸ್ಥಳೀಯ ಮುಖಂಡರ ಆಗ್ರಹ
ಈಗ ಉಂಟಾಗಿರುವ ರೂ. 4000 ಕೋಟಿ ಹಾನಿಯನ್ನು ಸರಿದೂಗಿಸುತ್ತೇವೆ. ಈಗ ಸಾರಿಗೆ ಇಲಾಖೆ ಮೂಲಕ ಕಾರ್ಗೋ ಸೇವೆ ಆರಂಭಿಸುತ್ತಿದ್ದೇವೆ. ಇದನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಇದರಿಂದಾಗಿ ಗ್ರಾಮೀಣ ಭಾಗದಲ್ಲಿಯೂ ಜನರಿಗೆ ಉತ್ತಮ ಸೇವೆ ಲಭ್ಯವಾಗಲಿದೆ. ಅಷ್ಟೇ ಅಲ್ಲ, ಪ್ರತಿವರ್ಷ ಇಲಾಖೆಗೆ ರೂ. 200 ಕೋಟಿ ಹೆಚ್ಚುವರಿ ಆದಾಯ ಬರಲಿದೆ ಎಂದು ಅವರು ಹೇಳಿದರು.
ಈಗ ಆನ್ಲೈನ್ ಮೂಲಕ ಬಸ್ ಪಾಸ್ ನೀಡಲಾಗುತ್ತಿದೆ. ಕೆಲವು ತಾಂತ್ರಿಕ ಕಾರಣದಿಂದ ಬಸ್ ಪಾಸ್ ಸಮಸ್ಯೆಯಾಗಿದೆ. ಆದರೆ, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಹಳೆಯ ವ್ಯವಸ್ಥೆ ಮಾರ್ಚ್ವರೆಗೆ ಮುಂದುವರೆಯಲಿದೆ. ಸಾರಿಗೆ ನಿಗಮದ ಎಲ್ಲ ನಾಲ್ಕೂ ನಿಗಮಗಳಲ್ಲಿ ವಿಜಯಪುರ ಜಿಲ್ಲೆ ಅತೀ ಹೆಚ್ಚು ಆದಾಯ ತರುತ್ತಿದೆ. ಇಲ್ಲಿನ ಬಹುತೇಕ ಜನ ಸರಕಾರಿ ಬಸ್ಸುಗಳಲ್ಲಿ ಸಂಚರಿಸುತ್ತಾರೆ ಎಂದು ಸಚಿವರು ವಿಜಯಪುರ ಜಿಲ್ಲೆಯ ಜನರನ್ನು ಕೊಂಡಾಡಿದರು.
ತೆರಿಗೆ ವಿಚಾರದಲ್ಲಿಯೂ ವಿಜಯಪುರ ಜಿಲ್ಲೆಯಲ್ಲಿ ಶೇ. 101 ತೆರಿಗೆ ಸಂಗ್ರಹವಾಗಿದೆ. ವಿಜಯಪುರ ಜಿಲ್ಲೆಗೆ ರೂ. 102.74 ಕೋ. ರಾಜಸ್ವ ಸಂಗ್ರಹ ಗುರಿ ನೀಡಲಾಗಿತ್ತು. ಆದರೆ, ಇಲ್ಲಿನ ಅಧಿಕಾರಿಗಳು ರೂ. 104.28 ಕೋ. ಅಂದರೆ ಶೇ. 101.50 ರಾಜಸ್ವ ಸಂಗ್ರಹಿಸುವ ಮೂಲಕ ತೆರಿಗೆ ಸಂಗ್ರಹದಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ ಲಕ್ಷ್ಮಣ ಸವದಿ ವಿಜಯಪುರ ಜಿಲ್ಲೆಗೆ ಮತ್ತಷ್ಟು ಹೊಸ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಬೆಳಗಾವಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ; ಪ್ರಮೋದ ಮುತಾಲಿಕ್
ಇದೇ ವೇಳೆ, ಬೆಂಗಳೂರಿನಲ್ಲಿ ಈಗ ಎಲೆಕ್ಟ್ರಿಕ್ ಬಸ್ ಸೇವೆ ಆರಂಭವಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ಎಲೆಕ್ಟ್ರಿಕ್ ಮಾರ್ಜ್ ನಂತರ ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡುವ ಯೋಚನೆ ಇದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಎನ್ ಇ ಕೆ ಆರ್ ಟಿ ಸಿ ನಿರ್ದೇಶಕ ಮಲ್ಲಿಕಾರ್ಜುನ ಗುರುಲಿಂಗಪ್ಪ ತಡಕಲ್ಲ, ಸಾರಿಗೆ ಇಲಾಖೆ ಆಯುಕ್ತ ಎನ್. ಶಿವಕುಮಾರ, ಕಲಬುರಗಿ ಎನ್ ಇ ಕೆ ಆರ್ ಟಿ ಸಿ ಎಂ. ಡಿ. ಕುರ್ಮಾರಾವ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಅನುಪಮ ಅಗ್ರವಾಲ, ಧಾರವಾಡ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ಸಾರಿಗೆ ಜಂಟಿ ಆಯುಕ್ತೆ ಎಂ. ಶೋಭಾ, ವಿಜಯಪುರ ಆರ್ ಟಿ ಓ ಆನಂದ ಪಾರ್ಥನಳ್ಳಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶಾಸಕ ಯತ್ನಾಳ ಪುತ್ರ ರಾಮನಗೌಡ ಬಿ. ಪಾಟೀಲ ಯತ್ನಾಳ ಸೇರಿದಂತೆ ನಾನಾ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ