ಬಾಗಲಕೋಟೆ: ಕಟ್ಟಿಕೆರೆ ಗುಡ್ಡ ಕೊರೆದು ರಸ್ತೆ ತಿರುವು ಕಾಮಗಾರಿ; ಶೀಘ್ರ ಪೂರ್ಣಗೊಳಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ಸೂಚನೆ
ಹೆಚ್ಚು ವಾಹನಗಳು ಹಾಗೂ ಕಬ್ಬಿನ ಟ್ಯಾಕ್ಟರ್ಗಳು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕಾಗಿ ಕಟ್ಟಿಕೆರೆ ಬಳಿಯಿರುವ ಗುಡ್ಡವನ್ನು 4.5 ಮೀಟರ್ ಆಳ ಕೊರೆದು, 530 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು ಡಿಸಿಎಂ ಕಾರಜೋಳ.
ಬಾಗಲಕೋಟೆ(ಸೆ.06): ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿ ಮಾರ್ಗದ ಜಮಖಂಡಿ ನಗರದ ಹೊರವಲಯದ ಕಟ್ಟಿಕೆರೆ ಬಳಿಯ ಗುಡ್ಡದ ತಿರುವು ರಸ್ತೆ ಕಾಮಗಾರಿಯನ್ನು ಡಿಸಿಎಂ ಗೋವಿಂದ ಕಾರಜೋಳ ಪರಿಶೀಲಿಸಿದರು. ಕಾಮಗಾರಿ ಗುಣಮಟ್ಟದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಹೆಚ್ಚು ವಾಹನಗಳು ಹಾಗೂ ಕಬ್ಬಿನ ಟ್ಯಾಕ್ಟರ್ಗಳು ಈ ರಸ್ತೆಯಲ್ಲಿ ಸಂಚರಿಸಲು ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕಾಗಿ ಕಟ್ಟಿಕೆರೆ ಬಳಿಯಿರುವ ಗುಡ್ಡವನ್ನು 4.5 ಮೀಟರ್ ಆಳ ಕೊರೆದು, 530 ಮೀಟರ್ ಉದ್ದ ಹಾಗೂ 18 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆಯ ವಲಯ ರಸ್ತೆ ಮತ್ತು ಆಸ್ತಿ ನಿರ್ವಹಣಾ ಕೇಂದ್ರ(ಪ್ರಾನ್ಸಿ) ಈ ಕಾಮಗಾರಿಯನ್ನು ಫೆಬ್ರವರಿ 2020ರಲ್ಲಿ ಪ್ರಾರಂಭಿಸಿದೆ. ಈ ಹಿಂದೆ ಪ್ರಸ್ತಾವನೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಗುಡ್ಡವನ್ನು 1 ಮೀಟರ್ ಆಳ ಕೊರೆದು ತಿರುವು ರಸ್ತೆ ನಿರ್ಮಿಸುವಂತೆ ಯೋಜನೆ ಹೊಂದಲಾಗಿತ್ತು. ಒಂದು ಮೀಟರ್ ಗುಡ್ಡ ಕೊರೆದು ತಿರುವು ನಿರ್ಮಿಸಿದರೂ ಕಬ್ಬಿನ ಟ್ಯಾಕ್ಟರ್ ಸಂಚಾರಕ್ಕೆ, ರೈತರಿಗೆ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದಿಲ್ಲ ಎನ್ನುವುದನ್ನು ಅಧ್ಯಯನ ಮಾಡಿದೆವು. ಇದರ ಆಧಾರದ ಮೇರೆಗೆ ಸುಗಮ ಸಂಚಾರಕ್ಕಾಗಿ ಗುಡ್ಡವನ್ನು 4.5 ಮೀಟರ್ ಆಳಕ್ಕೆ ಕೊರೆದು ತಿರುವು ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು ಕಾರಜೋಳ.
ಗುಡ್ಡ ಕೊರೆಯುವ ಆಳವನ್ನು 4.5ಕ್ಕೆ ವಿಸ್ತರಿಸಿರುವುದರಿಂದ ಹೆಚ್ಚುವರಿಯಾಗಿ 2.90 ಕೋಟಿ ಹೆಚ್ಚುವರಿ ಅನುದಾನ ಅಗತ್ಯವಿದೆ. ಈ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಈ ರಸ್ತೆಯು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪರ್ಯಾಯ ಮಾರ್ಗವಿಲ್ಲದೇ ರೈತರಿಗೆ, ಸಾರ್ವಜನಿಕರಿಗೆ ಅನಾನುಕೂಲವಾಗಿತ್ತು. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಪ್ರಗತಿಯ ಬಗ್ಗೆ ತೀವ್ರ ನಿಗಾವಹಿಸಿ, ಗುಣಮಟ್ಟದೊಂದಿಗೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ಗುಡ್ಡದ ತಿರುವು ರಸ್ತೆ ನಿರ್ಮಾಣದಿಂದ ಕಬ್ಬಿನ ಟ್ಯಾಕ್ಟರ್ಗಳು, ಭಾರಿ ವಾಹನಗಳಿಗೆ, ರೈತರಿಗೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ