• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬಿಜೆಪಿ ಸರ್ಕಾರ ಪತನವಾಗುತ್ತೆ ಎಂದ ತನ್ವೀರ್ ಹೇಳಿಕೆಗೆ ನರಿ ಕಥೆ ಹೋಲಿಸಿದ ಡಿಸಿಎಂ ಕಾರಜೋಳ

ಬಿಜೆಪಿ ಸರ್ಕಾರ ಪತನವಾಗುತ್ತೆ ಎಂದ ತನ್ವೀರ್ ಹೇಳಿಕೆಗೆ ನರಿ ಕಥೆ ಹೋಲಿಸಿದ ಡಿಸಿಎಂ ಕಾರಜೋಳ

ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

ಬಿಜೆಪಿ ಸರ್ಕಾರ ಪತನವಾಗುತ್ತೆ ಎಂಬ ತನ್ವೀರ್ ಸೇಠ್ ಹೇಳಿಕೆಗೆ ಡಿಸಿಎಂ ಅವರು ನರಿ ಕಥೆ ಹೋಲಿಕೆ ಮಾಡಿ ವ್ಯಂಗ್ಯವಾಡಿದರು. ತೋಳದ ಕೊರಳಿಗೆ ಕಟ್ಟಿದ್ದು ಹರಿದು ಬೀಳುತ್ತೆ ಎಂದು ತಿನ್ನುವ ಆಸೆಯಿಂದ ನರಿ ತೋಳ ಬೆನ್ನು ಹತ್ತಿದ ಹಾಗೆ ಆಗಿದೆ ಎಂದರು.

  • Share this:

ಬಾಗಲಕೋಟೆ (ನವೆಂಬರ್ 01): ಉಪಚುನಾವಣೆ ಬಳಿಕ 17 ಶಾಸಕರ ಸ್ಥಿತಿ ನಾಯಿಪಾಡಾಗುತ್ತದೆ ಎಂದು ಸಿದ್ದರಾಮಯ್ಯ ನುಡಿದ ಭವಿಷ್ಯಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ಬಿಜೆಪಿಗೆ ವಲಸೆ ಬಂದಿರುವವರ ಪೈಕಿ ಉಪಚುನಾವಣೆಗಳಲ್ಲಿ ಗೆದ್ದು ಬಂದವರಿಗೆ ಈಗಾಗಲೇ ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಹತಾಶೆಯಿಂದ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಕೆಲ ಶಾಸಕರು ಬಿಟ್ಟು ಹೋಗ್ತಾರೆ ಎನ್ನುವ ಅಂಜಿಕೆ ಸಿದ್ದರಾಮಯ್ಯಗಿದೆ. ಅದನ್ನು ತಡೆಗಟ್ಟುವುದಕ್ಕಾಗಿ ಬೈ ಎಲೆಕ್ಷನ್ ಬಳಿಕ 17ಶಾಸಕರು ಸ್ಥಿತಿ ನಾಯಿ ಪಾಡು ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿಕೆ ಕೊಡ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದರು.


ಇಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ, ಬೇರೆ ಪಕ್ಷದಿಂದ ಯಾರನ್ನು ಕರೆತರುವ ಅವಶ್ಯಕತೆ ನಮಗಿಲ್ಲ. ಆ ರೀತಿ ಪ್ರಯತ್ನವೇನಿಲ್ಲ. ಬಿಜೆಪಿ ಪಕ್ಷ ನಿಂತ ನೀರಲ್ಲ, ಹರಿವು ನೀರು. ನಮ್ಮ ಪಕ್ಷ ಬೆಳೆಯಬೇಕು, ಬಿಜೆಪಿ ಪಕ್ಷ ಯಾವಾಗಲೂ ಮುಂದೆ ಹೋಗಬೇಕು ಅನ್ನೋದು ನಮ್ಮ ಆಶಯ. ಹರಿವು ನೀರಿನ ಜೊತೆ ಹೊಸ ನೀರು ಸೇರಿಕೊಂಡು ಮುಂದೆ ಹೋಗಬೇಕು ಎಂದು ಡಿಸಿಎಂ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.


ಬಿಜೆಪಿ ಸರ್ಕಾರ ಪತನವಾಗುತ್ತೆ ಎಂಬ ತನ್ವೀರ್ ಸೇಠ್ ಹೇಳಿಕೆಗೆ ಡಿಸಿಎಂ ಅವರು ನರಿ ಕಥೆ ಹೋಲಿಕೆ ಮಾಡಿ ವ್ಯಂಗ್ಯವಾಡಿದರು. ತೋಳದ ಕೊರಳಿಗೆ ಕಟ್ಟಿದ್ದು ಹರಿದು ಬೀಳುತ್ತೆ ಎಂದು ತಿನ್ನುವ ಆಸೆಯಿಂದ ನರಿ ತೋಳ ಬೆನ್ನು ಹತ್ತಿದ ಹಾಗೆ ಆಗಿದೆ ಎಂದರು.


ಇದನ್ನೂ ಓದಿ: ನಿಮ್ಮ ಆಟ ನಡೆಯುತ್ತೋ, ನಮ್ಮ ಆಟ ನಡೆಯುತ್ತೋ ನೋಡೋಣ; ಬಿವೈ ವಿಜಯೇಂದ್ರಗೆ ಹೆಚ್​ಡಿ ಕುಮಾರಸ್ವಾಮಿ ಸವಾಲು


ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಸರ್ಕಾರ ಬದ್ಧ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಕಾರಜೋಳ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಸಮರ್ಥಿಸಿಕೊಂಡರು. ಉಪ ಮುಖ್ಯಮಂತ್ರಿಗಳಿಂದ ಜೀವಭಯ ಇದೆ ಎಂದು ಬಿಡಿಸಿಸಿ ಚುನಾವಣೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿದ ಆರೋಪಕ್ಕೂ ಕಾರಜೋಳ ಪ್ರತಿಕ್ರಿಯಿಸಿದ್ದು, ‘ಕಾಶಪ್ಪನವರ ಆರೋಪ ನಿಮಗೆ ಸತ್ಯವೆನಿಸುತ್ತಾ?’ ಎಂದು ಮಾಧ್ಯಮದವರನ್ನ ಮರು ಪ್ರಶ್ನಿಸಿದರು.


ಅದು ನನ್ನ ಸಂಸ್ಕ್ರತಿ ಅಲ್ಲ, ನನ್ನದು ಶರಣ ಸಂಸ್ಕ್ರತಿ. ನಿಂದಿಸಿದವರನ್ನ ತಂದೆ ತಾಯಿಗಳೆನ್ನುವ ಮನುಷ್ಯ ನಾನು. ಅವರಿಗೆ ನನಗೆ ಏನು ಸಂಬಂಧ, ನಾನ್ಯಾಕೆ ಹಾಗೆ ಮಾಡಲಿ? ಅವರೇನು ನನ್ನ ಕ್ಷೇತ್ರದವರಾ..? ನನ್ನ ಎದುರಾಳಿಯೇ? ಏನು ಸಂಬಂಧವಿಲ್ಲ. ನನ್ನ ಕ್ಷೇತ್ರದಲ್ಲಿ ಯಾವೊಬ್ಬ ಪೊಲೀಸ್ ಅಧಿಕಾರಿನೂ ದುರುಪಯೋಗ ಮಾಡಿಲ್ಲ. ಅದು ಕಾಶಪ್ಪನವರ ಭ್ರಮೆ. ಅಂತಹ ಸಂಸ್ಕ್ರತಿ ತನ್ನದಲ್ಲ ಎನ್ನುವ ಮೂಲಕ ವಿಜಯಾನಂದ ಕಾಶಪ್ಪನವರ್ ಆರೋಪಕ್ಕೆ ತಿರುಗೇಟು ನೀಡಿದರು.


ಮಳೆ ಹಾನಿ ಪರಿಹಾರವಾಗಿ ಬೆಂಗಳೂರಿನಲ್ಲಿ 25ಸಾವಿರ ಪರಿಹಾರ ರೂ ಕೊಟ್ಟ ಸರ್ಕಾರ ಉತ್ತರ ಕರ್ನಾಟಕದವರಿಗೆ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ಉತ್ತರ ಕರ್ನಾಟಕದ ಸಮಸ್ಯೆ ಬೇರೆ, ಬೆಂಗಳೂರು ಸಮಸ್ಯೆ ಬೇರೆ. ರಾಜಕಾಲುವೆ ಮೇಲೆ ಕಟ್ಟಿಕೊಂಡ ಮನೆಗಳು ಕೊಚ್ಚಿಕೊಂಡು ಹೋಗಿವೆ. ಹಾಗಾಗಿ ಕಾರ್ಪೊರೇಷನ್​ನವರು ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: ಸಿದ್ದರಾಮಯ್ಯ ರಾತ್ರಿಗಿಂತ ಹಗಲು ನಿದ್ದೆ ಮಾಡೋದೆ ಜಾಸ್ತಿ; ವಸತಿ ಸಚಿವ ಸೋಮಣ್ಣ ಲೇವಡಿ


ಬಾಗಲಕೋಟೆಯಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳ ಕನ್ನಡ ರಾಜ್ಯೋತ್ಸವ:


ಬಾಗಲಕೋಟೆ ನವನಗರದ ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವದಲ್ಲಿ ಡಿಸಿಎಂ ಗೋವಿಂದ ಕಾರಜೋಳ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಬಾರಿಯ ಕನ್ನಡ ರಾಜ್ಯೋತ್ಸವದ ಪಥಸಂಚಲನದ ವೇಳೆ ಪರೇಡ್ ಕಮಾಂಡರ್ ಶಿವಾನಂದ ಜೇವರಗಿ ಅವರು ಕನ್ನಡದಲ್ಲೇ ನಿರ್ದೇಶನ ಕೊಟ್ಟಿದ್ದು. ಜೊತೆಗೆ ಬ್ಯಾಂಜ್ ಕೂಡಾ ಕನ್ನಡದಲ್ಲೇ ಶಬ್ದ ಮೊಳಗಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.


ಏಳು ತುಕಡಿಗಳು ಈ ಬಾರಿಯ ಕನ್ನಡ ರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗಿಯಾಗಿದ್ದವು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ 21ಜನರು, ಹಾಗೂ ಕೊರೊನಾ ವಾರಿಯರ್ಸ್​ಗೆ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳ ಪೈಕಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಿಂಧುಶ್ರೀ, ಅಮಿತ್ ಎಂಬಿಬ್ಬರು ವಿದ್ಯಾರ್ಥಿಗಳಿಗೆ ತಲಾ ಒಂದು ಲಕ್ಷ ನಗದು, ಪುರಸ್ಕಾರ ನೀಡಿ ಗೌರವಿಸಲಾಯಿತು. ಹೋರಾಟಗಾರರಾದ ಜಡಗಣ್ಣಾ ಬಾಳಣ್ಣಾ ಅವರ ನೆನಪಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.


ಇದನ್ನೂ ಓದಿ: ನಾನೂ ಸಿಎಂ ಸ್ಥಾನದ ಆಕಾಂಕ್ಷಿ; ಕಾಂಗ್ರೆಸ್​ ಶಾಸಕ ತನ್ವೀರ್​ ಸೇಠ್


ಧ್ವಜಾರೋಹಣ ಉದ್ದೇಶಿಸಿ ಭಾಷಣ ವೇಳೆ ಗೋವಿಂದ ಕಾರಜೋಳ ಅವರು ಕೆಲ ತಪ್ಪು ಉಚ್ಛಾರಣೆ ಹಾಗೂ ಇಂಗ್ಲಿಷ್ ಪದ ಬಳಕೆ ಮಾಡಿದರು. ಮಂತ್ರಿ ಬದಲಿಗೆ ಮಂದಿ, ಆಘಾತ ಬದಲಿಗೆ ಆಘಾವ, ಇಳಕಲ್ ತಾಲೂಕಿನ ಕರಡಿ ಗ್ರಾಮ ಬದಲಿಗೆ ಕೆರೂರು ಗ್ರಾಮ. ಇನ್​ಪುಟ್ ಸಬ್ಸಿಡಿ, ಸ್ಯಾಂಪಲ್, ನೆಗಟಿವ್, ಪಾಸಿಟಿವ್ ಇತ್ಯಾದಿ ಆಂಗ್ಲ ಪದಗಳನ್ನ ಕನ್ನಡ ರಾಜ್ಯೋತ್ಸವದ ಭಾಷಣ ವೇಳೆ ಬಳಕೆ ಮಾಡಿದ್ದಾರೆ. ಇನ್ನು ಭಾಷಣದ ಕೊನೆಗೆ ಭುವನೇಶ್ವರಿ ಬದಲಿಗೆ ಭವನೇಶ್ವರಿ ಎಂದು ತಪ್ಪಾಗಿ ಓದಿದ್ದು ಅಲ್ಲದೆ ಪದ ಓದುವಾಗ ತಡವರಿಸಿದ್ದು ಕಂಡುಬಂತು‌.


ಕನ್ನಡ ರಾಜ್ಯೋತ್ಸವದ ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಚಾಲನೆ ನೀಡಿದರು. ಒಟ್ಟಾರೆ, ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳ ಸಂಭ್ರಮವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ.


ವರದಿ: ರಾಚಪ್ಪ ಬನ್ನಿದಿನ್ನಿ

Published by:Vijayasarthy SN
First published: