ಬಾಗಲಕೋಟೆ (ಜು.15): ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳ ಮೂಲಕ ಆರಂಭಿಸಿರುವ ಕೊರೋನಾ ಖರ್ಚಿಗೆ ಲೆಕ್ಕ ಕೊಡಿ ಅಭಿಯಾನಕ್ಕೆ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಸಿದ್ದರಾಮಯ್ಯ 3 ಸಾವಿರ ಕೋಟಿ ಅವ್ಯವಹಾರ ಆರೋಪ ಮಾಡಿರುವುದು ಬೋಗಸ್. ಅದು ಆಧಾರರಹಿತ ಆರೋಪವಾಗಿದೆ. ರಾಜ್ಯ ಸರ್ಕಾರ 600 ಕೋಟಿಯೊಳಗಷ್ಟೇ ಖರ್ಚು ಮಾಡಿದೆ. ಸೋಂಕಿತರಿಗೆ ಇಂತಿಷ್ಟೇ ಖರ್ಚು ಅಂತಿರೋದಿಲ್ಲ. ಅವರವರ ಕೊರೋನಾ ಜೊತೆಗೆ ಬೇರೆ ಬೇರೆ ರೋಗದ ಚಿಕಿತ್ಸೆಗೆ ಅನುಸಾರ ಖರ್ಚಾಗುತ್ತೆ. ಲೆಕ್ಕ ಹಾಕೋದನ್ನು ಕಾಂಗ್ರೆಸ್ ನವರಿಗೆ ಮಾತ್ರ ಬಿಟ್ಟಿದ್ದೇವೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಕೊರೋನಾ ರೋಗದಿಂದ ಮೃತರಾದವರ ಸಂಖ್ಯೆ ಕಡಿಮೆಯಿದೆ. ಆದರೆ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರು ಕೊರೋನಾ ಸೋಂಕು ದೃಢವಾಗಿ ಮೃತಪಟ್ಟಿದ್ದು, ಹೀಗಾಗಿ ಕೊರೋನಾದಿಂದ ಎಷ್ಟು ಮಂದಿ ಮೃತರಾಗಿದ್ದಾರೆ, ಇತರೆ ಕಾಯಿಲೆಯಿಂದ ಎಷ್ಟು ಮಂದಿ ಮೃತರಾಗಿದ್ದಾರೆ ಎನ್ನುವ ವರದಿಯನ್ನು ಆರೋಗ್ಯ ಇಲಾಖೆಗೆ ಕೇಳಲಾಗಿದೆ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕಿತರಲ್ಲಿ ಹದಿಹರೆಯದವರೇ ಹೆಚ್ಚು!
ಬಾಗಲಕೋಟೆ ಜಿಲ್ಲೆಯಲ್ಲಿ 21 ವಯಸ್ಸಿನಿಂದ 40 ವಯಸ್ಸಿನವರಲ್ಲಿ ಅತೀ ಹೆಚ್ಚು ಸೋಂಕು ಕಂಡು ಬಂದಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 514ರಲ್ಲಿ 220ಮಂದಿ ಹದಿಹರೆಯದ ವಯಸ್ಸಿನವರಿಗೆ ಸೋಂಕು ತಗುಲಿದ್ದು ಆತಂಕದ ಸಂಗತಿಯಾಗಿದೆ. ಇನ್ನು ಜಿಲ್ಲೆಯ ವಿವಿಧ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದ 3162ಮಂದಿ ಕ್ವಾರಂಟೈನ್ ಆದವರಲ್ಲಿ 317 ಮಂದಿಗೆ ಸೋಂಕು ಕಂಡು ಬಂದಿದೆ. ಯುವಕರಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿರುವುದರಿಂದ ಯುವಕರು ನಿರ್ಲಕ್ಷ್ಯ ತೋರದೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ರೋಗ ಲಕ್ಷಣ ಕಂಡು ಬಂದ ವೇಳೆ ಮನೆಯಲ್ಲಿ ಕೌದಿ ಹೊಚ್ಚಿಕೊಂಡು ಮಲಗಬೇಡಿ. ಸರ್ಕಾರದ ಕೋವಿಡ್ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು. ಇನ್ನು ವಯೋವೃದ್ಧರಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಸೂಚಿಸಲಾಗಿದೆ ಎಂದರು.
ಬಾಗಲಕೋಟೆಯಲ್ಲಿ ಸೋಂಕತ ಪ್ರದೇಶವಷ್ಟೇ ಲಾಕ್!
ಬಾಗಲಕೋಟೆ ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಿ ಎಂದು ಬಹಳ ಜನ ಹೇಳುತ್ತಿದ್ದಾರೆ. ಆದರೆ ರೈತರು, ದಿನಗೂಲಿ ಕಾರ್ಮಿಕರ ದೃಷ್ಟಿಯಿಂದ ಇಡೀ ಜಿಲ್ಲೆ ಲಾಕ್ ಡೌನ್ ಮಾಡುವುದಿಲ್ಲ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ, ಅಲ್ಲಿನ ವಾರ್ಡ್, ಪ್ರದೇಶ ಲಾಕ್ ಡೌನ್ ಮಾಡಲು ಸಭೆಯಲ್ಲಿ ನಿರ್ಧರಿಸಿ, ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಬಾಗಲಕೋಟೆ ನಗರ, ಇಳಕಲ್, ಕಲಾದಗಿ, ಮುಧೋಳ ನಗರ ಸೇರಿ ಹೆಚ್ಚು ಕೇಸ್ ಕಂಡು ಬಂದ ವಾರ್ಡ್, ಪ್ರದೇಶ ಮಾತ್ರ ಲಾಕ್ ಡೌನ್ ಮಾಡಲಾಗುವುದು ಎಂದರು.
ಇದೇ ವೇಳೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದ್ದ ಅವ್ಯವಸ್ಥೆ, ಆಹಾರದಲ್ಲಿ ಜಿರಳೆ ಪತ್ತೆ ಬಗ್ಗೆ ನ್ಯೂಸ್ 18 ವರದಿ ಮಾಡಿತ್ತು. ಇದೇ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಗುಣಮಟ್ಟದ ಆಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಜಿಲ್ಲಾಸ್ಪತ್ರೆ ಸರ್ಜನ್ ಡಾ, ಪ್ರಕಾಶ್ ಬಿರಾದಾರ, ಬೇರೊಂದು ಸಂಸ್ಥೆಗೆ ಗುಣಮಟ್ಟದ ಆಹಾರ ಪೂರೈಕೆಗೆ ಗುತ್ತಿಗೆ ನೀಡಲಾಗಿದೆ. ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಆಹಾರ ಪೂರೈಕೆಗೆ ಹೊರಗುತ್ತಿಗೆ ಕೊಡೋದ್ರಿಂದ ಇಂತಹ ಸಮಸ್ಯೆಯಾಗುತ್ತದೆ. ನಮ್ಮ ವಸತಿ ನಿಲಯ ಅಡುಗೆ ಸಿಬ್ಬಂದಿಯಿಂದ ಆಹಾರ ತಯಾರಿಸಿ ಪೂರೈಸಿ. ಹೆಚ್ಚು ಸಮಸ್ಯೆಯಾದರೆ ವಸತಿ ನಿಲಯ ಅಡುಗೆ ಸಿಬ್ಬಂದಿ ಬಳಸಿಕೊಂಡು ಗುಣಮಟ್ಟದ ಆಹಾರ ಪೂರೈಸಿ ಎಂದಾಗ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ನಿನ್ನೆಯಷ್ಟೆ ಹೊರಗುತ್ತಿಗೆ ಕೊಡಲಾಗಿದೆ. ಗುಣಮಟ್ಟದ ಆಹಾರ ಪೂರೈಸುವಂತೆ ಆದೇಶಿಸಿದ್ದು, ಕ್ವಾರಂಟೈನ್, ಕೋವಿಡ್ ಕೇರ್ ಕೇಂದ್ರದಲ್ಲಿ ವಸತಿ ನಿಲಯ ಅಡುಗೆ ಸಿಬ್ಬಂದಿ ಬಳಕೆಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ ಏರಿಕೆಗೆ, ರೋಗ ಲಕ್ಷಣ ಕಂಡು ಬಂದರೂ ತಡವಾಗಿ ಆಸ್ಪತ್ರೆಗೆ ಬರುತ್ತಿರುವುದೇ ಕಾರಣವಾಗಿದ್ದು, ರೋಗ ಲಕ್ಷಣ ಕಂಡು ಬಂದ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ಮುಧೋಳ ನಗರದ 60ವರ್ಷದ ಸೋಂಕಿತ ಹಿರಿಯ ಪತ್ರಕರ್ತ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಗೆ ದಾಖಲಾಗಲು ಅವರ ಸಂಬಂಧಿಕರು ಹಿಂದೇಟು ಹಾಕಿದರು. ಆಗ ಹೋಂ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಈ ವೇಳೆ ಉಸಿರಾಟದ ಸಮಸ್ಯೆಯಿಂದ ಮೃತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಕಳೆದ 3 ತಿಂಗಳಿಗಿಂತ ದುಪ್ಪಟ್ಟು ವೇಗದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ಗುರಿ ಹೊಂದಿರುವ ರಾಜ್ಯ ಸರ್ಕಾರ
ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೆಲವು ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕಡಿಮೆ ಹಂಚಿಕೆಯಾಗಿತ್ತು. ಇದನ್ನು ಗಮನಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ಅಂತಹ ಕ್ಷೇತ್ರಗಳಿಗೆ 2799 ಕೋಟಿ ವಿಶೇಷ ಅನುದಾನವನ್ನು ಕಡಿಮೆ ಅನುದಾನ ಹಂಚಿಕೆಯಾದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿಯಂತೆ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು. ರಾಜ್ಯದಲ್ಲಿ ಕೊರೋನಾ ವೈರಸ್ ಬಂದ ಬಳಿಕ ಆ ಅನುದಾನ ನಿರೀಕ್ಷಿತ ಮಟ್ಟದಲ್ಲಿ ಖರ್ಚಾಗಿಲ್ಲ. ಲೋಕೋಪಯೋಗಿ, ಪಂಚಾಯತ ರಾಜ್ ಹಾಗೂ ನಗರಾಭಿವೃದ್ದಿ ಇಲಾಖೆಗೆ ಮಾತ್ರ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಈ ವಿಶೇಷ ಅನುದಾನ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 5044 ಕಾಮಗಾರಿಗಳಿಗೆ 150 ಕೋಟಿ ಕೈಗೊಳ್ಳಲಾಗಿದ್ದು, ಕೋವಿಡ್ ಹಿನ್ನಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಕೈಗೊಂಡ ಅಭಿವೃಧ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಗೋವಿಂದ ಕಾರಜೋಳ ಇದೇ ವೇಳೆ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ