ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ವಸತಿ ಸಚಿವರನ್ನು ಕಿಚಾಯಿಸಿದ ಡಿಸಿಎಂ ಗೋವಿಂದ ಕಾರಜೋಳ

ಮುಂದಿನ ದಿನಗಳಲ್ಲಿ ಪ್ರತಿ ಗ್ರಾ.ಪಂ.ಗೆ 20 ಆಶ್ರಯ ಮನೆಗಳನ್ನ ನಿರ್ಮಿಸಲಾಗುವುದು ಎಂದು ಬಾಗಲಕೋಟೆಯಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ವಸತಿ ಸಚಿವ ವಿ ಸೋಮಣ್ಣ ಹೇಳಿದರು. ಆದರೆ, 20ಕ್ಕೂ ಹೆಚ್ಚು ಸದಸ್ಯರಿರುವ ಗ್ರಾ.ಪಂ.ಗೆ 20 ಮನೆ ಯಾವ ಲೆಕ್ಕ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.

ಬಾಗಲಕೋಟೆಯ ಜನಸೇವಕ ಸಮಾವೇಶದಲ್ಲಿ ಸಚಿವ ವಿ ಸೋಮಣ್ಣ ಮತ್ತಿತರರು

ಬಾಗಲಕೋಟೆಯ ಜನಸೇವಕ ಸಮಾವೇಶದಲ್ಲಿ ಸಚಿವ ವಿ ಸೋಮಣ್ಣ ಮತ್ತಿತರರು

  • Share this:
ಬಾಗಲಕೋಟೆ: 2023ರೊಳಗೆ  ರಾಜ್ಯದಲ್ಲಿ ಸೂರಿಲ್ಲದ ಸಂಸಾರಗಳಿಗೆ ಸೂರು ಕಲ್ಪಿಸಲಾಗುವುದು ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದರು. ಇಲ್ಲಿ ನಡೆದ ಜನ ಸೇವಕ ಸಮಾವೇಶದಲ್ಲಿ ಭಾಗಿಯಾಗಿ ಮಾತಾನಾಡಿದ ಅವರು, ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ 1ಕೋಟಿ ಅನುದಾನ, ಪ್ರತಿ ಗ್ರಾಮ ಪಂಚಾಯಿತಿಗೆ 20ಮನೆಗಳನ್ನು ನೀಡಲಾಗುವುದು. ಜೊತೆಗೆ ಈಗಾಗಲೇ ಆನ್​ಲೈನ್​ನಲ್ಲಿ ಮನೆಗಳ ಲಾಕ್ ತೆರೆದು ಅರ್ಹ ಫಲಾನುಭವಿಗಳಿಗೆ ಕೊಡುವುದಾಗಿ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 15 ಲಕ್ಷ ಆಶ್ರಯ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ. ಯಂಕ-ಸೀನ ಹೆಸರಿನಲ್ಲಿ 6ರಿಂದ 7 ಮನೆ ಹಾಕಿ ಬಿಲ್ ತೆಗೆದಿದ್ದಾರೆ. ಹೀಗಾಗಿ ಸುಮಾರು 6 ಲಕ್ಷ ಆಶ್ರಯ ಮನೆಗಳನ್ನು ಲಾಕ್ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಆರೋಪಿಸಿದರು.

ಆಸರೆ ಇಲ್ಲದ ಬಡವರಿಗೆ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಡುವುದು ಸರ್ಕಾರದ ಉದ್ದೇಶ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಬರೋಬ್ಬರಿ 15 ಲಕ್ಷ ಮನೆ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿತ್ತು. ಯಂಕ, ಸೀನ ಹೆಸರಿನಲ್ಲಿ 6ರಿಂದ 7 ಮನೆ ಹಾಕಲಾಗಿದೆ. ಒಬ್ಬರಿಗೆ ಒಂದೇ ಮನೆ ಹಾಕಬೇಕು. ಒಬ್ಬೊಬ್ಬರ ಹೆಸರಿನಲ್ಲಿ ಆರೇಳು ಮನೆ ಇರುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ರಾಜ್ಯದಲ್ಲಿ ಸುಮಾರು 6 ಲಕ್ಷ ಮನೆಗಳ ಪ್ರಕ್ರಿಯೆ ಲಾಕ್ ಮಾಡಲಾಗಿತ್ತು. ಇದೀಗ ಸಮಗ್ರ ತನಿಖೆ ನಡೆಸಿದ ಬಳಿಕ, ಅಗತ್ಯ ಹಾಗೂ ಅರ್ಹರಾದವರಿಗೆ ಈ ವರ್ಷ ಒಟ್ಟು 1.17 ಲಕ್ಷ ಮನೆ ನಿರ್ಮಿಸಿಕೊಡಲಾಗಿದೆ. ಮುಂದಿನ ವರ್ಷ ಮುಖ್ಯಮಂತ್ರಿಗಳ ಮನವೋಲಿಸಿ 1.50 ಲಕ್ಷ ಮನೆ ಮಂಜೂರು ಮಾಡಿಸಲಾಗುವುದು ಎಂದರು.

ಐದು ವರ್ಷದಲ್ಲಿ ಒಂದೊಂದು ಪಂಚಾಯಿತಿಗೂ 100 ಮನೆ ಬರಲಿವೆ. ನೂತನ ಗ್ರಾ.ಪಂ. ಸದಸ್ಯರು, ಚುನಾವಣೆಯಲ್ಲಿ ತಮಗೆ ಮತ ಹಾಕದೇ ಇದ್ದರೂ ಬಡವರು-ಆಶ್ರಯ ಇಲ್ಲದವರಿದ್ದರೆ ಅವರಿಗೆ ಮನೆ ಮಂಜೂರು ಮಾಡಿಸಬೇಕು ಎಂದು ತಿಳಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗ್ರಾ.ಪಂ.ಗೆ ಹೆಚ್ಚು ಅನುದಾನ ನೀಡುತ್ತಿದ್ದಾರೆ. 14ನೇ ಹಣಕಾಸು ಅಡಿ ಒಂದೊಂದು ಪಂಚಾಯಿತಿಗೂ ಸುಮಾರು 60 ಲಕ್ಷ ಅನುದಾನ ಕೊಟ್ಟಿದ್ದಾರೆ. ಇನ್ಮುಂದೆ 1 ಕೋಟಿ ವರೆಗೂ ಅನುದಾನ ನೀಡಲಿದ್ದಾರೆ ಎಂದರು.

ಇದನ್ನೂ ಓದಿ: ಕೃಷಿ ಕಾಯ್ದೆ ರದ್ದಾಗುವವರೆಗೂ ರೈತರ ಪ್ರತಿಭಟನೆ; ಸುಪ್ರೀಂ ರಚಿತ ಸಮಿತಿ ಬಗ್ಗೆ ವಿಪಕ್ಷಗಳಿಗೆ ಅನುಮಾನ

ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಪಂಚಾಯಿತಿ ಬಯಲು ಶೌಚಮುಕ್ತ ಮಾಡುವ ಮಹತ್ವದ ಕಾರ್ಯ ಪ್ರಧಾನ ಮಂತ್ರಿಗಳು ಮಾಡಿದ್ದು, ಮುಂದಿನ ವರ್ಷದಿಂದ ಪ್ರತಿ ಮನೆಗೂ ನಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಶೀಘ್ರವೇ ನಲ್ ಸೇ ಜಲ್ (ನಳದಿಂದ ಮನೆ ಮನೆಗೂ ಕುಡಿಯುವ ನೀರು) ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಗ್ರಾ.ಪಂ. ನೂತನ ಸದಸ್ಯರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಸಿಎಂ, ಸಚಿವ, ಶಾಸಕರಿಗೂ ಇಲ್ಲದ ಅಧಿಕಾರ ಗ್ರಾ.ಪಂ. ಸದಸ್ಯರಿಗೆ ಇರುತ್ತದೆ. ಗ್ರಾ.ಪಂ. ಅಧ್ಯಕ್ಷರ ದಾರಿ ತಪ್ಪಿಸುವ ಕೆಲಸ ಅಧಿಕಾರಿಗಳು ಮಾಡುತ್ತಾರೆ. ಅವರಿಂದ ಎಚ್ಚರಿಕೆ ಇರಬೇಕು ಎಂದು ಸಲಹೆ ನೀಡಿದರು.

ಸಚಿವರಿಗೆ, ಶಾಸಕರಿಗೆ ಚೆಕ್​ಗೆ ಸಹಿ ಮಾಡುವ ಅಧಿಕಾರ ಇಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಚೆಕ್​ಗೆ ಸಹಿ ಮಾಡುವ ಅಧಿಕಾರವಿದೆ‌. ಹೀಗಾಗಿ ಇದೀಗ ಗ್ರಾಮ ಪಂಚಾಯಿತಿ ಸದಸ್ಯರಿಗೆ, ಅಧ್ಯಕ್ಷರಿಗೆ ಅಧಿಕಾರ ವ್ಯಾಪ್ತಿ ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: ನಮ್ಮ ಭಿಕ್ಷೆಯಿಂದಲೇ ಅಧಿಕಾರಕ್ಕೆ ಬಂದು ಕೈ ಬಿಟ್ಟಿರಿ; ಯಡಿಯೂರಪ್ಪ ವಿರುದ್ಧ ಹೆಚ್. ವಿಶ್ವನಾಥ್ ಆಕ್ರೋಶ

ಗ್ರಾ.ಪಂ.ಗೆ 20 ಆಶ್ರಯ ಮನೆ ಕೊಟ್ಟರೆ ಉಪಯೋಗವಿಲ್ಲ: ಡಿಸಿಎಂ ಕಾರಜೋಳ

ಬಳಿಕ ಮಾತಾನಾಡಿದ ಡಿಸಿಎಂ ಗೋವಿಂದ ಕಾರಜೋಳ, “ಸೋಮಣ್ಣನವರೇ, ಪ್ರತಿ ಗ್ರಾಮ ಪಂಚಾಯಿತಿಗೆ 20ಆಶ್ರಯ ಮನೆ ಕೊಟ್ಟರೆ ಗ್ರಾಮ ಪಂಚಾಯಿತಿ ಸದಸ್ಯರು ಚಪ್ಪಾಳೆ ಹೊಡೆಯೋದಿಲ್ಲ‌. ಏಕೆಂದರೆ ಒಂದೊಂದು ಗ್ರಾಮ ಪಂಚಾಯತಿಗೆ 16ರಿಂದ 20 ಸದಸ್ಯರಿರುತ್ತಾರೆ. ಹಾಗಾಗಿ ಸದಸ್ಯರಿಗೆ ಒಂದು ಮನೆಯೂ ಹಂಚಿಕೆ ಮಾಡೋಕೆ ಆಗೋದಿಲ್ಲ. ಹಾಗಾಗಿ ಹೆಚ್ಚಿನ ಆಶ್ರಯ ಮನೆ ಗ್ರಾಮ ಪಂಚಾಯಿತಿಗೆ ಕೊಡ್ತೇವೆ ಎಂದರೆ ಚಪ್ಪಾಳೆ ಹೊಡೆಯುತ್ತಾರೆ” ಎಂದು ವಸತಿ ಸಚಿವರಿಗೆ ಕಿಚಾಯಿಸಿದರು.

ರಾಜ್ಯದಲ್ಲಿ  ಪಂಚಾಯಿತಿ ವ್ಯವಸ್ಥೆ ಹದಗೆಡಿಸಿದ್ದೇ ಕಾಂಗ್ರೆಸ್. ರಾಮಕೃಷ್ಣ ಹೆಗಡೆ ಅವರ ದೂರದೃಷ್ಠಿಯ ಫಲವಾಗಿ ಇಡೀ ದೇಶಕ್ಕೆ ಮಾದರಿಯಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ರಾಜ್ಯದಲ್ಲಿತ್ತು. ಆದರೆ ವೀರಪ್ಪ ಮೊಯ್ಲಿ ವಿವೇಚನೆಯಿಲ್ಲದೆ ಮುಖ್ಯಮಂತ್ರಿಯಾದ ಬಳಿಕ ಪಂಚಾಯತ್ ವ್ಯವಸ್ಥೆಯ ಹದಗೆಡಿಸಿದರು. ಪಂಚಾಯತ್ ರಾಜ್ ಅನ್ನು ಎರಡು ಹಂತದ ವ್ಯವಸ್ಥೆಗೊಳಿಸಲು ಚರ್ಚೆ ನಡೆಸುತ್ತಿದ್ದು, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಹಂಚಿಕೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿಲ್ಲ. ನಮ್ಮ ಜಿಲ್ಲೆಯಲ್ಲಿ ತನಿಖೆ ಮಾಡುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ: ಸಂಪುಟಕ್ಕೆ ಏಳು ಹೊಸಬರ ಸೇರ್ಪಡೆ; ಸಿಎಂ ಯಡಿಯೂರಪ್ಪ ಘೋಷಣೆ – ಇಲ್ಲಿದೆ ಪಟ್ಟಿ

ಮೋದಿ ಅವಧಿ ಸುವರ್ಣಯುಗ ಎಂದ ತೇಜಸ್ವಿನಿ:

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಸುವರ್ಣ ಯುಗ ಬಂದಂತಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಸುವರ್ಣಯುಗ ಇತ್ತು. ಹಾಗೆಯೇ ಈಗ ಸುವರ್ಣಕಾಲ. ನೀವೆಲ್ಲಾ ಸುವರ್ಣ ಕಾಲದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಹೆಮ್ಮೆಯ ಸಂಗತಿ. ಗ್ರಾಮ ಪಂಚಾಯಿತಿಯಲ್ಲಿ ಶೇಕಡಾ 51ಕ್ಕಿಂತಲೂ ಹೆಚ್ಚು ಮಹಿಳೆಯರಿದ್ದಾರೆ, ಪ್ರತಿ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರುವಂತೆ ಎಂದು ಹೇಳಿದರು

ದಿವಂಗತ ಅನಂತ್ ಕುಮಾರ್ ಅವರನ್ನು ನೆನೆಸಿಕೊಂಡ ತೇಜಸ್ವಿನಿ ಅನಂತ್ ಕುಮಾರ್, ಅವರ ಸಹಕಾರದಿಂದ ನಾನು ಅದಮ್ಯ ಚೇತನ ಸಂ‌ಸ್ಥೆ ಮೂಲಕ ಸಾಮಾಜಿಕ ಕಾರ್ಯ ಮಾಡುವಂತಾಗಿದೆ. ಪ್ರತಿ ಮಹಿಳೆಯ ಯಶಸ್ಸಿನ ಹಿಂದೆ ಪುರುಷ ಇರಬೇಕು. ಹಾಗೆ ನನಗೆ ಅನಂತ್ ಕುಮಾರ್ ಅವರಿದ್ದರು ಎಂದರು. ಬಾಗಲಕೋಟೆ ಜಿಲ್ಲೆಯೊಂದಿಗಿನ ನಂಟನ್ನು ತೇಜಸ್ವಿನಿ ಅನಂತಕುಮಾರ್ ಇದೇ ವೇಳೆ ಹಂಚಿಕೊಂಡರು.

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಮಾತನಾಡುವ ವೇಳೆ ದಿವಂಗತ ಅನಂತ್ ಕುಮಾರ್ ಅವರನ್ನು ನೆನೆದುಕೊಂಡು ಭಾವುಕರಾಗಿ ಕಣ್ಣಂಚು ನೀರು ತುಂಬಿ, ಭಾಷಣ ಮಾಡುವಾಗ ಗದ್ಗದಿತರಾಗಿ ಕಣ್ಣೀರು ಒರೆಸಿಕೊಂಡರು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ 2ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಆದರೆ ಬಹುತೇಕ ಗ್ರಾಮ ಪಂಚಾಯಿತಿ ಸದಸ್ಯರು ಮಾಸ್ಕ್ ಹಾಕಿಕೊಳ್ಳದೇ ಆಸೀನರಾಗಿ, ಕೊರೊನಾ ನಿಯಮಾವಳಿ ಗಾಳಿಗೆ ತೂರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಎಂಎಲ್ಸಿ ಹನುಮಂತ ನಿರಾಣಿ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಸೇರಿದಂತೆ ಹಾಲಿ ಮಾಜಿ ಶಾಸಕರು ವೇದಿಕೆ ಮೇಲಿದ್ದರು.

ವರದಿ: ರಾಚಪ್ಪ ಬನ್ನಿದಿನ್ನಿ
Published by:Vijayasarthy SN
First published: