ರಾಮನಗರ : ರಾಜ್ಯಕ್ಕೆ ಕೊರೋನಾ ವಿಚಾರದಲ್ಲಿ ಕೇಂದ್ರದಿಂದ ಎಲ್ಲಾ ರೀತಿಯ ಸಹಕಾರ ಇದೆ ಎಂದು ರಾಮನಗರದಲ್ಲಿ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಹೇಳಿದರು. ರಾಮನಗರ ನಗರಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡು ಸುದ್ದಿಗಾರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಇಲ್ಲ, 2 ಸಾವಿರ ವೆಂಟಿಲೇಟರ್ ನ ಕೇಂದ್ರ ರಾಜ್ಯಕ್ಕೆ ನೀಡಿದೆ.
ಮೊದಲು ವೆಂಟಿಲೇಟರ್ ಗಳೇ ಉತ್ಪಾದನೆಯಾಗುತ್ತಿರಲಿಲ್ಲ ಎಂದು ತಿಳಿಸಿದ ಅವರು ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಇದೆ, ರಾಜ್ಯ ಸರ್ಕಾರ ಕೊರೋನಾ ವಿಚಾರವಾಗಿ ಎಲ್ಲಾ ಅಗತ್ಯ ಕ್ರಮವಹಿಸಲಾಗಿದೆ ಎಂದು ಹೇಳಿದರು. ಕೆಲವೊಂದು ಆಸ್ಪತ್ರೆಯಲ್ಲಿ ಸೌಕರ್ಯವಿಲ್ಲದೇ ಸಮಸ್ಯೆಯಾಗಿದೆ, ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತ ಕ್ರಮವಹಿಸುತ್ತಿದೆ ಎಂದು ತಿಳಿಸಿದರು.
ಇನ್ನು ನಗರಸಭೆ ಚುನಾವಣೆಯ ಪ್ರಚಾರದ ವೇಳೆ ಸಾಮಾಜಿಕ ಅಂತರವಿಲ್ಲದೇ ಡಿಸಿಎಂ ಅಶ್ವಥ್ ನಾರಾಯಣ್ ಕೊರೋನಾ ನಿಯಮಗಳನ್ನ ಗಾಳಿಗೆ ತೂರಿದರು. ಇವತ್ತು ರಾಮನಗರ ನಗರಸಭೆ ಚುನಾವಣೆ ಸಂಬಂಧ 31ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಚೈತ್ರ ನರೇಂದ್ರ ಪರ ಹನುಮಂತನಗರದಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಚುನಾವಣಾ ಆದೇಶದ ನಿಯಮಗಳನ್ನು ಗಾಳಿಗೆ ತೂರಿದರು. ಪ್ರಚಾರದ ವೇಳೆ ಅಭ್ಯರ್ಥಿ ಪರ 5 ಮಂದಿ ಮಾತ್ರ ಇರಬೇಕೆಂಬ ಚುನಾವಣಾ ಆಯೋಗದ ಆದೇಶ ಇದೆ ಆದರೆ ಇಲ್ಲಿ 50-60 ಮಂದಿ ಭಾಗವಹಿಸಿದರು. ಆಯೋಗದ ಆದೇಶ ಹಾಗೂ ನಿಯಮಗಳನ್ನ ಇಲ್ಲಿ ಸ್ವತಃ ಡಿಸಿಎಂ ಅಶ್ವಥ್ ನಾರಾಯಣ್ ಉಲ್ಲಂಘನೆ ಮಾಡಿದರು.
ಕೊರೋನಾ ಸೆಂಟರ್ ನಲ್ಲಿ ಚಿಕಿತ್ಸೆ, ಊಟ ಸರಿಯಿಲ್ಲ, ಸೋಂಕಿತರು ಆಕ್ರೋಶ: ರಾಮನಗರದ ಕಂದಾಯ ಭವನದಲ್ಲಿರುವ ಕೊರೋನಾ ಕೇರ್ ವಿರುದ್ಧ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂದಾಯ ಭವನದಲ್ಲಿ 200 ಬೆಡ್ ಇದ್ದರೂ ಸಹ ಯಾವುದೇ ಮೂಲಭೂತ ಸೌಕರ್ಯವಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ಸೆಂಟರ್ ನಿಂದ ಸೋಂಕಿತರು ಹೊರಬಂದು ಸರ್ಕಾರದ ವಿರುದ್ಧ, ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಸೋಂಕಿತರನ್ನ ಸಮಾಧಾನ ಪಡಿಸಲು ಪೊಲೀಸರ ಹರಸಾಹಸ ಪಟ್ಟು ಮನವಿ ಮಾಡಿದ ನಂತರ ಸೋಂಕಿತರು ಒಳಗಡೆಗೆ ಹೋಗಿದ್ದಾರೆ.
ಇನ್ನು ಈ ಸೆಂಟರ್ ನಲ್ಲಿ 196 ಸೋಂಕಿತರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಕೊರೋನಾ ಕೇರ್ ಸೆಂಟರ್ ನಲ್ಲಿ ಮೋಟರ್ ಕೆಟ್ಟುಹೋದ ಹಿನ್ನೆಲೆ ಸೋಂಕಿತರು ಅರ್ಧ ಗಂಟೆಗೂ ಹೆಚ್ಚು ಕಾಲ ನೀರಿನ ಸಮಸ್ಯೆಯಿಂದ ಪರದಾಡಿದ್ದಾರೆ. ಈ ಹಿನ್ನೆಲೆ ಸೋಂಕಿತರು ಹೊರಗೆ ಬಂದು ಗಲಾಟೆ ಮಾಡಿದ್ದಾರೆ. ಆದರೆ ತಕ್ಷಣವೇ ಕೊರೋನಾ ಕೇರ್ ಸೆಂಟರ್ ಗೆ ಹೊಸ ಮೋಟರ್ ಅಳವಡಿಕೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಇದು ಬಹಳ ಚಿಕ್ಕ ಸಮಸ್ಯೆ, ಕೊರೋನಾ ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರು, ಚಿಕಿತ್ಸೆ, ಊಟವನ್ನ ಸರಿಯಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಡಾ.ನಿರಂಜನ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ