ದಂಡ ಕಟ್ಟಿ ರಶೀದಿ ಕೇಳೋದೇ ತಪ್ಪಾ..? ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಇಂದೆಂಥಾ ದರ್ಪ..?

ತಪ್ಪು ಮಾಡಿ ರಶೀದಿ ಕೇಳುತ್ತೀಯಾ ಎಂದು ಸಿಪಿಐ ನಿಂಗನಗೌಡ ಮತ್ತು  ನಾಲ್ವರು ಪೇದೆಗಳು ಯೋಧನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಮಾಜಿ ಸೈನಿಕ ವೀರಪ್ಪ

ಮಾಜಿ ಸೈನಿಕ ವೀರಪ್ಪ

 • Share this:
  ದಾವಣಗೆರೆ: ಕೊರೋನಾ ನಿಯಂತ್ರಣಕ್ಕೆ ಮಾಸ್ಕ್​​ ಕಡ್ಡಾಯ ನಿಯಮ ಜಾರಿಗೆಗೊಳಿಸಿ ದಂಡ ನಿಗದಿ ಮಾಡಲಾಗಿದೆ. ಪೊಲೀಸರ ಸಾರ್ವಜನಿಕವಾಗಿ ಮಾಸ್ಕ್​​ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ಹೀಗೆ ದಂಡ ವಸೂಲಿ ಮಾಡುವ ಪೊಲೀಸರು, ಮಾರ್ಷಲ್​ಗಳು ಕಟ್ಟಿದ ದಂಡಕ್ಕೆ ರಶೀದಿ ನೀಡಬೇಕು. ಆದರೆ ದಾವಣಗೆರೆ ತಾಲೂಕಿನ ಆನಗೋಡದಲ್ಲಿ ಮಾಜಿ ಸೈನಿಕರೊಬ್ಬರು ಮಾಸ್ಕ್​ ಧರಿಸದ್ದಕ್ಕೆ ದಂಡ ಕಟ್ಟಿ ರಶೀದಿ ಕೇಳಿದ್ದೇ ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿದೆ.

  ಮಾಜಿ ಯೋಧ ವೀರಪ್ಪ ಎಂಬುವರು ದಾವಣಗೆರೆ ತಾಲೂಕಿನ ಆನಗೋಡು ಮಾರ್ಗವಾಗಿ ಊರಿಗೆ ಹೊರಟಿದ್ದರು. ಈ ವೇಳೆ ಮಾಜಿ ಯೋಧ ಮಾಸ್ಕ್ ಧರಿಸದೆ ಇರೋದನ್ನ ಗಮನಿಸಿದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ನಿಂಗನಗೌಡ ಅವರು ಮಾಜಿ ಯೋಧನ ಬೈಕ್ ತಡೆದು ಅವರಿಗೆ ದಂಡ ವಿಧಿಸಿದ್ದಾರೆ. ತನ್ನ ತಪ್ಪನ್ನು ಒಪ್ಪಿಕೊಂಡು ಮಾಜಿ ಯೋಧ ವೀರಪ್ಪ ಕೂಡ 250 ರೂಪಾಯಿ ದಂಡ ಕೂಡ ಕಟ್ಟಿದ್ದಾರೆ.  ಬಳಿಕ ದಂಡ ಕಟ್ಟಿದ್ದಕ್ಕೆ ವಿನಯವಾಗಿ ವೀರಪ್ಪ ಅವರು ಪೊಲೀಸರ ಬಳಿ ರಶೀದಿ ಕೇಳಿದ್ದಾರೆ. ಈ ರಶೀದಿಯೇ ದೊಡ್ಡ ಅವಾಂತರ ಕಾರಣವಾಗಿದೆ.

  ತಪ್ಪು ಮಾಡಿ ರಶೀದಿ ಕೇಳುತ್ತೀಯಾ ಎಂದು ಸಿಪಿಐ ನಿಂಗನಗೌಡ ಮತ್ತು  ನಾಲ್ವರು ಪೇದೆಗಳು ಯೋಧನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಾನೊಬ್ಬ ಮಾಜಿ ಸೈನಿಕ ಅಂತ ಪರಿಪರಿಯಾಗಿ ಹೇಳಿದರೂ ಮಾತು ಕೇಳದೇ ಯೋಧನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವೀರಪ್ಪ ಅವರ ಭುಜ ಮತ್ತು ಪಾದದ ಮೂಳೆ ಮುರಿದಿದ್ದು, ವೈದ್ಯರು ಮೂರು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ..

  ತಮ್ಮ ಮೇಲೆ ಆದ ಹಲ್ಲೆಯನ್ನ ಖಂಡಿಸಿ ವೀರಪ್ಪ ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರು ಅವರು ದೂರು ಪಡೆದಿಲ್ಲ. ಇತ್ತ ಜಿಲ್ಲಾ ವರಿಷ್ಠಾಧಿಕಾರಿ ಹನುಮಂತ ರಾಯ್ ಹತ್ತಿರ ಹೋಗಿ ತಮ್ಮಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ, ಅದರೆ ಅವರು ನೀವು ಠಾಣೆಗೆ ಹೋಗಿ ದೂರು ನೀಡಿ ಎಂದು ಹೇಳಿದ್ದಾರೆ. ಇದರಿಂದ ತಮಗೆ ನ್ಯಾಯ ಕೊಡುವಂತೆ ಮಾಧ್ಯಮದ ಎದುರು ವೀರಪ್ಪ ಅಳಲು ತೋಡಿಕೊಂಡಿದ್ದಾರೆ.

  ಈ ಘಟನೆಯನ್ನ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಖಂಡಿಸಿದ್ದು. ಮಾಜಿ ಯೋಧರಿಗೆ ಗೌರವ ನೀಡದೆ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದು ಸರಿಯಲ್ಲ. ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯೋಧರಾಗಿರಲಿ ಅಥವಾ ಮಾಜಿ ಯೋಧರಾಗಿರಲಿ ಅವರಿಗೆ ಗೌರವ ನೀಡೋದು ದೇಶದ ಪ್ರತಿಯೊಬ್ಬರ ಕರ್ತವ್ಯ. ಶಿಸ್ತಿಗೆ ಹೆಸರಾಗಿರುವ ಪೊಲೀಸರೇ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದು ನಿಜಕ್ಕೂ ವಿಷಾದ ಎಂದು ಮಾಜಿ ಸೈನಿಕ ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

  ವರದಿ: ಸಂಜಯ್ ಕುಂದುವಾಡ
  Published by:Kavya V
  First published: