• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕೃತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧ: ಮಹಾಂತೇಶ್ ಬೀಳಗಿ

ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕೃತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧ: ಮಹಾಂತೇಶ್ ಬೀಳಗಿ

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯ ಭಾಷೆಯೇ ಸಾರ್ವಭೌಮ. ಜಗತ್ತಿನ ಜ್ಞಾನ ಅರಿಯಲು ಅವಶ್ಯಕ ಇದ್ದಲ್ಲಿ ಮಾತ್ರ ಆಂಗ್ಲ ಭಾಷೆ ಬಳಸಿ ಪರಿಮಿತಿ ಹಾಕೋಣ ಎಂದು ಕನ್ನಡ ರಾಜ್ಯೋತ್ಸವದ ವೇಳೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.

  • Share this:

ದಾವಣಗೆರೆ(ನ. 01): ಕನ್ನಡಿಗರ ಮನೆ ಹಬ್ಬವಾಗಿರುವ ರಾಜ್ಯೋತ್ಸವವು ಜಾತಿ, ಮತ, ಪಂಥಗಳ ಭೇದವಿಲ್ಲದೆ ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಸಹೋದರ ಭಾವನೆಯಿಂದ ಆಚರಿಸುವ ಹಬ್ಬವಾಗಿದ್ದು, ಕನ್ನಡ ಭಾಷೆಯ ಪರಿ ಹಾಗೂ ಸಂಸ್ಕೃತಿಯ ಸಿರಿಯಿಂದ ನಮ್ಮ ನಾಡು ಸಮೃದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 65 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.


ಅನಿವಾರ್ಯ ಕಾರಣಗಳಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸಮಾರಂಭಕ್ಕೆ ಆಗಮಿಸದ ಕಾರಣ, ಅವರ ಅನುಪಸ್ಥಿತಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಜಿಲ್ಲಾಧಿಕಾರಿಗಳು, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ಮಹನೀಯರನ್ನು ಸ್ಮರಿಸುವ ಸುದಿನ ಇದಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಷ್ಟು ಪ್ರಾಚೀನ ಇತಿಹಾಸವಿರುವುದರಿಂದಲೇ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದೆ. ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡು, ಕಾವೇರಿಯಿಂದ ಗೋದಾವರಿ ನದಿ ತೀರದವರೆಗೂ ತನ್ನ ಮೇರೆಗಳನ್ನು ಹೊಂದಿತ್ತು ಎಂದು ಬಣ್ಣಿಸಲಾಗಿದೆ.  ಶ್ರೀವಿಜಯ, ಪಂಪ, ರನ್ನ, ಪೊನ್ನರಾದಿಯಾಗಿ, ಬಿಎಂಶ್ರೀ, ಗೋವಿಂದ ಪೈ, ಹುಯಿಲಗೊಳ ನಾರಾಯಣರಾಯರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ, ಪು.ತೀ.ನ., ಡಿ.ಎಸ್. ಕರ್ಕಿ, ಜಿ.ಎಸ್. ಶಿವರುದ್ರಪ್ಪ, ಕೆ.ಎಸ್. ನಿಸಾರ್ ಅಹಮದ್ ಸೇರಿದಂತೆ ಇದುವರೆಗಿನ ಹಲವಾರು ಕವಿಗಳು, ಸಾಹಿತಿಗಳು ಕನ್ನಡ ನಾಡು-ನುಡಿಯ ಸಿರಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೆ ಕನ್ನಡದ ದಾಸವರೇಣ್ಯರಾದ ಪುರಂದರ ದಾಸರು, ಕನಕದಾಸರು, ವಿಜಯದಾಸರು ಭಕ್ತಿ ಪಂಥದ ಕೀರ್ತನೆಗಳ ಮೂಲಕ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.


ಇದನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್​ನಿಂದ ಕರಾಳ ದಿನ; ನಿಯಮಮೀರಿ ರಾಜ್ಯೋತ್ಸವ ಆಚರಿಸಿದ ಕರವೇಗೆ ಲಾಠಿ ರುಚಿ


ಪ್ರತಿಯೊಂದು ರಾಜ್ಯದ ರಾಜ್ಯ ಭಾಷೆಯು ಆ ನೆಲದ ಸಾರ್ವಭೌಮ ಭಾಷೆಯಾಗಿರುತ್ತದೆ. ಇದನ್ನು ಸಂವಿಧಾನ ಅಂಗೀಕರಿಸಿ ಮಾನ್ಯ ಮಾಡಿದೆ.  ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯ ಭಾಷೆ ಸಾರ್ವಭೌಮ ಭಾಷೆಯೇ ಹೊರತು ಬೇರೆ ಭಾಷೆಯಲ್ಲ. ಜಗತ್ತಿನ ಜ್ಞಾನ ವಿಜ್ಞಾನಗಳನ್ನು ಅರ್ಥ ಮಾಡಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಆಂಗ್ಲ ಭಾಷೆ ಒಂದು ಬೆಳಕಿಂಡಿಯಿದ್ದಂತೆ. ಇದನ್ನು ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸಿ, ಅದಕ್ಕೊಂದು ಪರಿಮಿತಿ ಹಾಕೋಣ ಎಂದು ಮಹಾಂತೇಶ ಬೀಳಗಿ ಕರೆ ನೀಡಿದರು.


ಹಲವು ಭಾಷೆಗಳ ವೈವಿಧ್ಯಪೂರ್ಣ ದೇಶ ನಮ್ಮ ಭಾರತ. ಕನ್ನಡಾಭಿಮಾನವೆಂದರೆ ಇತರೆ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತಾ ಸರಿಯಲ್ಲ. ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ಚಳವಳಿಯಲ್ಲಿ ದಾವಣಗೆರೆ ಜಿಲ್ಲೆಯ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಮುಂಚೂಣಿಯಲ್ಲಿದ್ದರೆಂಬುದುನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅಗತ್ಯವಾಗಿದೆ. ಇಲ್ಲಿಯವರೆಗೂ ಅನೇಕ ಸವಾಲುಗಳು ಎದುರಾದರೂ ಕನ್ನಡ ಭಾಷೆ ತನ್ನತನವನ್ನು ಬಿಟ್ಟುಕೊಡದೆ ಎಲ್ಲ ಹೊರಗಿನವರನ್ನೂ ತನ್ನೊಳಗೆ ತೆಗೆದುಕೊಂಡು ಸಮೃದ್ಧ ಭಾಷೆಯಾಗಿ ಬೆಳೆದು ನಿಂತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.


ಇದನ್ನೂ ಓದಿ: ದುಬೈನಲ್ಲಿ ಜನಪ್ರಿಯವಾಗುತ್ತಿದೆ ಕನ್ನಡ ಶಾಲೆ; ಮಂಡ್ಯ ಸೇರಿ ದುಬೈ ಕನ್ನಡಿಗರ ಶ್ಲಾಘನೀಯ ಕಾರ್ಯ


ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಸಾರ್ವಜನಿಕರೂ ಕೂಡ ಅಗತ್ಯ ಸಹಕಾರ ನೀಡುತ್ತಿದ್ದು, ಕೊರೋನಾವನ್ನು ನಿರ್ಮೂಲನೆ ಮಾಡಲು ದೈಹಿಕ ಅಂತರ, ಸ್ಯಾನಿಟೈಸರ್‍ಗಳ ಬಳಕೆ ಮತ್ತು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು ಅತ್ಯಗತ್ಯವಾಗಿದೆ. ಮುಂಬರುವ ಚಳಿಗಾಲದಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಯಾರೂ ಕೂಡ ನಿರ್ಲಕ್ಷ್ಯ ಮಾಡದೆ, ಮೈಮರೆಯದೆ ಇನ್ನಷ್ಟು ಹೆಚ್ಚು ಜಾಗರೂಕತೆ ವಹಿಸುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಹೀಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪದೇ ಪದೇ ಸಾಬೂನಿನಿಂದ ಕೈ ತೊಳೆಯುವುದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.


ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಅಧಿಕಾರಿಗಳಾದ ಎಸ್.ಆರ್. ಕಿರಣ್ ಕುಮಾರ್ ಹಾಗೂ ಹೊನ್ನೂರಪ್ಪ ಅವರ ತಂಡದಿಂದ ಗೌರವ ವಂದನೆ ಸಲ್ಲಿಕೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಇತರರು ಭಾಗವಹಿಸಿದ್ದರು.


ಇದನ್ನೂ ಓದಿ: ರಾಜ್ಯೋತ್ಸವ ದಿನ ಕನ್ನಡ ಹಾಡು ಹೇಳಿ ಗಮನ ಸೆಳೆದ ಸಚಿವೆ: ಮಮ್ಮಿ, ಡ್ಯಾಡಿ ಬೇಡ, ಅಪ್ಪ, ಅಮ್ಮ ಹೇಳಿ ಎಂದ ಶಶಿಕಲಾ ಜೊಲ್ಲೆ


ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಗೆ ಎಲ್ಲ ಗಣ್ಯಮಾನ್ಯರು, ಅಧಿಕಾರಿಗಳು ಪುಷ್ಪಾರ್ಚನೆ ಮಾಡುವುದರ ಮೂಲಕ ಭಕ್ತಿ ವಂದನೆ ಸಲ್ಲಿಸಿದರು.  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ, ಪೊಲೀಸ್ ಬ್ಯಾಂಡ್ ಜೊತೆಗೆ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಲಾಯಿತು. ಸಂಗೀತ ಶಿಕ್ಷಕರ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಕೋವಿಡ್ ನಿಯಂತ್ರಣ ಕಾರಣಕ್ಕಾಗಿ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯ ಶಿಷ್ಠಾಚಾರದಂತೆ ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ದಾವಣಗೆರೆ ನಗರಪಾಲಿಕೆ ಕಚೇರಿ ಆವರಣದಲ್ಲಿ ಕನ್ನಡತಾಯಿ ಭುವನೇಶ್ವರಿ ದೇವಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನಗರಪಾಲಿಕೆ ಮಹಾಪೌರರಾದ ಅಜಯ ಕುಮಾರ್, ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ನಗರಪಾಲಿಕೆ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು.


ವರದಿ: ಹೆಚ್ ಎಂ ಪಿ ಕುಮಾರ್

top videos
    First published: