• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸರ್ವೇಕ್ಷಣೆ ಹೆಚ್ಚಿಸುವ ಮೂಲಕ ಕೊರೋನಾ ಹತೋಟಿಗೆ ಕ್ರಮ: ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ

ಸರ್ವೇಕ್ಷಣೆ ಹೆಚ್ಚಿಸುವ ಮೂಲಕ ಕೊರೋನಾ ಹತೋಟಿಗೆ ಕ್ರಮ: ದಾವಣಗೆರೆ ಜಿಲ್ಲಾಧಿಕಾರಿ ಸೂಚನೆ

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ

ಎಷ್ಟೇ ಕೇಸ್ ಬಂದರೂ ನಿಭಾಯಿಸುವ ವ್ಯವಸ್ಥೆ ಜಿಲ್ಲೆಯಲ್ಲಿ ಇದೆ. ಈಗ ಮನೆಮನೆಗೆ ಹೋಗಿ ಸೋಂಕಿತರನ್ನು ಬೇಗ ಪತ್ತೆ ಹಚ್ಚು ಶೀಘ್ರದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ಧಾರೆ.

  • Share this:

ದಾವಣಗೆರೆ: ಜಿಲ್ಲೆಯಲ್ಲಿ ಕೋರೋನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಿದ್ದು ಈ ಪ್ರಮಾಣವನ್ನು ಕಡಿಮೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾಡಳಿತ ಭವನದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರುಗಳನ್ನು ಉದ್ದೇಶಿಸಿ ಮಾತಾನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ನಮ್ಮ ಜಿಲ್ಲೆಯ ವೈದ್ಯರ ತಂಡ ಹಾಗೂ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆಂದು ತೃಪ್ತಿ ವ್ಯಕ್ತಪಡಿಸಿದರು. ಜೊತೆಗೆ ಸಾವಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಆತಂಕ ಕೂಡ ವ್ಯಕ್ತಪಡಿಸಿದರು.


ಜಿಲ್ಲೆಯಲ್ಲಿ ಆಗುತ್ತಿರುವ ಸಾವಿನ ಪ್ರಮಾಣ ನಮ್ಮ ಕಾರ್ಯದಕ್ಷತೆಯನ್ನ ಪ್ರಶ್ನಿಸುವಂತಿದೆ. ನಮ್ಮಲ್ಲಿ ಸಾಕಷ್ಟು ತಜ್ಞ ವೈದ್ಯರುಗಳು ಇದ್ದಾಗಿಯೂ ನಾವು ಎಲ್ಲಿ ಎಡವುತ್ತಿದ್ದೇವೆ, ಹಾಗೂ ಎಲ್ಲಿ ಸರಿಪಡಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಸಾವಿನ ಪ್ರಮಾಣ ತಗ್ಗಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳೇನು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಎಷ್ಟೇ ಕೇಸ್ ಬರಲಿ ನಿಭಾಯಿಸಲು ಜಿಲ್ಲಾಡಳಿತ ತಂಡ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ವೇಕ್ಷಣ ತಂಡ ಲ್ಯಾಬ್ ಪರೀಕ್ಷಾ ಪ್ರಮಾಣ ಹೆಚ್ಚಿಸಬೇಕು. ತಾಲ್ಲೂಕುವಾರು ನೀಡಿರುವ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನಗಳನ್ನು ತೀವ್ರ ಅನಾರೋಗ್ಯ ವ್ಯಕ್ತಿಗಳು ಇರುವ ಮನೆಯ ಬಳಿಯೇ ಸಾಗಿ ಪರೀಕ್ಷೆಗೆ ಒಳಪಡಿಸಿ ಸೋಂಕಿತರನ್ನು ಪತ್ತೆ ಹಚ್ಚಬೇಕಿದೆ ಎಂದು ಸೂಚಿಸಿದರು.


ಕೇರಳ ರಾಜ್ಯದ ಮಾದರಿಯಲ್ಲಿ ಸಾಮೂಹಿಕ ಸಹಭಾಗಿತ್ವದಲ್ಲಿ ಎಲ್ಲರೂ ಮುಂದೆ ಬಂದು ಕೆಲಸ ಮಾಡಬೇಕು. ನಮ್ಮ ಜನ ಪ್ರತಿನಿಧಿಗಳು, ಮುಖಂಡರು ಈ ಕಾರ್ಯದಲ್ಲಿ ಕೈಜೋಡಿಸಬೇಕು. ಈಗಾಗಲೇ ರಚಿಸಲಾಗಿರುವ ವಾರ್ಡ್ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಮಹಾನಗರಪಾಲಿಕೆ ಆಯುಕ್ತರು ಈ ಸಮಿತಿಗಳ ತರಬೇತಿ ಕಾರ್ಯನಿರ್ವಹಣೆಯನ್ನು ಯಶಸ್ವಿಯಾಗಿ ನೋಡಿಕೊಳ್ಳಬೇಕು. ಹಾಗೂ ಮುಂದಿನ ದಿನಗಳಲ್ಲಿ ಎಷ್ಟೇ ಕೇಸ್​ಗಳು ಬಂದರೂ ನಿಭಾಯಿಸಲು ಸಿದ್ಧವಾಗಿರಬೇಕು. ಮತ್ತು ಅದಷ್ಟು ಸೋಂಕಿತರು ವೆಂಟಿಲೇಟರ್​ಗೆ ಹೋಗುವುದನ್ನು ಕಡಿಮೆ ಮಾಡಲು ತಪಾಸಣೆ ತೀವ್ರವಾಗಬೇಕು. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮೂರು ಲ್ಯಾಬ್​ಗಳು ಕೋರೋನಾ ಪರೀಕ್ಷೆಗೆ ತೊಡಗಿದ್ದು, ಇನ್ನೂ ಕ್ಷಿಪ್ರವೇಗದಲ್ಲಿ ಪರೀಕ್ಷೆ ನಡೆಸಲು ಸಿದ್ದವಾಗಬೇಕು. ಅದಕ್ಕೆ ಯಾವುದೇ ಸಹಕಾರ ಬೇಕಿದ್ದರೂ ನನ್ನನ್ನು ಕೇಳಿ. ಒಟ್ಟಾರೆ ಟೆಸ್ಟಿಂಗ್ ಸರ್ವೇಕ್ಷಣೆ ಮೂಲಕ ಸೋಂಕಿತರನ್ನು ಪತ್ತೆಹಚ್ಚಿ ಆಸ್ಪತ್ರೆಗೆ ಅದಷ್ಟು ಬೇಗ ಸೇರಿಸುವ ಕೆಲಸ ಆಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.


ಇದನ್ನೂ ಓದಿ: ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಕೊಪ್ಪಳದ 69 ಮಂದಿಗೆ ಕೊರೋನಾ ಸೋಂಕು


ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವಾನ್ ಮಾತನಾಡಿ, ಈ ಹಿಂದೆ ಕೆಲವರು ರೆಗ್ಯೂಲರ್ ಆಗಿ ಚೆಕ್ ಆಪ್‍ಗೆ ಒಳಗಾಗುತ್ತಿದ್ದರು. ಲಾಕ್‍ಡೌನ್ ನಂತರ ಈ ರೀತಿ ಮುಂಚಿತವಾಗಿ ತಪಾಸಣೆಗೆ ಒಳಗಾಗುವರು ಕಡಿಮೆಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರೋನಾ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಬಿಪಿ ಶುಗರ್​ನಂತಹ ಖಾಯಿಲೆ ಇರುವವರು ಆಸ್ಪತ್ರೆಗೆ ಬರುವುದನ್ನು ತಡಮಾಡುವುದರಿಂದ ಹೆಚ್ಚು ತೊಂದರೆಯಾಗುತ್ತಿದೆ ಎಂದರು.


ತಜ್ಞ ವೈದ್ಯರಾದ ಡಾ.ಕಾಳಪ್ಪ ಮಾತಾನಾಡಿ, ಎಸ್ ಎಸ್ ಆಸ್ಪತ್ರೆಯಲ್ಲಿ ಒಟ್ಟು 9 ಸಾವು ಸಂಭವಿಸಿವೆ. ಇದರಲ್ಲಿ 4 ಮಂದಿ ಕೊನೆಯ 4 ಗಂಟೆ ಒಳಗೆ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದ 4 ಮಂದಿ 24 ಗಂಟೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೀಗೆ ಕಡೇಘಳಿಗೆಯಲ್ಲಿ ಆಸ್ಪತ್ರೆಗೆ ಬಂದರೆ ಇತರೆ ಖಾಯಿಲೆಗಳಿರುವ ಕೊರೋನಾ ಬಾಧಿತರಾದವರನ್ನು ಉಳಿಸುವುದು ಕಷ್ಟ ಎಂದು ಎಚ್ಚರಿಸಿದರು.


ಇದನ್ನೂ ಓದಿ: ಕೋವಿಡ್-19ಗೆ ಸೆಡ್ಡು ಹೊಡೆದ ಚಾಮರಾಜನಗರದ ವೈದ್ಯರು : ಸೋಂಕಿತ ಗರ್ಭಿಣಿಗೆ ಸಿಜೇರಿಯನ್ ಮೂಲಕ ಹೆರಿಗೆ


ಡಾ. ಮೀನಾಕ್ಷಿ ಮಾಹಿತಿ ನೀಡಿ, ನಗರದಲ್ಲಿ ಒಟ್ಟು 70 ಕಂಟೈನ್‍ಮೆಂಟ್‍ಜೋನ್‍ಗಳಿವೆ. ಆರೋಗ್ಯ ಸಿಬಂದ್ದಿ ಕಡಿಮೆ ಇದ್ದಾರೆ. ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಸರ್ವೇಕ್ಷಣೆ ಸ್ವಲ್ಪ ತಡವಾಗುತ್ತಿದೆ ಎಂದರು.




ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಸಿಇಒ ಪದ್ಮಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್‍ಓ ರಾಘವೇಂದ್ರಸ್ವಾಮಿ, ಡಾ. ಸುರೇಂದ್ರ, ಡಾ. ಮಹಾಂತೇಶ್, ಡಾ. ರವಿ, ಡಾ. ಪ್ರಸಾದ್, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ.ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.


ವರದಿ: ಹೆಚ್ ಎಂ ಪಿ ಕುಮಾರ್

Published by:Vijayasarthy SN
First published: