ಹಾವೇರಿ: ಯಾಲಕ್ಕಿ ಕಂಪಿನ ನಾಡೆನಿಸಿರುವ ಹಾವೇರಿ ಈ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಸಂತ ಶಿಶುನಾಳ ಶರೀಫರು, ದಾಸಶ್ರೇಷ್ಠ ಕನಕದಾಸರು, ಶರಣ ಅಂಬಿಗರ ಚೌಡಯ್ಯ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಕೃ. ಗೋಕಾಕ, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ನಾಡೋಜ ದಿ| ಪಾಟೀಲ ಪುಟ್ಟಪ್ಪ ಇದೇ ಜಿಲ್ಲೆಯವರು. ಇವರಷ್ಟೇ ಅಲ್ಲ, ಸಾಹಿತ್ಯ, ಕಲೆ, ರಂಗಭೂಮಿ ಹೀಗೆ ಎಲ್ಲ ರೀತಿಯ ಸಾಂಸ್ಕೃತಿಕ ರಂಗದಲ್ಲಿ ಜಿಲ್ಲೆ ಹೆಸರುವಾಸಿ ಆಗಿದೆ. ಆದರೆ ಇಂಥಾ ಜಿಲ್ಲೆಗೆ ಬಂದಿರೋ ಅಕ್ಷರ ಜಾತ್ರೆ ನಡೆಸೋದು ಅದ್ಯಾಕೋ ಸುಲಭದ ಕೆಲಸವಾಗ್ತಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಜಿಲ್ಲೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸೋ ಭಾಗ್ಯ ಒಲಿದು ಬಂದಿತ್ತು. ಆಗ ಜಿಲ್ಲೆಯ ಜನರು ಎಲ್ಲಿಲ್ಲದ ಸಂಭ್ರಮ ಆಚರಿಸಿದ್ರು. ಆದ್ರೆ ಆಗ ಸಮ್ಮೇಳನವನ್ನ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ನಡೆಸಬೇಕು, ರಾಣೆಬೆನ್ನೂರಲ್ಲೇ ಸಮ್ಮೇಳನ ನಡೆಸಬೇಕು ಎಂಬ ಕೂಗು ಕೇಳಿ ಸ್ಥಳದ ಗೊಂದಲ ಶುರುವಾಯ್ತು. ಎರಡು ಬಣಗಳ ನಡುವಿನ ಸ್ಥಳದ ಗೊಂದಲ ಕೊನೆಗೂ ಬಗೆಹರಿಯಲೇ ಇಲ್ಲ. ಆಗ ಜಿಲ್ಲೆಗೆ ಒಲಿದು ಬಂದಿದ್ದ ಸಮ್ಮೇಳನ ನಡೆಸೋ ಭಾಗ್ಯವು ಸ್ಥಳದ ಗೊಂದಲದಿಂದ ಜಿಲ್ಲೆಯಿಂದ ಕೈ ತಪ್ಪಿ ಹೋಗಿತ್ತು. ಈಗ 86ನೇ ಸಮ್ಮೇಳನ ನಡೆಸೋ ಭಾಗ್ಯ ಮತ್ತೆ ಒಲಿದು ಬಂದಿದೆ. ಆದ್ರೆ ಈಗಲೂ ಸಮ್ಮೇಳನ ನಡೆಸೋ ದಿನಾಂಕದ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ.
ಕಳೆದ ಕೆಲವು ದಿನಗಳ ಹಿಂದೆ 86ನೇ ಸಾಹಿತ್ಯ ಸಮ್ಮೇಳನ ನಡೆಸುವ ದಿನಾಂಕ ಘೋಷಣೆ ಮಾಡಲಾಗಿತ್ತು. ಫೆಬ್ರುವರಿ 26, 27 ಮತ್ತು 28ರಂದು ಮೂರು ದಿನಗಳ ಕಾಲ ಸಮ್ಮೇಳನ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಸಮ್ಮೇಳನದ ಅಧ್ಯಕ್ಷರಾಗಿ ದೊಡ್ಡರಂಗೇಗೌಡರ ಹೆಸರನ್ನ ಘೋಷಿಸಲಾಗಿದೆ. ಸಮ್ಮೇಳನ ನಡೆಸುವ ಸ್ಥಳವನ್ನ ಹಾವೇರಿ ನಗರದ ಜಿ.ಎಚ್. ಕಾಲೇಜು ಬಳಿ ಇರೋ ಖಾಲಿ ಜಾಗದಲ್ಲಿ ಅಂತಾ ಸ್ಥಳ ನಿಗದಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತಿಮಗೊಳಿಸಿದ್ದಾರೆ. ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಅಂತಾ ಜಿಲ್ಲೆಯ ಒಬ್ಬೊಬ್ಬ ಶಾಸಕರ ನೇತೃತ್ವದಲ್ಲಿ ವಸತಿ, ಊಟ, ಸ್ವಾಗತ ಸಮಿತಿ ಅಂತಾ ಹಲವು ಸಮಿತಿಗಳನ್ನ ರಚನೆ ಮಾಡಲಾಗಿದೆ. ಸಮಿತಿಗಳ ಸಭೆಯೂ ನಡೆದಿವೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಮ್ಮೇಳನದ ಯಶಸ್ಸಿನ ಬಗ್ಗೆಯೂ ಸಭೆ ನಡೆದಿತ್ತು. ಆದ್ರೆ ಕೋವಿಡ್ ನಿಯಮಗಳು ಸಡಿಲಿಕೆ ಆಗದಿರೋದು ಸೇರಿದಂತೆ ಕೆಲವು ಕಾರಣಗಳಿಂದ ಸಮ್ಮೇಳನ ನಡೆಸೋ ದಿನಾಂಕವನ್ನ ಮುಂದೂಡಲಾಗಿದೆ. ಈವರೆಗೂ ಸಮ್ಮೇಳನ ನಡೆಸೋ ಸ್ಪಷ್ಟವಾದ ದಿನಾಂಕ ಘೋಷಿಸಿಲ್ಲ.
ಇದನ್ನೂ ಓದಿ: Corona Hotspots - ಬೆಂಗಳೂರಿನ ಈ 10 ವಾರ್ಡ್ಗಳಲ್ಲಿ ಹುಷಾರ್; ಹೆಚ್ಚಿವೆ ಕೊರೋನಾ ಕೇಸ್ಗಳು
ಮತ್ತೊಂದೆಡೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಘೋಷಣೆ ಆಗಿದೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಮೀಪಿಸ್ತಿವೆ. ಅಂಥದ್ದರಲ್ಲಿ ಸಮ್ಮೇಳನ ಯಾವಾಗ ನಡೆಯುತ್ತೆ ಅನ್ನೋದು ಜಿಲ್ಲೆಯ ಸಾಹಿತ್ಯ ಪ್ರೇಮಿಗಳು ಹಾಗೂ ಸಾಮಾನ್ಯ ಜನರಲ್ಲಿ ಗೊಂದಲದ ವಾತಾವರಣ ಮೂಡಿದೆ. ಹೀಗಾಗಿ ಸಮ್ಮೇಳನ ನಡೆಸೋ ಸಂಬಂಧ ಗಟ್ಟಿ ನಿರ್ಧಾರ ಕೈಗೊಳ್ಳಬೇಕಿದೆ.
ಜಿಲ್ಲೆಗೆ ಹಿಂದೊಮ್ಮೆ ಸಮ್ಮೇಳನ ನಡೆಸೋ ಆತಿಥ್ಯ ಬಂದಾಗ ಜಿಲ್ಲೆಯ ಜನರು ಎಲ್ಲಿಲ್ಲದ ಖುಷಿ ಅನುಭವಿಸಿದ್ದರು. ಆದ್ರೆ ಸ್ಥಳದ ಗೊಂದಲದಿಂದ ಆಗ ಸಮ್ಮೇಳನ ಜಿಲ್ಲೆಯಿಂದ ತಪ್ಪಿ ಹೋಗಿ ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿತ್ತು. ಆದ್ರೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲೆಗೆ ಘೋಷಣೆ ಆಗ್ತಿದ್ದಂತೆ ಎಲ್ಲವನ್ನ ಮರೆತು ಜಿಲ್ಲೆಯ ಜನರು ಮತ್ತೆ ಖುಷಿ ಆಚರಿಸಿದ್ರು. ಸಂಭ್ರಮದಿಂದ ಅಕ್ಷರ ಜಾತ್ರೆಯ ತೇರು ಎಳೆಯೋ ಸಿದ್ಧತೆಯಲ್ಲಿದ್ರು. ಆದ್ರೆ ಈಗ ಒಂದು ಬಾರಿ ನಿಗದಿಯಾಗಿದ್ದ ಸಮ್ಮೇಳನದ ದಿನಾಂಕ ಮುಂದೂಡಿಕೆ ಆಗಿದೆ. ಮತ್ತೆ ಈವರೆಗೂ ಸಮ್ಮೇಳನದ ದಿನಾಂಕ ಘೋಷಣೆ ಆಗಿಲ್ಲ. ಹೀಗಾಗಿ ಜಿಲ್ಲೆಗೆ ಸಾಹಿತ್ಯ ಸಮ್ಮೇಳನ ಮತ್ತೊಮ್ಮೆ ಒಲಿದು ಬಂದರೂ ಇನ್ನೂ ಅಕ್ಷರ ಜಾತ್ರೆಯ ತೇರು ಎಳೆಯಲು ಕಾಲ ಕೂಡಿ ಬರದಿರೋದು ಜಿಲ್ಲೆಯ ಜನರು ಹಾಗೂ ಸಾಹಿತ್ಯಾಸ್ತಕರಲ್ಲಿ ನಿರಾಸೆ ಮೂಡಿಸಿದೆ.
ವರದಿ: ಮಂಜುನಾಥ್ ತಳವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ