• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಪಿಎಸ್ಎಸ್​ಕೆ ಕಾರ್ಖಾನೆ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ - ಜೆಡಿಎಸ್ ಶಾಸಕರ ಆಕ್ಷೇಪಕ್ಕೆ ಮುರುಗೇಶ್ ನಿರಾಣಿ ತಿರುಗೇಟು

ಪಿಎಸ್ಎಸ್​ಕೆ ಕಾರ್ಖಾನೆ ಪುನರಾರಂಭಕ್ಕೆ ಮುಹೂರ್ತ ಫಿಕ್ಸ್ - ಜೆಡಿಎಸ್ ಶಾಸಕರ ಆಕ್ಷೇಪಕ್ಕೆ ಮುರುಗೇಶ್ ನಿರಾಣಿ ತಿರುಗೇಟು

ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆ

ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆ

3 ತಿಂಗಳಲ್ಲಿ ಪಿಎಸ್​ಎಸ್​ಕೆ ಆರಂಭಿಸುವ ಗುರಿ ಇದೆ. ಉತ್ತರ ಕರ್ನಾಟಕ ಮಾದರಿಯಲ್ಲೇ ಇಲ್ಲಿನ ರೈತರಿಗೂ ನೆರವು ನೀಡುತ್ತೇನೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಗುತ್ತಿಗೆ ಪಡೆದಿದ್ದೇನೆ

  • Share this:

ಮಂಡ್ಯ(ಜೂ.10): ಕಳೆದ ನಾಲ್ಕೈದು ವರ್ಷಗಳಿಂದ ಸ್ಥಗಿತವಾಗಿದ್ದ ಪಿಎಸ್​ಎಸ್​ಕೆ ಕಾರ್ಖಾನೆ ಪುನರಾರಂಭ ಕ್ಕೆ ಮುಹೂರ್ತ ನಿಗಧಿಯಾಗಿದೆ. ಕಾರ್ಖಾನೆಯ ಗುತ್ತಿಗೆಯನ್ನ ಮಾಜಿ ಸಚಿವ ಮುರುಗೇಶ ನಿರಾಣಿ ಪಡೆದುಕೊಂಡಿದ್ದಾರೆ. ಈ ನಡುವೆಯೇ ಕಾರ್ಖಾನೆ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿ ಬಂದಿದೆ. ಕಾರ್ಖಾನೆಯನ್ನ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿರುವುದಕ್ಕೆ ಜೆಡಿಎಸ್ ಶಾಸಕರೊಬ್ಬರು ಮತ್ತು ರೈತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಹೌದು! ಕಳೆದ ನಾಲ್ಕೈದು ವರ್ಷ ಗಳಿಂದ ಸ್ಥಗಿತವಾಗಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಹೂರ್ತ ಫಿಕ್ಸಾಗಿದೆ. ಸ್ಥಳೀಯ ರೈತರು, ಜನಪ್ರತಿನಿಧಿಗಳ ಆಗ್ರಹದಂತೆ ಸರ್ಕಾರ ಕಾರ್ಖಾನೆಯನ್ನ ಖಾಸಗಿಯವರಿಗೆ ಗುತ್ತಿಗೆ ನೀಡಿದೆ. 405 ಕೋಟಿ ಮೊತ್ತಕ್ಕೆ ಬಿಡ್ ಕರೆದಿರುವ ನಿರಾಣಿ ಶುಗರ್ಸ್ ಗೆ ಕೆಲವು ಷರತ್ತುಗಳನ್ನ ವಿಧಿಸಿ ಸರ್ಕಾರ, 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕಾರ್ಖಾನೆ ಸ್ಥಗಿತವಾಗಿದ್ದ ಕಾರಣ ಕಾರ್ಮಿಕರು, ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕಾರ್ಖಾನೆ ಆರಂಭವಾಗುತ್ತಿರುವುದಕ್ಕೆ ರೈತರು, ಕಾರ್ಮಿಕರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.


ಇನ್ನು ಈ ನಡುವೆ ಸರ್ಕಾರದ ನಡೆಗೆ ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ರೈತ ನಾಯಕಿ ಸುನಂದ ಜಯರಾಂ ಅಸಮಧಾನ ಹೊರ ಹಾಕಿದ್ದಾರೆ. ಈ ಹಿಂದೆ ಜಿಲ್ಲೆಯ ಜನಪ್ರತಿನಿಧಿಗಳೆಲ್ಲಾ ಸಿಎಂ ಭೇಟಿಯಾಗಿ ಖಾಸಗಿಯವರಿಗೆ ಕಾರ್ಖಾನೆ ನೀಡುವಂತೆ ಸಲಹೆ ನೀಡಿದ್ದೇವು. ಅದರಂತೆ ಖಾಸಗಿಯವರಿಗೆ ನೀಡಿದ್ದಾರೆ. ಆದರೆ, ಸರ್ಕಾರ ರಾಜಕೀಯೇತರ ಕಂಪನಿಗೆ ಗುತ್ತಿಗೆ ನೀಡುವ ಬದಲು, ರಾಜಕೀಯ ವ್ಯಕ್ತಿಗೆ ನೀಡಿರುವುದು ಸರಿಯಲ್ಲ. ಇನ್ನು 40 ವರ್ಷ ಎನ್ನುವುದು ಒಂದು ತಲೆಮಾರು ಆಗುತ್ತೆ. ಅಷ್ಟು ಧೀರ್ಘಾವಧಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲ. ಮೊದಲ 10 ವರ್ಷದ ಕಾರ್ಯ ಚಟುವಟಿಕೆ ನೋಡಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಬಹುದಿತ್ತು. 405 ಕೋಟಿ ಬೃಹತ್ ಮೊತ್ತಕ್ಕೆ ಟೆಂಡರ್ ಆಗಿದೆ. ಇನ್ನೂ ಕ್ಯಾಬಿನೆಟ್ ಒಪ್ಪಿಗೆ ಆಗಿಲ್ಲ. ಆಗಲೇ ಕಾರ್ಖಾನೆಯನ್ನ ನಿರಾಣಿಯವರು ತಮ್ಮ ವಶಕ್ಕೆ ಪಡೆದಿರುವುದು ಸರಿಯಲ್ಲ. ಉತ್ತರ ಕರ್ನಾಟಕ ಭಾಗದ ರೈತರಿಗೆ ಕಬ್ಬಿನ ಬಾಕಿ ಹಣ ಕೊಟ್ಟಿಲ್ಲ. ಈಗ ಇನ್ನೊಂದು ಮುಖವಾಡ ಹಾಕಿಕೊಂಡು ಬಂದಿದ್ದಾರೆ‌.. ಮೊದಲು ಅಲ್ಲಿನ ಜನರ ಬಾಕಿ ಕೊಟ್ಟು ಬರಲಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇನ್ನು ಆರೋಪದ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ ನಿರಾಣಿ ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಕಾರ್ಖಾನೆಯ ಸ್ಥಿತಿಗತಿ ಪರಿಶೀಲಿಸಿದ ನಿರಾಣಿ, ಕಾರ್ಖಾನೆ ಬಗ್ಗೆ ನೌಕರರಿಂದ ಮಾಹಿತಿ ಪಡೆದರು. ಕಾರ್ಖಾನೆಯ ಪುನಶ್ಚೇತನ, ಪುನರಾರಂಭ ಕುರಿತು ರೈತರು, ನೌಕರರ ಚರ್ಚೆ ಮಾಡಿದರು.


ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುರುಗೇಶ್ ನಿರಾಣಿ, ವಿರೋಧಿಗಳಿಗೆ ತಮ್ಮದೇ ಗುತ್ತಿಗೆ ಕಾನೂನು ಬದ್ಧವಾಗಿ, ಪಾರದರ್ಶಕವಾಗಿದೆ. 3 ತಿಂಗಳಲ್ಲಿ ಪಿಎಸ್​ಎಸ್​ಕೆ ಆರಂಭಿಸುವ ಗುರಿ ಇದೆ. ಉತ್ತರ ಕರ್ನಾಟಕ ಮಾದರಿಯಲ್ಲೇ ಇಲ್ಲಿನ ರೈತರಿಗೂ ನೆರವು ನೀಡುತ್ತೇನೆ. ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಗುತ್ತಿಗೆ ಪಡೆದಿದ್ದೇನೆ. ರಾಜಕೀಯ ವ್ಯಕ್ತಿಗಿಂತ ಉದ್ಯಮಿಯಾಗಿ ಕಾರ್ಖಾನೆ ಗುತ್ತಿಗೆ. ನನ್ನ, ನನ್ನ ಕಂಪನಿ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದೆ. ನಾನು ಕೂಡ ಕರ್ನಾಟಕದಲ್ಲೇ, ರೈತಾಪಿ ವರ್ಗದಲ್ಲಿ ಹುಟ್ಟಿದವನು. ಇಲ್ಲಿ ಹಣ ಸಂಪಾದಿಸಿ ದೇಶ ಬಿಟ್ಟು ಹೋಗುವುದಕ್ಕೆ ಬಂದಿಲ್ಲ.  ಆರೋಪ ಮಾಡುವವರಿಗೆ ತಾಕತ್ತು ಇದ್ದರೇ ಒಂದು ಕಾರ್ಖಾನೆ ನಡೆಸಲಿ. ಮೂರ್ನಾಲ್ಕು ಕಾರ್ಖಾನೆ ಮಾಡಿ, 70 ಸಾವಿರ ಮಂದಿಗೆ ಉದ್ಯೋಗ ಕೊಡುವುದು ಸುಲಭವಲ್ಲ ಅಂತಾ ತಿರುಗೇಟು ನೀಡಿದರು.


ಇದನ್ನೂ ಓದಿ : ರಾಮನಗರದ ಲಕ್ಕೋಜನಹಳ್ಳಿಯಲ್ಲಿ 6 ತಿಂಗಳ ಹೆಣ್ಣು ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು


ಒಟ್ಟಾರೆ  ನಾಲ್ಕೈದು ವರ್ಷಗಳಿಂದ ಸ್ಥಗಿತವಾಗಿದ್ದ ಪಿಎಸ್​ಎಸ್​ಕೆ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪ ಏನೇ ಇರಲಿ. ಶೀಘ್ರದಲ್ಲೇ ಕಾರ್ಖಾನೆ ಆರಂಭವಾಗಲಿ ಕಾರ್ಖಾನೆಯನ್ನೇ ನಂಬಿರುವ ಈ ಭಾಗದ ರೈತರು, ಕಾರ್ಮಿಕರ ಹಿತ ಕಾಯಲಿ ಎಂಬುದು ಎಲ್ಲರ ಆಶಯ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು