ನಿವಾಸಿಗಳ ತೊಳಲಾಟ, ಕೈ-ಕಮಲ ಕೆಸರೆರಚಾಟ: ಮುಂದುವರೆದ ದಾಸರಹಳ್ಳಿ ಸ್ಲಂ ನಿವಾಸಿಗಳ ಧರಣಿ!
ಇಂದು ಸ್ಲಂ ನಿವಾಸಿಗಳನ್ನು ಭೇಟಿ ಮಾಡಿದ ಸ್ಲಂ ಬೋರ್ಡ್ ಅಧಿಕಾರಿಗಳು ಕೋರ್ಟ್ ಆದೇಶದಂತೆ ತಾತ್ಕಾಲಿಕವಾಗಿ ವಸತಿ ಏರ್ಪಾಡು ಮಾಡುತ್ತೇವೆ ಅಲ್ಲಿಗೆ ಹೊರಡಿ, ಉಳಿದಂತೆ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಹಾಗೇ ಮಾಡುತ್ತೇವೆ ಎಂದರು.
ಅಗ್ರಹಾರ ದಾಸರಹಳ್ಳಿ ಸ್ಲಂ ನಿವಾಸಿಗಳು ಇಂದೂ ಕೂಡ ರಸ್ತೆಯಲ್ಲೇ ದಿನ ಕಳೆದರು. ನಿನ್ನೆ ನಮ್ಮ ಮನೆ ನಮಗೆ ವಾಪಾಸ್ ಸಿಗುತ್ತೆ ಅನ್ಕೊಂಡಿದ್ದ ನಿವಾಸಿಗಳಿಗೆ ಕೋರ್ಟ್ ಆದೇಶ ಸಿಡಿಲುಬಡಿದಂತಿತ್ತು. ಹೀಗಾಗಿ ಮೂರನೇ ದಿನವೂ ರಸ್ತೆಯಲ್ಲಿ ಪೆಂಡಾಲ್ ಹಾಕಿ ಕೂರುವ ಸ್ಥಿತಿಯಾಗಿತ್ತು. ಇಂದಿಗೆ ಮೂರು ದಿನವಾಯ್ತು. ಅಗ್ರಹಾರ ದಾಸರಹಳ್ಳಿ ಸ್ಲಂ ನಿವಾಸಿಗಳನ್ನು ತೆರವು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಪ್ರಕರಣ ಕೋರ್ಟ್ ಮುಂದಿದೆ. ಹೀಗಾಗಿ ಸ್ಲಂ ಬೋರ್ಡ್ ಆಗಲಿ ನಿವಾಸಿಗಳಿಗಾಗಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ಎರಡು ಬಾರಿ ಈ ಪ್ರಕರಣದ ಕುರಿತು ಆಲಿಸಿದ ನ್ಯಾಯಾಲಯ ಎರಡು ವಾರಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಾಗೂ ತೆರವಾದ ನಿವಾಸಿಗಳಿಗೆ ಅಗತ್ಯವಿದ್ದರೆ ತಾತ್ಕಾಲಿಕ ವಸತಿ ಕಲ್ಪಿಸುವಂತೆ ಆದೇಶಿಸಿತ್ತು. ಹೀಗಾಗಿ ಮನೆ ಕಳೆದುಕೊಂಡ ನಿವಾಸಿಗಳು ಇನ್ನೂ ರಸ್ತೆಯಲ್ಲೇ ಪೆಂಡಾಲ್ ಹಾಕಿ ದಿನ ದೂಡುತ್ತಿದ್ದಾರೆ.
ಇಂದು ಸ್ಲಂ ನಿವಾಸಿಗಳನ್ನು ಭೇಟಿ ಮಾಡಿದ ಸ್ಲಂ ಬೋರ್ಡ್ ಅಧಿಕಾರಿಗಳು ಕೋರ್ಟ್ ಆದೇಶದಂತೆ ತಾತ್ಕಾಲಿಕವಾಗಿ ವಸತಿ ಏರ್ಪಾಡು ಮಾಡುತ್ತೇವೆ ಅಲ್ಲಿಗೆ ಹೊರಡಿ, ಉಳಿದಂತೆ ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಹಾಗೇ ಮಾಡುತ್ತೇವೆ ಎಂದರು. ಈ ವೇಳೆ ಆಕ್ರೋಶಗೊಂಡ ನಿವಾಸಿಗಳು ನಾವು ಎಲ್ಲಿಗೂ ಬರುವುದಿಲ್ಲ. ನಮ್ಮ ಮನೆ ವಾಪಾಸ್ ಕೊಡೋವರೆಗೂ ಇಲ್ಲೇ ಸಾಯುತ್ತೇವೆ ಎಂಬ ಹಠಕ್ಕೆ ಬಿದ್ದರು.
ಈ ವೇಳೆ ಮಾತನಾಡಿದ ಸ್ಲಂ ಬೋರ್ಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುಧೀರ್, ಒಟ್ಟು 16 ಕುಟುಂಬಗಳು ಈ ಸಂಬಂಧ ಕೋರ್ಟ್ ಹೋಗಿದೆ. ಹೀಗಾಗಿ ಮುಂದಿನದ್ದು ಕೋರ್ಟ್ ತೀರ್ಮಾನ ಮಾಡಲಿದೆ. ತಾತ್ಕಾಲಿಕ ವಸತಿ ನಿವಾಸಿಗಳು ಬೇಡ ಎಂದಿದ್ದಾರೆ. ಹೀಗಾಗಿ ನಾವು ನಮ್ಮ ತೆರವು ಕಾರ್ಯ ಸ್ಥಗಿತಗೊಳಿಸಿದ್ದೇವೆ ಎಂದರು.
ಬಿಗಿ ಬಂದೋಬಸ್ತ್ ನಲ್ಲಿ ಮೂರು ದಿನಗಳನ್ನು ರಸ್ತೆಯಲ್ಲಿ ಕಳೆದಿರುವ ನಿವಾಸಿಗಳನ್ನು ಭೇಟಿ ಮಾಡಲು ಇಂದು ಕೈ ಹಾಗೂ ಕಮಲ ಪಕ್ಷದ ನಾಯಕರು ಬಂದಿದ್ದರು. ಮೊದಲು ಬಂದಿದ್ದ ಮಾಜಿ ಕಾರ್ಪೊರೇಟರ್ ಶಿಲ್ಪಾ ಶ್ರೀಧರ್ ಪತಿ ಶ್ರೀಧರ್ ನಿವಾಸಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಈ ವೇಳೆ ರೊಚ್ಚಿಗೆದ್ದ ನಿವಾಸಿಗಳು ಶ್ರೀಧರ್ ರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಉದ್ದೇಶಪೂರ್ವಕವಾಗಿ ನಮ್ಮನ್ನು ನೀನು ಖಾಲಿ ಮಾಡಿಸುತ್ತಿದ್ದೀಯಾ ಎಂದು ಶ್ರೀಧರ್ ಮೇಲೆ ಆರೋಪಿಸಿದರು.
ಇದಾದ ಬಳಿಕ ಬಂದಿದ್ದ ಕ್ಷೇತ್ರದ ಮಾಜಿ ಶಾಸಕ ಪ್ರಿಯ ಕೃಷ್ಣ, ಸ್ಲಂ ನಿವಾಸಿಗಳನ್ನು ಬೆಂಬಲಿಸಿ ಆಶ್ವಾಸನೆ ತುಂಬಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪ್ರಿಯಕೃಷ್ಣ, ಇವರಿಗೆ ನ್ಯಾಯಸಿಗುವವರೆಗೆ ಬೆಂಬಲ ಕೊಡುತ್ತೇನೆ. ಇಲ್ಲಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಅಧಿಕಾರ ದುರುಪಯೋಗ ಮಾಡಲಾಗ್ತಿರೋದು ಸ್ಪಷ್ಟವಾಗಿ ಕಾಣ್ತಿದೆ ಎಂದು ಬಿಜೆಪಿಗರಿಗೆ ಟಾಂಗ್ ಕೊಟ್ಟರು.
ಒಟ್ಟಾರೆಯಾಗಿ ಒಂದ್ಕಡೆ ನ್ಯಾಯಾಲಯದ ತೀರ್ಪು, ಮತ್ತೊಂದು ಕಡೆ ಕೈ-ಕಮಲದ ರಾಜಕೀಯದಾಟ. ಈ ಮಧ್ಯೆ ಸೂರಿಲ್ಲದೆ 17 ಕುಟುಂಬಗಳು ಬೀದಪಾಲಾಗಿದೆ. ಮನೆಯನ್ನೂ ಕಳಕೊಂಡು ಮಕ್ಕಳನ್ನು ಕಟ್ಟಿಕೊಂಡು ಬೀದಿಯಲ್ಲಿ ಕೂತು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಈ ಪ್ರಕರಣದ ಕುರಿತು ನ್ಯಾಯಾಲಯ ಯಾವ ನಿರ್ಧಾರ ತಾಳುತ್ತೆ ಎಂಬುದೇ ಸದ್ಯಕ್ಕಿರುವ ಕುತೂಹಲ.
(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ