ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ (Dalit Youth Insulted in custody) ಆರೋಪ ಪ್ರಕರಣದ ಬಂಧಿತ ಆರೋಪಿ ಹಾಗೂ ಸಬ್ ಇನ್ಸ್ ಪೆಕ್ಟರ್ ಅರ್ಜುನ್ (Gonibeedu Station PSI Arjun) 14 ದಿನ ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾರೆ. ಚಿಕ್ಕಮಗಳೂರಿನ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕೋರ್ಟ್ ಈ ಆದೇಶ ಹೊರಡಿಸಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ವಿಚಾರಣೆಗೆಂದು ಕರೆತಂದು ಮೇ. 10ರಂದು ಯುವಕನಿಗೆ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರ ನೆಕ್ಕಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ಸಂಬಂಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮೂತ್ರ ಕುಡಿಸಿದ ಆರೋಪದಡಿ ಪಿ.ಎಸ್.ಐ. ಅರ್ಜುನ್ ಮೇಲೂ ಕೇಸ್ ದಾಖಲಾಗಿದೆ. ಸರ್ಕಾರ ಈ ಪ್ರಕರಣದ ತನಿಖೆಯನ್ನ ಸಿ.ಐ.ಡಿ. ಹೆಗಲಿಗೆ ಹಾಕಿದೆ.
ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಪಿ.ಎಸ್.ಐ. ಅರ್ಜುನ್ ನನ್ನ ಬಂಧಿಸಿದ ಸಿ.ಐ.ಡಿ. ಪೊಲೀಸರು ನಿನ್ನೆ ಚಿಕ್ಕಮಗಳೂರು ಕೋರ್ಟ್ಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪಿ.ಎಸ್.ಐ. ಆಗಿದ್ದ ಅರ್ಜುನ್ ಮೇ. 10ರಂದು ಮಹಿಳೆಗೆ ಕರೆ ಮಾಡಿದ ವಿಚಾರ ಸಂಬಂಧ ಪುನೀತ್ ಯುವಕನನ್ನ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ನನಗೆ ಬಾಯಾರಿಕೆ ಎಂದು ನೀರು ಕೇಳಿದಾಗ ಮತ್ತೊಬ್ಬ ಆರೋಪಿಯ ಮೂತ್ರ ಕುಡಿಸಿ, ನೆಲಕ್ಕೆ ಬಿದ್ದ ಮೂತ್ರವನ್ನೂ ನೆಕ್ಕಿಸಿದ್ದರು ಎಂದು ಪುನೀತ್ ಆರೋಪಿಸಿದ್ದರು. ಘಟನೆ ಸಂಬಂಧ ನೊಂದ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ. ಬಳಿಕ ಅರ್ಜುನ್ ವಿರುದ್ಧವೂ ಗೋಣಿಬೀಡು ಠಾಣೆಯಲ್ಲಿ ಕೇಸ್ ದಾಖಲಾಗಿ, ಸರ್ಕಾರ ಅರ್ಜುನ್ ರನ್ನ ಅಮಾನತು ಮಾಡಿ ಪ್ರಕರಣವನ್ನ ಸಿಐಡಿಗೆ ವಹಿಸಿತ್ತು.
ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು
ಬಂಧನಕ್ಕೊಳಗಾಗುವ ಆತಂಕದಿಂದ ಪಿಎಸ್ಐ ಅರ್ಜುನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಅಕ್ಟೋಬರ್ 1ರ ಬುಧವಾರ ರಾತ್ರಿ ಸಿಐಡಿ ಪೊಲೀಸರು ಅರ್ಜುನ್ರನ್ನ ಬೆಂಗಳೂರಿನಲ್ಲಿ ಬಂಧಿಸಿದ್ದು, ಸದ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ಮಾಡಿದೆ.
ಇನ್ನು ಪಿಎಸ್ಐ ವಿರುದ್ಧ ಆರೋಪ ಮಾಡಿದ್ದ ಪುನೀತ್ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಗೋಣಿಬೀಡು ಠಾಣೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ಪುನೀತ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸದ್ಯ ಗೋಣಿಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಟ್ಟಾರೆ, ಸಿಐಡಿ ತನಿಖೆಯಿಂದಷ್ಟೇ ಸತ್ಯಸತ್ಯತೆ ತಿಳಿಯಬೇಕಿದೆ.
ಇದನ್ನೂ ಓದಿ: ಕುಮಾರಸ್ವಾಮಿ ನೋಡಿ ಕಣ್ಣೊಡೆದ ಯೋಗೇಶ್ವರ್; ಸಿಪಿವೈ ಮಂತ್ರಿ ಆಗ್ತಾರೆ ಅಂದ ಡಿಕೆ ಸುರೇಶ್
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ವರದಿ: ವೀರೇಶ್ ಹೆಚ್ ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ