ಗ್ರಾ.ಪಂ.ಗಳ ಹೆಗಲಿಗೆ ಮೊಟ್ಟೆ ಹೊರೆ: ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ನಿರ್ಧಾರ

ಮಾರುಕಟ್ಟೆಯಲ್ಲಿ ಮೊಟ್ಟೆ ದರದಲ್ಲಿ ಏರಿಳಿತವಾಗುವುದರಿಂದ ಸರ್ಕಾರದ ಪೌಷ್ಟಿಕ ಅಹಾರ ಯೋಜನೆಯಡಿ ಮಕ್ಕಳು, ಬಾಣಂತಿಯರಿಗೆ ಮೊಟ್ಟೆ ನೀಡುವ ಅಂಗನವಾಡಿ ಕಾರ್ಯಕರ್ತರಿಗೆ ಹೆಚ್ಚುವರಿ ಬೆಲೆಯ ಹೊರೆಬೀಳುವುದನ್ನು ತಪ್ಪಿಸಲು ದಕ್ಷಿಣಕನ್ನಡ ಜಿ.ಪಂ. ಕ್ರಮ ಕೈಗೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು: ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಸರಕಾರದ ವತಿಯಿಂದ ನೀಡಲಾಗುತ್ತಿರುವ ಮೊಟ್ಟೆಯ ಹೊರೆ ಗ್ರಾಮಪಂಚಾಯತ್​ಗಳ ಹೆಗಲಿಗೆ ಬಿದ್ದಿದೆ. ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆಯಲ್ಲಾಗುತ್ತಿರುವ ವ್ಯತ್ಯಾಸದಿಂದಾಗಿ ಮೊಟ್ಟೆ ವಿತರಿಸಬೇಕಾದ ಅಂಗನವಾಡಿ ಕಾರ್ಯಕರ್ತರಿಗೆ ಇದರ ಹೊರೆ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಹೊಸ ಆದೇಶ ಹೊರಡಿಸಿದೆ. ಆದರೆ ಜಿಲ್ಲಾ ಪಂಚಾಯತ್​ನ ಈ ಆದೇಶಕ್ಕೆ ಕೆಲವು ಗ್ರಾಮಪಂಚಾಯತ್ ಆಡಳಿತಗಳು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವು ಗ್ರಾಪಂಗಳು ಸರಕಾರದ ಈ ಆದೇಶವನ್ನು ಸ್ವಾಗತಿಸಿವೆ.

ರಾಜ್ಯ ಸರಕಾರ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸುವ ನಿಟ್ಟಿನಲ್ಲಿ ಮೊಟ್ಟೆಯನ್ನು ನೀಡುತ್ತಿದೆ. ಪ್ರತೀ ಮೊಟ್ಟೆಗೂ ಈ ಬಾರಿ 5 ಮತ್ತು 5.50 ರೂಪಾಯಿಗಳನ್ನು ನೀಡುತ್ತಿದೆ. ಅಂಗನವಾಡಿ ಮಕ್ಕಳಿಗೆ ವಿತರಿಸುವ ಮೊಟ್ಟೆಗೆ 5 ರೂಪಾಯಿ ಹಾಗೂ ಬಾಣಂತಿಯರಿಗೆ ವಿತರಿಸುವ ಮೊಟ್ಟೆಗೆ 5.50 ರೂಪಾಯಿಗಳನ್ನು ಮೀಸಲಿಟ್ಟಿದೆ. ಆದರೆ ಮಾರುಕಟ್ಟೆಯಲ್ಲಿ ವಾರಕ್ಕೊಮ್ಮೆ ಮೊಟ್ಟೆ ಬೆಲೆಯಲ್ಲಿ ಏರಿಳಿತವಾಗುತ್ತಿರುವುದು ಅಂಗನವಾಡಿ ಹಾಗೂ ಬಾಣಂತಿಯರಿಗೆ ಮೊಟ್ಟೆ ವಿತರಿಸುವ ಅಂಗನವಾಡಿ ಕಾರ್ಯಕರ್ತರಿಗೆ ಹೊರೆಯಾಗುತ್ತಿದೆ. ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಈ ಹಣವನ್ನು ಅಂಗನವಾಡಿ ಕಾರ್ಯಕರ್ತರಿಗೆ ನೀಡುತ್ತಿದ್ದು, ವ್ಯತ್ಯಾಸದ ಹಣವನ್ನು ಕಾರ್ಯಕರ್ತರೇ ತುಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊಟ್ಟೆಯ ಹೆಚ್ಚುವರಿ ಹಣವನ್ನು ಅಂಗನವಾಡಿಗಳು ಕಾರ್ಯಾಚರಿಸುತ್ತಿರುವ ಆಯಾಯ ಗ್ರಾಮಪಂಚಾಯತ್ ಗಳು ನೀಡಬೇಕೆಂದು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಯಾರದ್ದೋ ಪ್ರತಿಷ್ಠೆಗೆ ಬಲಿಯಾಗಲ್ಲ ಎಂದ ತನ್ವೀರ್ ಸೇಠ್; ತವರಲ್ಲೇ ಸಿದ್ದು ವಿರುದ್ಧ ಅಸಮಾಧಾನದ ಹೊಗೆ

ಮಾತೃಪೂರ್ಣ ಯೋಜನೆಯಡಿ ಒರ್ವ ಬಾಣಂತಿಗೆ ತಿಂಗಳಿಗೆ 25 ಮೊಟ್ಟೆ ಹಾಗೂ ಅಂಗನವಾಡಿ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆಗಳಂತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 65911 ಅಂಗನವಾಡಿಗಳಿದ್ದು, ಈ ವ್ಯವಸ್ಥೆಯ ನಿರ್ವಹಣೆಗೆ ಸರಕಾರ ಪ್ರತೀ ವರ್ಷ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕಿಗೆ ಸಂಬಂಧಪಟ್ಟಂತೆ ಒಟ್ಟು 370 ಅಂಗನವಾಡಿಗಳಿದ್ದು, ಒಟ್ಟು 28 ಸಾವಿರ ಫಲಾನುಭವಿಗಳಿದ್ದಾರೆ. ಸರಕಾರದಿಂದ ಈ ಎರಡು ತಾಲೂಕುಗಳಿಗೆ ವರ್ಷಕ್ಕೆ 1.25 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಆದರೆ ಸರಕಾರ ವರ್ಷಕ್ಕೆ ಒಮ್ಮೆಲೇ ಮೊಟ್ಟೆಯ ದರವನ್ನು ನಿಗದಿಪಡಿಸುವ ಕಾರಣಕ್ಕಾಗಿ ವಾರಕ್ಕೊಮ್ಮೆ ಬದಲಾಗುವ ಮೊಟ್ಟೆಯ ಮಾರುಕಟ್ಟೆ ದರದಿಂದಾಗಿ ಕೆಲವು ಸಂದರ್ಭಗಳಲ್ಲಿ ಇದರ ಹೊರೆ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಬೀಳುತ್ತಿದೆ.

ಸರಕಾರ ತೆಗೆದುಕೊಂಡ ಈ ಹೊಸ ಕ್ರಮಕ್ಕೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ಅಂಗನವಾಡಿಗಳು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಪಂಚಾಯತ್​ಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ. ಹೆಚ್ಚಾಗಿ ಸರಕಾರದಿಂದ ಬರುವ ಯೋಜನೆಗಳು ಸರಿಯಾಗಿ ಫಲಾನುಭವಿಗಳ ಕೈಗೆ ತಲುಪುವುದು ವಿರಳವೇ. ಅದೇ ರೀತಿ ಮೊಟ್ಟೆ ಕೂಡಾ ಕೆಲವು ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ದೊರೆತರೆ, ಇನ್ನು ಕೆಲವರು ಈ ಅವಕಾಶವನ್ನು ಬಳಸುವುದಿಲ್ಲ. ಈ ಸಮಯದಲ್ಲಿ ಸರಕಾರದ ಹಣದಲ್ಲಿ ದುರುಪಯೋಗವಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಗ್ರಾಮಪಂಚಾಯತ್​ಗಳು ಪ್ರತೀ ಅಂಗನವಾಡಿಯಲ್ಲಿರುವ ಮಕ್ಕಳ ಲೆಕ್ಕಾಚಾರಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರತೀ ದಿನ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ವಿತರಿಸುವ ನಿಟ್ಟಿನಲ್ಲಿ ಮೇಲುಸ್ತುವಾರಿ ನಡೆಸುವುದು ಒಳ್ಳೆಯ ನಿರ್ಧಾರ ಎನ್ನುತ್ತಾರೆ ಆರ್ಯಾಪು ಗ್ರಾಮಪಂಚಾಯತ್ ಸದಸ್ಯರಾದ ವಿಜಯ್‌ ಕುಮಾರ್.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಈ ಆದೇಶ ಈಗಾಗಲೇ ಎಲ್ಲಾ ಪಂಚಾಯತ್​ಗಳಿಗೆ ತಲುಪಿದೆ. ಆದರೆ ಕೆಲವು ಪಂಚಾಯತ್​ಗಳು ಹೆಚ್ಚಿನ ಆದಾಯವಿಲ್ಲದೆ ಸೊರಗಿಹೋಗಿದ್ದು, ಇಂಥ ಪಂಚಾಯತ್​ಗಳಿಗೆ ಜಿಲ್ಲಾ ಪಂಚಾಯತ್​ನ ಮೊಟ್ಟೆ ಆದೇಶ ಹೊರೆಯಾಗಿ ಪರಿಣಮಿಸಿದೆ.

ವರದಿ: ಅಜಿತ್ ಕುಮಾರ್
Published by:Vijayasarthy SN
First published: