ದಕ್ಷಿಣ ಕನ್ನಡ(ಜೂ.01): ಭರತನಾಟ್ಯ ಸೇರಿದಂತೆ ಎಲ್ಲಾ ನೃತ್ಯ ಕಲೆಯಲ್ಲೂ ಕಲಾವಿದರ ಇಡೀ ದೇಹವೇ ಬಳಸಲ್ಪಡುತ್ತದೆ. ಹೀಗಾದಲ್ಲಿ ಮಾತ್ರವೇ ಕಲಾವಿದೆ ತನ್ನ ನೃತ್ಯದ ಮೂಲಕ ಏನನ್ನು ಅಭಿವ್ಯಕ್ತ ಪಡಿಸುತ್ತಿದ್ದಾರೆ ಎನ್ನುವುದನ್ನು ಪ್ರೇಕ್ಷಕನಿಗೆ ತಿಳಿಯಲು ಸಾಧ್ಯ. ಆದರೆ ಇಲ್ಲೊಬ್ಬ ಕಲಾವಿದೆ ಕೇವಲ ಹಸ್ತ ಮುದ್ರೆಯ ಮೂಲಕವೇ ನಾಟ್ಯದ ಅಭಿವ್ಯಕ್ತಿಯನ್ನು ಮೂಡಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಹಸ್ತಮುದ್ರೆಯನ್ನೇ ಬಳಸಿಕೊಂಡು ಹಾಡಿಗೆ ತಕ್ಕಂತೆ ಅಭಿವ್ಯಕ್ತಿ ಮೂಡಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉದಯೋನ್ಮುಖ ನೃತ್ಯಗುರು, ರಂಗ ಅಭಿನೇತ್ರಿ ಮಂಜುಳಾ ಸುಬ್ರಹ್ಮಣ್ಯ ಅವರ ವಿನೂತನ ಪ್ರಯತ್ನ. ತಮ್ಮ ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಹಸ್ತಮುದ್ರೆಯ ಮೂಲಕವೇ ನಾಟ್ಯದ ಅಭಿವ್ಯಕ್ತಿಯನ್ನು ಮೂಡಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ. 'ನೀನಿಲ್ಲದೇ ನನಗೇನಿದೇ' ಎಂಬ ಪ್ರಸಿದ್ಧ ಭಾವಗೀತೆಗೆ ಕೇವಲ ಹಸ್ತಮುದ್ರೆಯ ಚಲನೆಯ ಮೂಲಕವೇ ನೃತ್ಯದ ಭಾವವನ್ನೇ ಮೂಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಲಾರಂಭಿಸಿದೆ.
ಕತ್ತಲು-ಬೆಳಕಿನಾಟದಲ್ಲಿಯೇ ಹಸ್ತಾಭಿನಯವನ್ನು ಪ್ರದರ್ಶಿಸಿರುವ ಮಂಜುಳಾ ಸುಬ್ರಹ್ಮಣ್ಯ ಅವರಿಗೆ ಉಡುಪಿಯ ನೃತ್ಯಗುರು ಪ್ರತಿಭಾ ಸಾಮಗರು ಕಳಿಸಿರುವ ಹಸ್ತಮುದ್ರೆಯೊಂದಿಗೆ ನೃತ್ಯಭಾವ ಮೂಡಿಸಿರುವ ವಿಡಿಯೋವೊಂದು ಪ್ರೇರಣೆಯಾಗಿತ್ತಂತೆ. ಕಥಕ್ ನೃತ್ಯಕ್ಕೆ ಹಿಂದೂ ಗೀತೆಯನ್ನು ಬಳಸಿಕೊಂಡು ಈ ವಿಡಿಯೋ ಮಾಡಲಾಗಿತ್ತು. ವಿಡಿಯೋವನ್ನು , ಅದರಿಂದ ಕೊಂಚ ಭಿನ್ನವಾಗಿ ಯಾಕೆ ಮಾಡಬಾರದು ಎಂದು ಮನಗಂಡ ಮಂಜುಳಾ ಕೇವಲ ಹಸ್ತ ಮುದ್ರೆಯನ್ನೇ ಬಳಸಿ ಒಂದೂವರೆ ನಿಮಿಷದ ಈ ವಿಡಿಯೋ ತಯಾರಿಸಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣಕ್ಕೆ ಮನೆಯಿಂದಲೇ ಆನ್ ಲೈನ್ ನೃತ್ಯ ಕಲಿಸುತ್ತಿರುವ ಮಂಜುಳಾ, ಲಾಕ್ ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಕೇವಲ ಮೂರು ದಿನಗಳಲ್ಲಿ ಈ ನೃತ್ಯವನ್ನು ಸಾದರಪಡಿಸಿದ್ದಾರೆ.
ಇದನ್ನೂ ಓದಿ:Zodiac Sign: ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಕನಸು ಬೀಳುತ್ತೆ ಗೊತ್ತಾ..? ಇಲ್ನೋಡಿ..!
ಹಿಂದಿಯ ಗೀತೆಗೆ ಬದಲಾಗಿ ಅವರು ಕನ್ನಡದ ಕವಿ ಎಂ.ಎನ್. ವ್ಯಾಸರಾವ್ ಅವರ 'ನೀನಿಲ್ಲದೇ ನನಗೇನಿದೇ' ಎಂಬ ಭಾವಗೀತೆಗೆ ಹಸ್ತಾಭಿನಯದ ನಾಟ್ಯ ಮಾಡುವ ಆಲೋಚನೆ ಮಾಡಿದ್ದಾರೆ. ಆದರೆ ದೇಹವನ್ನೇ ತೋರಿಸದೆ ಬರೀ ಹಸ್ತ ಮುದ್ರೆಯಲ್ಲಿಯೇ 'ನೀನಿಲ್ಲದೇ ನನಗೇನಿದೇ' ಭಾವಗೀತೆಯ ಭಾವವನ್ನು ತೋರಿಸೋದು ಭಾರಿ ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಎರಡು ಮೂರು ದಿನಗಳಲ್ಲಿ ಸಮಯ ಸಿಕ್ಕಾಗಲೆಲ್ಲಾ ಸಣ್ಣಗೆ ಅಭ್ಯಾಸ ಮಾಡಿಕೊಂಡು ಅವರು ಹಸ್ತಾಭಿನಯಕ್ಕೆ ಸಜ್ಜಾಗಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ ಕೇವಲ ಎಲ್ಇಡಿ ಸಣ್ಣ ಟಾರ್ಚ್ ಬೆಳಕನ್ನು ಕತ್ತಲೆಯ ಗೋಡೆಯಲ್ಲಿ ಮೂಡಿಸಿ ಕತ್ತಲೆಯಲ್ಲಿಯೇ ನಿಂತು ಬರೀ ಕೈಚಲನೆಯಲ್ಲಿ ನೃತ್ಯ ಮೂಡಿಸಿ ಅತ್ಯುತ್ತಮವಾದ ವಿಡಿಯೋವನ್ನು ತಯಾರಿಸಿದ್ದಾರೆ. ಇದರ ವಿಡಿಯೋವನ್ನು ಮಂಜುಳಾ ಸುಬ್ರಹ್ಮಣ್ಯರವರ ಅಣ್ಣ ಗಣೇಶ್ ಕುಮಾರ್ ನಿಕಾನ್ ಡಿ 3200 ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.ವಿಡಿಯೋ ನೋಡುವಾಗ ಅದ್ಭುತ ಎಂದೆನಿಸಿದರೂ, ಇದರ ಹಿಂದೆ ಮಂಜುಳಾ ಸುಬ್ರಹ್ಮಣ್ಯರ ಪರಿಶ್ರಮ ಬಹಳಷ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ