ತಲೆನೋವಾದ ಅಕ್ರಮ ಗೋಸಾಗಾಟ ಪ್ರಕರಣ ; ಅಕ್ರಮ ತಡೆಗೆ ಸಜ್ಜಾಗಿದೆ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಿನದ 24 ಗಂಟೆಗಳೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಹೆಚ್ಚುವರಿಯಾಗಿ 2 ಗಸ್ತು ವಾಹನವನ್ನು ನಿಯೋಜಿಸಲಾಗಿದೆ

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್

  • Share this:
ಮಂಗಳೂರು(ಜುಲೈ.30): ಇತ್ತೀಚಿನ ಕೆಲವು ದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಗೋಸಾಗಾಟ ಹಾಗೂ ಅದನ್ನು ತಡೆಯುವ ಪ್ರಕರಣಗಳು ಹೆಚ್ಚಾಗಲಾರಂಭಿಸಿದೆ. ಕರಾವಳಿಯಲ್ಲಿ ಗೋಸಾಗಾಟದ ವಿಚಾರದಲ್ಲೇ ಹೆಚ್ಚಿನ ಶಾಂತಿ ಕದಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪೋಲೀಸ್ ಇಲಾಖೆ ಈ ವಿಚಾರವನ್ನುಇದೀಗ ಗಂಭೀರವಾಗಿ ಪರಿಗಣಿಸಿದೆ. 

ಜಿಲ್ಲೆಯ ಕೇರಳ ಗಡಿಭಾಗವಾದ ವಿಟ್ಲ, ಪುತ್ತೂರು ಭಾಗದಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ಹೆಚ್ಚಾಗಿದ್ದರೆ, ಇತ್ತೀಚಿನ ಕೆಲವು ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಹಲವೆಡೆ ಇದೇ ರೀತಿಯ ಪ್ರಕರಣಗಳು ಬೆಳಕಿಗೆ ಬರಲಾರಂಭಿಸಿದೆ. ಅಕ್ರಮ ಗೋಸಾಗಾಟದ ಸುಳಿವು ಪಡೆಯುವ ಕೆಲವು ಸಂಘಟನೆಗಳು ಈ ಗೋವುಗಳ ಸಾಗಾಟವನ್ನು ತಡೆಯುವ ಯತ್ನವನ್ನೂ ನಡೆಸುತ್ತಿದ್ದು, ಇದು ಘರ್ಷಣೆಗೂ ಕಾರಣವಾದ ಹಲವು ನಿದರ್ಶನಗಳು ಜಿಲ್ಲೆಯಲ್ಲಿ ಈಗಾಗಲೇ ನಡೆದಿದೆ. ಈ ಕಾರಣಕ್ಕಾಗಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಇಲಾಖೆ ಅಕ್ರಮ ಗೋಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ಈ ಕುರಿತು  ನ್ಯೂಸ್ 18 ಗೆ ಮಾಹಿತಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮುಖ್ಯವಾಗಿ ಕೇರಳ ಭಾಗಕ್ಕೆ ಈ ಅಕ್ರಮ ಗೋವುಗಳ ಸಾಗಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಗಡಿಭಾಗದಲ್ಲಿ 14 ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಇತರ ಜಿಲ್ಲೆಗಳಿಂದ ಅಕ್ರಮ ಗೋವುಗಳು ಜಿಲ್ಲೆಗೆ ಪ್ರವೇಶಿಸುತ್ತಿರುವ ಕಾರಣ 4 ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳು ಹಾಗೂ ಜಿಲ್ಲೆಯ ಒಳಗೆ 7 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ ಈ ಹಿಂದೆ ಅಕ್ರಮ ಗೋಸಾಗಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಅವರ ಮೇಲೆ ನಿಗಾ ಇಡುವ ಕೆಲಸವೂ ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಧಾರ್ಮಿಕರ ಮುಖಂಡರ ಜೊತೆ ಚರ್ಚೆಗಳನ್ನೂ ನಡೆಸಲಾಗಿದ್ದು, ಎಲ್ಲಾ ಮುಖಂಡರೂ ಇಂಥ ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ : ಹನಿಟ್ರ್ಯಾಪ್ ಮಾದರಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ​ ಐವರು ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಿನದ 24 ಗಂಟೆಗಳೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಹೆಚ್ಚುವರಿಯಾಗಿ 2 ಗಸ್ತು ವಾಹನವನ್ನು ನಿಯೋಜಿಸಲಾಗಿದ್ದು, ಅಗತ್ಯ ಸಂದರ್ಭದಲ್ಲಿ ಕ್ರಿಪ್ತ ಸಮಯದಲ್ಲಿ ಘಟನೆ ನಡೆಯುವ ಸ್ಥಳಕ್ಕೆ ತಲುಪುವ ವ್ಯವಸ್ಥೆಯನ್ನೂ ಮಾಡಲಾಗಿದೆ. ರಾತ್ರಿ ಗಸ್ತನ್ನೂ ಹೆಚ್ಚಿಸಲಾಗಿದ್ದು, ರಾತ್ರಿ ಸಂಚರಿಸುವ ಪ್ರತೀ ವಾಹನಗಳನ್ನು ಪರಿಶೀಲಿಸಲು ಆದೇಶಿಸಲಾಗಿದೆ. ಗಸ್ತು ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯ ಘಟನೆ ಬೆಳಕಿಗೆ ಬಂದಲ್ಲಿ ಆ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ ಹೆಚ್ಚಾದಂತೆ ಇದೇ ವಿಚಾರದ ಕುರಿತಂತೆ ರಾಜಕೀಯ ಮೇಲಾಟಗಳೂ ಹೆಚ್ಚಾಗಲಾರಂಭಿಸುತ್ತದೆ. ಅಕ್ರಮ ಗೋಸಾಗಾಟದ ಕುರಿತಂತೆ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ನೀಡಿದ ಹೇಳಿಕೆ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಹಿಂದೂಪರ ಸಂಘಟನೆಗಳು ಹೇಳಿಕೆಯನ್ನು ಖಂಡಿಸಿದರೆ, ಮುಸ್ಲಿಂ ಪರ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದವು. ಸರಕಾರ ಜಿಲ್ಲಾಧಿಕಾರಿಯನ್ನು ವರ್ಗಾವಣೆಗೊಳಿಸಿರುವ ಹಿಂದೆಯೂ ಅವರ ಗೋಸಾಗಾಟ ಸಂಬಂಧಿ ಹೇಳಿಕೆಯೂ ಕೆಲಸ ಮಾಡಿದೆ ಎನ್ನುವ ಮಾತೂ ಕೇಳಿ ಬರಲಾರಂಭಿಸಿದೆ.
Published by:G Hareeshkumar
First published: