ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ; ಮುಳುಗಡೆಯ ಭೀತಿಯಲ್ಲಿ ತಗ್ಗು ಪ್ರದೇಶಗಳು

ಭಾರೀ ಮಳೆ ಹಿನ್ನಲೆಯಲ್ಲಿ ಪುತ್ತೂರು- ಪಾಣಾಜೆ ಸಂಪರ್ಕಿಸುವ ರಸ್ತೆಯ ಚೇಳ್ಯಡ್ಕ ಎಂಬಲ್ಲಿ ನಿರ್ಮಾಣಗೊಂಡಿರುವ ಸೇತುವೆ ಮುಳುಗಡೆಗೊಂಡಿದೆ

news18-kannada
Updated:July 17, 2020, 1:40 PM IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ; ಮುಳುಗಡೆಯ ಭೀತಿಯಲ್ಲಿ ತಗ್ಗು ಪ್ರದೇಶಗಳು
ರಸ್ತೆಯ ಮೇಲೆ ನೀರು ಹರಿಯುತ್ತಿರುವುದು
  • Share this:
ಮಂಗಳೂರು(ಜುಲೈ.17): ಕರಾವಳಿಯಾದ್ಯಂತ ಇಂದು ಕೂಡಾ ಭಾರೀ ಮಳೆ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ತಗ್ಗು ಪ್ರದೇಶಗಳು ಮುಳಗಡೆಯಾಗುವ ಆತಂಕವೂ ಎದುರಾಗಿದೆ.

ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೊಂಚ ಮಟ್ಟಿಗೆ ತಗ್ಗಿರುವ ಪರಿಣಾಮ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ, ಅಪಾಯದ ಮಟ್ಟಕ್ಕೆ ತಲುಪಿಲ್ಲ. ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಹಲವೆಡೆ ಭಾರೀ ಮಳೆ ಮುಂದುವರಿದಿದೆ.

ಒಂದೆಡೆ ಕೊರೋನಾ ಲಾಕ್ ಡೌನ್ ಇನ್ನೊಂದೆಡೆ ಭಾರೀ ಮಳೆಯ ಕಾರಣ ಜನ ಮನೆಯಿಂದ ಹೊರಬರಲು ಉದಾಸೀನತೆಯನ್ನೂ ತೋರಿದ್ದಾರೆ. ಇದರಿಂದಾಗಿ ಪುತ್ತೂರು ಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ, ಇಂದು ಕೂಡಾ ಜನ ಮಾತ್ರ ಮಾರುಕಟ್ಟೆಗಳ ಕಡೆಗೆ ಬರದ ಹಿನ್ನಲೆಯಲ್ಲಿ ಮಾರುಕಟ್ಟೆಗಳು ಜನರಿಲ್ಲದೆ ಭೀಕೋ ಎನ್ನುತ್ತಿದೆ.



ಭಾರೀ ಮಳೆ ಹಿನ್ನಲೆಯಲ್ಲಿ ಪುತ್ತೂರು- ಪಾಣಾಜೆ ಸಂಪರ್ಕಿಸುವ ರಸ್ತೆಯ ಚೇಳ್ಯಡ್ಕ ಎಂಬಲ್ಲಿ ನಿರ್ಮಾಣಗೊಂಡಿರುವ ಸೇತುವೆ ಮುಳುಗಡೆಗೊಂಡಿದೆ. ಇದರಿಂದಾಗಿ ಬೆಟ್ಟಂಪಾಡಿ, ಚೇಳ್ಯಡ್ಕ ಹಾಗೂ ಇರ್ದೆ ಮೊದಲಾದ ಭಾಗಗಳ ಸಾರ್ವಜನಿಕರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ. ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ವಾಹನ ಸಂಚಾರ ವಿರಳವಾಗಿರುವ ಕಾರಣ ಸೇತುವೆ ಮುಳುಗಡೆಯಾಗಿರುವುದರಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ.



ಮಳೆಗೆ ಜಿಲ್ಲೆಯ ಹಲವೆಡೆ ಮರಗಳು ಉರುಳಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆಯೂ ಇದೆ. ಜಿಲ್ಲೆಯಾದ್ಯಂತ ಇನ್ನೂ ಮೂರು ದಿನಗಳ ಕಾಲ‌ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಇದನ್ನೂ ಓದಿ :  ಕ್ಯಾನ್ಸರ್ ಗೆ ಬಲಿಯಾದ ವಿದ್ಯಾರ್ಥಿನಿ - ಕೊನೆಯ ಪರೀಕ್ಷೆ ಬರೆಯುವ ಮುನ್ನವೇ ಇಹಲೋಕ ತ್ಯಜಿಸಿದ ವಿದ್ಯಾರ್ಥಿನಿಯ ಕರುಣಾಜನಕ ಕಥೆ

ಶನಿವಾರ ಮುಂಜಾನೆಯ ವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ. ಕರಾವಳಿಯಲ್ಲಿ ಜುಲೈ 17 ಮತ್ತು 18 ರಂದು ಎಲ್ಲೊ, ಜುಲೈ 19 ಮತ್ತು 20ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಂದು ಹವಾಮಾನ ಕೇಂದ್ರ  ಎಚ್ಚರಿಕೆ ನೀಡಿದೆ.

ನದಿಗಳಲ್ಲಿ ನೀರಿನ ಹರಿವು ಹೆಚ್ಚಾದಂತೆ ಸಮುದ್ರದಲ್ಲೂ ನೀರಿನ ಅಲೆಗಳು ಹೆಚ್ಚಾಗಲಾರಂಭಿಸಿದೆ. ಇದರಿಂದಾಗಿ ಕಡಲು ಕಿನಾರೆಗಳಲ್ಲಿ ಮತ್ತೆ ಕಡಲು ಕೊರೆತದ ಆತಂಕವೂ ಹೆಚ್ಚಾಗಿದೆ. ಕಳೆದ ವರ್ಷವೂ ಇದೇ ಸಮಯದಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಭಾರೀ ಅನಾಹುತವೂ ಸಂಭವಿಸಿತ್ತು.
Published by: G Hareeshkumar
First published: July 17, 2020, 1:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading