HOME » NEWS » District » DAKSHINA KANNADA ENDOSULFAN WELL AGAIN IN NEWS AKP KVD

ಮತ್ತೆ ಚರ್ಚೆಯಲ್ಲಿದೆ ಪಾಳು ಬಾವಿಯ ರಹಸ್ಯ: ಊರ ಜನರಿಗೆ ಕಂಟಕ ತರುತ್ತಾ ಆ ವಿಷ!?

ಎಂಡೋಸಲ್ಫಾನ್ ದುಷ್ಪರಿಣಾಮದ ಬಗ್ಗೆ ಕೇರಳದ ಕಾಸರಗೋಡು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪತ್ತೆಯಾದ ಬಳಿಕ ಎಂಡೋಸಲ್ಫಾನ್ ಕೀಟನಾಶಕವನ್ನು ದೇಶದಲ್ಲಿ ನಿಷೇಧಿಸಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

news18-kannada
Updated:June 22, 2021, 7:15 PM IST
ಮತ್ತೆ ಚರ್ಚೆಯಲ್ಲಿದೆ ಪಾಳು ಬಾವಿಯ ರಹಸ್ಯ: ಊರ ಜನರಿಗೆ ಕಂಟಕ ತರುತ್ತಾ ಆ ವಿಷ!?
ಬಾವಿ ಇರುವ ಸ್ಥಳ
  • Share this:
ದಕ್ಷಿಣಕನ್ನಡ : ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಿಂಚುಪದವು ಎಂಬಲ್ಲಿ ಪಾಳು ಬಾವಿಯಲ್ಲಿ ಹೂತು ಹಾಕಿದ ಎಂಡೋಸಲ್ಫಾನ್ ವಿಷದ ವಿಚಾರ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ದೇಶದಲ್ಲಿ ಎಂಡೋಸಲ್ಫಾನ್ ಕೀಟನಾಶಕ ನಿಷೇಧವಾದ ಬಳಿಕ ದೇಶದಲ್ಲಿ ದಾಸ್ತಾನಿದ್ದ ಈ ಕೀಟನಾಶಕವನ್ನು ನಾಶ ಮಾಡುವ ಹಿನ್ನಲೆಯಲ್ಲಿ ಕೇರಳ ಸರ್ಕಾರ ಈ ಪಾಳು ಬಾವಿಗೆ ಲೋಡುಗಟ್ಟಲೆ ವಿಷವನ್ನು ಸುರಿದು ಮಣ್ಣು ಮಾಡಿದೆ ಎನ್ನುವುದು ವರದಿಯಾಗಿತ್ತು.

ಕೇರಳ-ಕರ್ನಾಟಕ ಗಡಿ ಭಾಗವಾದ ಮಿಂಚುಪದವು ಎಂಬಲ್ಲಿ ಕೇರಳ ಗೇರು ನಿಗಮ ಗೇರು ಪ್ಲಾಂಟೇಶನ್ ಮಾಡುತ್ತಿದ್ದು, ಈ ಗೇರು ಸಸಿಗಳಿಗೆ ಇಲ್ಲಿ ನಿರಂತರವಾಗಿ ಎಂಡೋಸಲ್ಫಾನ್ ಕೀಟನಾಶಕವನ್ನು ಸಿಂಪಡಿಸಲಾಗುತ್ತಿತ್ತು. ಎಂಡೋಸಲ್ಫಾನ್ ದುಷ್ಪರಿಣಾಮದ ಬಗ್ಗೆ ಕೇರಳದ ಕಾಸರಗೋಡು ಸೇರಿದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ಪತ್ತೆಯಾದ ಬಳಿಕ ಎಂಡೋಸಲ್ಫಾನ್ ಕೀಟನಾಶಕವನ್ನು ದೇಶದಲ್ಲಿ ನಿಷೇಧಿಸಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಕೇರಳ ಗೇರು ಅಭಿವೃದ್ಧಿ ನಿಗಮದಲ್ಲಿ 1594 ಲೀಟರ್ ಎಂಡೋಸಲ್ಫಾನ್ ನ ದಾಸ್ತಾನನ್ನು ನಾಶಪಡಿಸುವ ಪ್ರಕ್ರಿಯೆಯನ್ನು ಕೇರಳ ಗೇರು ಅಭಿವೃದ್ಧಿ ನಿಗಮ ನಡೆಸಿತ್ತು. ಈ ದಾಸ್ತಾನನ್ನು ಕರ್ನಾಟಕ ಗಡಿಭಾಗವಾದ ಮಿಂಚುಪದವಿನ ಪಾಳು ಬಾವಿಯೊಂದಿಗೆ ಸುರಿಯಲಾಗಿತ್ತು ಎನ್ನುವ ವಿಚಾರವನ್ನು ಮಿಂಚುಪದವು ಗೇರು ಪ್ಲಾಂಟೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದರು.

ಈ ಹಿನ್ನಲೆಯಲ್ಲಿ ಈ ಪಾಳು ಬಾವಿಯಿಂದ ಅಗೆಯುವ ಪ್ರಕ್ರಿಯೆ ನಡೆಸಬೇಕೆಂದು ಗಡಿಭಾಗದ ಜನ ಹಲವಾರು ಹೋರಾಟಗಳನ್ನು ನಡೆಸಿದ್ದರು. ಈ ಹಿನ್ನಲೆಯಲ್ಲಿ ಕೇರಳ ಸರಕಾರದ ಆರೋಗ್ಯ ಸಚಿವಾಲಯ ಈ ಪರಿಸರದಲ್ಲಿನ ನೀರಿನ ಮಾದರಿಯನ್ನು ಪರೀಕ್ಷಿಸುವ ಪ್ರಕ್ರಿಯೆಯೂ ನಡೆದಿತ್ತು. ಅಲ್ಲದೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯೂ ನೆಟ್ಟಣಿಗೆ ಮುಡ್ನೂರು ಪರಿಸರದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಕೇರಳ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ಎಂಡೋಸಲ್ಫಾನ್ ನ ವಿಷಕಾರಿ ಅಂಶಗಳು ಪತ್ತೆಯಾಗಿರಲಿಲ್ಲ, ಆದರೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿ ತೇಲುವ ಅಂಶಗಳು ಪತ್ತೆಯಾಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿತ್ತು.

ಇದನ್ನೂ ಓದಿ: ಸಿಎಂ ಯಾರಾಗಬೇಕು ಎಂದು ತೀರ್ಮಾನಿಸುವವರು ದೆಹಲಿ ನಾಯಕರು: ಸಿದ್ದರಾಮಯ್ಯ ಬಣಕ್ಕೆ ಡಿಕೆಶಿ ಟಾಂಗ್

ಪಾಳು ಬಾವಿಯನ್ನು ಅಗೆಯುವ ಮೂಲಕ ಅದರಲ್ಲಿದ್ದ ಎಂಡೋಸಲ್ಫಾನ್ ವಿಷವನ್ನು ಹೊರತೆಗೆಯಬೇಕೆಂದು ಸ್ಥಳೀಯ ಗ್ರಾಮಪಂಚಾಯತ್ ಕೂಡಾ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿತ್ತು. ಅಂದಿನ ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಎಂಡೋಸಲ್ಫಾನ್ ಹೂತಿಡಲಾಗಿದೆ ಎನ್ನುವ ಮಿಂಚುಪದವಿಗೆ ಭೇಟಿ ನೀಡಿ ಕೇರಳ ಸರಕಾರಕ್ಕೆ ಶಾಸಕರ ನಿಯೋಗ ಕರೆದೊಯ್ದು, ಬಾವಿಯನ್ನು ಅಗೆಯುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿದಿದ್ದು, ಆ ಭಾಗದ ಜನ ಮಾತ್ರ ಇಂದಿಗೂ ಆತಂಕದಲ್ಲಿದ್ದಾರೆ. ನೀರಿನ ಮಾದರಿ ಸಂಗ್ರಹಿಸಿದ ಸಚಿವಾಲಯಗಳು ಮಳೆಗಾಲದಲ್ಲಿ ಈ ಮಾದರಿಯನ್ನು ಸಂಗ್ರಹಿಸಿದ್ದು, ಇದರಿಂದ ನಿಖರವಾದ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಪರೀಕ್ಷೆಯ ಮೇಲೆಯೂ ಸಂಶಯ ಹೊರಹಾಕಿದ್ದರು. ಈ ನಡುವೆ  ರಾಜ್ಯ ಮಾನವಹಕ್ಕು ಹೋರಾಟಗಾರರು ಮತ್ತೆ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರ ಗಮನಕ್ಕೂ ತಂದಿದ್ದಾರೆ.

ಇತ್ತೀಚೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನಡೆದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ಹಾಗೂ ಮಾನವ ಹಕ್ಕು ಹೋರಾಟಗಾರರ ಸಭೆಯಲ್ಲಿ ಮಿಂಚುಪದವಿನಲ್ಲಿ ಎಂಡೋಸಲ್ಫಾನ್ ಕೀಟನಾಶಕವನ್ನು ಬಾವಿಯಲ್ಲಿ ಸುರಿದ ವಿಚಾರವನ್ನು ಎತ್ತಿದ ಹಿನ್ನಲೆಯಲ್ಲಿ ನ್ಯಾಯಾಧೀಶರು ಈ ಬಗ್ಗೆ ವರದಿ ಸಲ್ಲಿಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಮುಚ್ಚಿಹೋಗಿದ್ದ ಎಂಡೋ ಬಾವಿಯ ವಿವಾದ ಇದೀಗ ಮತ್ತೆ ಏಳುವ ಲಕ್ಷಣ ಗೋಚರಿಸಲಾರಂಭಿಸಿದೆ.
Published by: Kavya V
First published: June 21, 2021, 9:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories