• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬಸ್ ದುರಂತ ಸಂತ್ರಸ್ತ ಕುಟುಂಬಕ್ಕೆ ಮರೀಚಿಕೆಯಾದ ಪರಿಹಾರ; ಜೀವನ ನಿರ್ವಹಣೆಗೆ ದಾರಿಯಿಲ್ಲದೆ ಬೀದಿ ಪಾಲಾಗುವ ಹಂತದಲ್ಲಿ ಬಡ ಕುಟುಂಬಗಳು

ಬಸ್ ದುರಂತ ಸಂತ್ರಸ್ತ ಕುಟುಂಬಕ್ಕೆ ಮರೀಚಿಕೆಯಾದ ಪರಿಹಾರ; ಜೀವನ ನಿರ್ವಹಣೆಗೆ ದಾರಿಯಿಲ್ಲದೆ ಬೀದಿ ಪಾಲಾಗುವ ಹಂತದಲ್ಲಿ ಬಡ ಕುಟುಂಬಗಳು

ವಿಧಾನಸೌಧ

ವಿಧಾನಸೌಧ

ಕುಟುಂಬದ ಆಧಾರಸ್ತಂಭಗಳೇ ಬಸ್ ದುರಂತದಲ್ಲಿ ಅಸುನೀಗಿವೆ. ಇದೀಗ ಬೀದಿ ಪಾಲಾಗುವ ಸ್ಥಿತಿಗೆ ತಲುಪಿರುವ ಕುಟುಂಬಗಳಿಗೆ ರಾಜ್ಯ ಸರಕಾರ ಸಹಾಯ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ಕುಟುಂಬಗಳ ನೆರವಿಗೆ ಧಾವಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

  • Share this:

ಪುತ್ತೂರು; ಮದುವೆಗೆ ಹೊರಟ ದಿಬ್ಬಣ ಮಸಣಕ್ಕೆ ತಲುಪಿದ ಘಟನೆ ನಡೆದು ತಿಂಗಳು ಕಳೆಯುತ್ತಿದ್ದರೂ, ಸಂತ್ರಸ್ತ ಬಡ ಕುಟುಂಗಳಿಗೆ ಪರಿಹಾರ ಎನ್ನುವುದು ಮರೀಚಿಕೆಯಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಪಾಣತ್ತೂರಿನಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ಗ್ರಾಮದ ಏಳು ಜನ ಮೃತಪಟ್ಟಿದ್ದರು. ಸಾವಿಗೀಡಾದವರ ಎಲ್ಲಾ ಕುಟುಂಬಗಳೂ ಇದೀಗ ಬೀದಿ ಪಾಲಾಗುವ ಸ್ಥಿತಿಯಲ್ಲಿವೆ. ಕೆಲವು ಮನೆಗಳು ದುಡಿಯುವ ಕೈಗಳು ಮರೆಯಾದರೆ, ಇನ್ನು ಕೆಲವು ಮನೆಯ ಆರೈಕೆಯ ಕೈಗಳು ಮಾಯವಾಗಿವೆ.


ಮದುವೆಗೆಂದು ಅತ್ಯಂತ ಸಂತಸದಲ್ಲಿ ಹೊರಟಿದ್ದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಲ್ನಾಡು ಗ್ರಾಮದ ಹಲವು ಕುಟುಂಬಗಳ ಸದಸ್ಯರು ಹಿಂದಿರುಗಿ ಬರುವಾಗ ದುಃಖದ ಮಡುವಲ್ಲಿ ಮುಳುಗಿತ್ತು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆಯುವ ಬಲ್ನಾಡು ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕರ ಮಗಳ  ಮದುವೆ ಕಾರ್ಯಕ್ರಮಕ್ಕೆ ಚನಿಲ ಗ್ರಾಮದ ಹತ್ತಕ್ಕೂ ಮಿಕ್ಕಿದ ಕುಟುಂಬಗಳು ಹೊರಟಿದ್ದವು. ಜನವರಿ 3 ರಂದು ಈ ಕುಟುಂಬಗಳ ಸದಸ್ಯರು ಕೊಡಗಿಗೆ ಹೊರಟಿದ್ದರು. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ನ ಪಾಣತ್ತೂರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ  ರಸ್ತೆ ಬದಿಯ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದರು. ಘಟನೆಯ ತನಿಖೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶಿಸಿದ್ದರು. ಏಳು ಸಾವಿನ ಜೊತೆಗೆ ಇಪ್ಪತ್ತೈದಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಸಾವಿಗೀಡಾದ ಏಳು ಜನರ ಪೈಕಿ ಆರು ಕುಟುಂಬಗಳು ಬಲ್ನಾಡು ಗ್ರಾಮಕ್ಕೆ ಸೇರಿದೆ. ಎಲ್ಲಾ ಕುಟುಂಬದ  ಕಥೆಯೂ ಈಗ ಕಣ್ಣೀರ ಕಥೆಯಾಗಿದೆ.


ಬಸ್ ನಲ್ಲಿದ್ದ ರಾಜೇಶ್ ನಾಯ್ಕ ರ ನಾಲ್ವರಿದ್ದ ಸದಸ್ಯರ ಸಂಖ್ಯೆ ಇದೀಗ ಎರಡಕ್ಕೆ ಇಳಿದಿದೆ. ಮನೆ ಯಜಮಾನ ರಾಜೇಶ್ ನಾಯ್ಕ ಹಾಗೂ ಅವರ 12 ವರ್ಷದ ಮಗ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಮನೆಯ ಯಜಮಾನನಿಲ್ಲದ ಕುಟುಂಬ ಇದೀಗ ಒಪ್ಪತ್ತಿನ ಊಟಕ್ಕೂ ಗ್ರಾಮದ ಜನರನ್ನೇ ಅವಲಂಭಿಸಬೇಕಾದ ಪರಿಸ್ಥಿತಿಯಿದೆ. ಹಿಂದೆ ಜೀವನ ನಿರ್ವಹಣೆಗಾಗಿ ಮಾಡಿದ ಸಾಲದ ಸುಳಿಯೂ ಈ ಕುಟುಂಬದ ಮೇಲಿದ್ದು, ಸಾಲ ತೀರಿಸುವ ಕೈಯೇ  ಅವಘಡದಿಂದ ಕಣ್ಮರೆಯಾಗಿದೆ.


ಇದನ್ನು ಓದಿ: ರೈತರು ರಸ್ತೆಗಿಳಿದು 50-60 ದಿನ ಹೋರಾಟ ಮಾಡ್ತಿದ್ದಾರೆ, ಇದು ದೇಶಕ್ಕೆ ದೊಡ್ಡ ಅಪಾಯ; ಡಿಕೆ ಶಿವಕುಮಾರ್


ಸಂತ್ರಸ್ತ ಎಲ್ಲಾ ಕುಟುಂಬಗಳು ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ. ದಿನಗೂಲಿಯಿಂದಲೇ ಜೀವನ ನಿರ್ವಹಿಸುವ ಈ ಕುಟುಂಬಗಳ ಆಧಾರ ಸ್ತಂಭಗಳೇ ಬಸ್ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದು, ದಾನಿಗಳ ಸಹಾಯದಲ್ಲೇ ಈ ಕುಟುಂಬಗಳೀಗ ಬದುಕುತ್ತಿವೆ. ಕೇರಳ ಸರಕಾರ ಹಾಗೂ ಕರ್ನಾಟಕ ಸರಕಾರ ಈ ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆಯನ್ನು ನೀಡಿದೆಯಾದರೂ, ಈವರೆಗೂ ಈ ಕುಟುಂಬಗಳಿಗೆ ನೀಡಿದ ಭರವಸೆ ಈಡೇರಿಲ್ಲ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪ್ರಯತ್ನ  ನಡೆಸುತ್ತಿದ್ದಾರೆ.


ಕುಟುಂಬದ ಆಧಾರಸ್ತಂಭಗಳೇ ಬಸ್ ದುರಂತದಲ್ಲಿ ಅಸುನೀಗಿವೆ. ಇದೀಗ ಬೀದಿ ಪಾಲಾಗುವ ಸ್ಥಿತಿಗೆ ತಲುಪಿರುವ ಕುಟುಂಬಗಳಿಗೆ ರಾಜ್ಯ ಸರಕಾರ ಸಹಾಯ ಮಾಡಬೇಕಿದೆ. ಮುಖ್ಯಮಂತ್ರಿಗಳು ಈ ಕುಟುಂಬಗಳ ನೆರವಿಗೆ ಧಾವಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Published by:HR Ramesh
First published: