ದಕ್ಷಿಣ ಕನ್ನಡ(ಸೆ.04): ಕೇರಳ ಗಡಿಭಾಗವನ್ನು ಹಂಚಿಕೊಂಡಿರುವಂತಹ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ನಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ. ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 16 ಹಾಗೂ 17 ರ ಆಸುಪಾಸಿನಲ್ಲಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೋನಾ ನಿಯಂತ್ರಣದ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಹೊಂದಿದ ರೋಗಿಗಳ ಸಾವಿನ ಸಂಖ್ಯೆಯೂ ಕಡಿಮೆಯಾಗದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಇದೀಗ ಖಾಸಗಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್-19 ಪಾಸಿಟಿವ್ ರೋಗಿಯನ್ನು ಚಿಕಿತ್ಸೆಯ ಅವಧಿ ಮುಗಿಯುವ ಮೊದಲೇ ಡಿಸ್ಚಾರ್ಜ್ ಮಾಡದಂತೆ ಸೂಚನೆ ನೀಡಲಾಗಿದೆ. ರೋಗಿಯನ್ನು ಡಿಸ್ಚಾರ್ಜ್ ಮಾಡುವಂತೆ ರೋಗಿಯ ಸಂಬಂಧಿಕರೂ ಆಸ್ಪತ್ರೆಯ ಮೇಲೆ ಒತ್ತಡ ಹೇರುವಂತಿಲ್ಲ ಎನ್ನುವ ನಿರ್ದೇಶನವನ್ನೂ ಹೊರಡಿಸಲಾಗಿದ್ದು, ಇಂಥ ಪ್ರಕರಣಗಳು ಕಂಡು ಬಂದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿ ತರಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.
ರಾತ್ರಿ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಯನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಯಲ್ಲಿ ಪಾಸಿಟೀವ್ ವರದಿ ಬಂದಲ್ಲಿ ರೋಗಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಇಲ್ಲವೇ ರೋಗಿಯ ಸಂಬಂಧಿಕರು ಬಯಸಿದಲ್ಲಿ ಬೇರೆ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಬೇಕು. ಕೊರೊನಾ ಪಾಸಿಟಿವ್ ಹೊಂದಿದ ರೋಗಿಯನ್ನು ಚಿಕಿತ್ಸೆ ಮುಗಿಯುವ ಮೊದಲೇ ಡಿಸ್ಚಾರ್ಜ್ ಮಾಡಿದ ಕಾರಣಕ್ಕಾಗಿ ಮನೆಯಲ್ಲಿ ಆ ರೋಗಿಯು ಸಾವನ್ನಪ್ಪುವ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಈ ಜಿಲ್ಲಾಡಳಿತ ಈ ಮಾರ್ಗಸೂಚಿಯನ್ನು ಹೊರಡಿಸಿದೆ.
ಇದನ್ನೂ ಓದಿ:Fact Check: ‘ಮದ್ಯ ಖರೀದಿಸುವವರಿಗೆ ಪಡಿತರ ನಿಲ್ಲಿಸಬೇಕು‘; ರತನ್ ಟಾಟಾ ಹೆಸರಲ್ಲಿ ಹರಿದಾಡಿದ ಈ ಸುದ್ದಿ ಎಷ್ಟು ಸತ್ಯ?
ಪುತ್ತೂರು ತಾಲೂಕೊಂದರಲ್ಲೇ ಸುಮಾರು 10 ಕ್ಕೂ ಹೆಚ್ಚು ಇಂತಹ ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ಮುಗಿಯುವ ಮೊದಲೇ ರೋಗಿಯನ್ನು ಮನೆಗೆ ಕಳುಹಿಸಲಾಗಿದ್ದು, ಬಳಿಕ ರೋಗಿ ಮನೆಯಲ್ಲಿ ಸಾವನ್ನಪ್ಪುತ್ತಿರುವುದು ಜಿಲ್ಲಾಡಳಿತದ ತಲೆ ನೋವಿಗೂ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚನೆಯನ್ನು ನೀಡಲಾಗಿದೆ.
ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯು ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭ ಆತ ಚಿಕಿತ್ಸೆಯ ಖರ್ಚು-ವೆಚ್ಚಗಳ ಬಗ್ಗೆ ಗೊಂದಲಕ್ಕೀಡಾಗುವ ಸಂದರ್ಭದಲ್ಲಿ ಚಿಕಿತ್ಸೆ ಮುಗಿಯುವ ಮೊದಲೇ ಮನೆಗೆ ಹೋಗುವ ಪ್ರಯತ್ನಗಳನ್ನು ನಡೆಸುತ್ತಾರೆ. ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಸರಕಾರ ಉಚಿತ ಚಿಕಿತ್ಸೆಯನ್ನು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ವ್ಯವಸ್ಥೆಯನ್ನು ಮಾಡಿದೆ. ಆದುದರಿಂದ ರೋಗಿ ಹಾಗೂ ರೋಗಿಯ ಸಂಬಂಧಿಕರು ಚಿಕಿತ್ಸೆಯ ವೆಚ್ಚದ ಬಗ್ಗೆ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ತಿಳಿಸುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯುಷ್ಮಾನ್ ಯೋಜನೆಯಡಿ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿದ್ದು, ಈ ಯೋಜನೆಯ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:Schools Reopen: ಶೀಘ್ರದಲ್ಲೇ 1-5ನೇ ತರಗತಿ ಆರಂಭವಾಗುತ್ತಾ? ಈ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದೇನು?
ಪುತ್ತೂರು ತಾಲೂಕಿನ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿದ್ದು, ಅಲ್ಲದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೂ ಸುಸಜ್ಜಿತ ವ್ಯವಸ್ಥೆಯನ್ನು ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 2.1 ರ ಆಸುಪಾಸಿನಲ್ಲಿದ್ದರೂ, ಕೊರೊನಾ ದಿಂದ ಸಾವನ್ನಪ್ಪುವವರ ಸಂಖ್ಯೆ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಸಮರ್ಪಕವಾದ ಚಿಕಿತ್ಸೆ ಪಡೆದುಕೊಳ್ಳದೆ, ಡಿಸ್ಚಾರ್ಜ್ ಆಗುವ ಕಾರಣದಿಂದಲೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಮನಗಂಡಿರುವ ಜಿಲ್ಲಾಡಳಿತ ಈ ಮಾರ್ಗಸೂಚಿಯನ್ನು ಹೊರಡಿಸುವ ಮೂಲಕ ಇಂಥಹ ಪ್ರಕರಣಗಳನ್ನೂ ತಡೆಯಲು ಮುಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ