ಕೊಪ್ಪಳ(ಅಕ್ಟೋಬರ್. 21): ಸಮಗ್ರ ಕರ್ನಾಟಕದ ಆಶಯಕ್ಕೆ ಮಣ್ಣು ಹಾಕುವ ಕೆಲಸ ಯಾರೂ ಮಾಡಬಾರದು. ಯೋಗ, ಯೋಗ್ಯತೆ ಇರುವ ಯಾರಾದರೂ ಸಮಗ್ರ ಕರ್ನಾಟಕದ ಸಿಎಂ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು. ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರದ ಕೆಲ ವರ್ಷ ಕರ್ನಾಟಕ ನಾಲ್ಕು ಭಾಗವಾಗಿ ಹಂಚಿ ಹೋಗಿತ್ತು. ನಾಡಿನ ಭಾಷೆ, ಸಂಸ್ಕೃತಿ ಆಧರಿಸಿ, ಇಡೀ ಕರ್ನಾಟಕ ಏಕೀಕರಣವಾಗಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಕರ್ನಾಟಕದ ಆಶಯಕ್ಕೆ ಯಾರೂ ಮಣ್ಣು ಹಾಕಬಾರದು ಎಂದು ಪುರುಚ್ಚರಿಸಿದರು.
ಹಾಗಾದ್ರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಣ್ಣು ಹಾಕಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಾಗೆ ಹೇಳಲಾರೆ ಯತ್ನಾಳ್ ಅವರಷ್ಟು ನಾನು ದೊಡ್ಡವ ಮತ್ತು ಪ್ರೌಡಿಮೆ ಇರುವನಲ್ಲ. ಪಕ್ಷದ ಹಿರಿಯರು ಇದೆಲ್ಲವನ್ನೂ ಸರಿ ಮಾಡುತ್ತಾರೆ ಎಂದರು.
ಕೆಲ ಮಂತ್ರಿಗಳು ಕೋವಿಡ್ 19 ನಿಂದ ಬಳಲಿದ್ದರಿಂದ ನೆರೆ ಪರಿಹಾರದಲ್ಲಿ ಒಂದಷ್ಟು ವಿಳಂಭವಾಗುತ್ತಿದೆ. ಆದರೆ, ಕಾಂಗ್ರೆಸ್ ನವರು ನೆರೆ ಪರಿಹಾರದ ವಿಷಯದಲ್ಲಿ ಗ್ರಾಮೋ ಪೋನ್ ಕ್ಯಾಸೆಟ್ ರೀತಿಯಲ್ಲಿ ಹಳೆಯ ಕ್ಯಾಸೆಟ್ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ : ಬಿ ಸಿ ಪಾಟೀಲ್
ಯತ್ನಾಳ್ ಹೇಳಿಕೆ ಕುರಿತು ಪ್ರತಿಪಕ್ರಿಯೆ ನೀಡಿದ ಸಚಿವ ಬಿ ಸಿ ಪಾಟೀಲ್, ಯತ್ನಾಳ್ ಪಕ್ಷದ ಶಾಸಕರಾಗಿ ಈ ರೀತಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಅಶಿಸ್ತು.ಮುಂದೆ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದವರು ಆಗುತ್ತಾರೆಯೋ ದಕ್ಷಿಣ ಕರ್ನಾಟಕದವರು ಆಗುತ್ತಾರೆಯೋ ಎಂಬುದು ಮುಂದಿನ ಮೂರು ವರ್ಷಗಳ ಚುನಾವಣೆ ಬಳಿಕ ತೀರ್ಮಾನವಾಗಲಿದೆ. ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯೂ ಇಲ್ಲ, ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಮೇಲಿನವರಿಗೂ ಯಡಿಯೂರಪ್ಪ ಸಾಕಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪನವರು ಇನ್ನು ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದರು.
ಈ ಮುಂಚೆ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿದ್ದ ಯತ್ನಾಳ, ಸಿಎಂ ವರಸೆಗೆ ಬೇಸತ್ತು ಆಗಾಗ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಸಿಎಂ ಬಿಎಸ್ ವೈ ಯತ್ನಾಳ್ ಅವರಿಗೆ ಸಚಿವ ಸ್ಥಾನ ನೀಡದೇ ಸಿ. ಸಿ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಿದಾಗಿನಿಂದ ಮತ್ತು ವಿಜಯಪುರ ನಗರಕ್ಕೆ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದಿದ್ದರಿಂದ ಯತ್ನಾಳ ಅವರು ಯಡಿಯೂರಪ್ಪ ಮೇಲೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ