• Home
  • »
  • News
  • »
  • district
  • »
  • ಆಲಿಕಲ್ಲು ಮಳೆಗೆ ರಾತ್ರೋರಾತ್ರಿ ಕೊಚ್ಚಿಹೋದ ಲಕ್ಷಾಂತರ ಮೌಲ್ಯದ ಬೆಳೆ; ಸಂಕಷ್ಟದಲ್ಲಿ ಕೋಲಾರದ ರೈತರು

ಆಲಿಕಲ್ಲು ಮಳೆಗೆ ರಾತ್ರೋರಾತ್ರಿ ಕೊಚ್ಚಿಹೋದ ಲಕ್ಷಾಂತರ ಮೌಲ್ಯದ ಬೆಳೆ; ಸಂಕಷ್ಟದಲ್ಲಿ ಕೋಲಾರದ ರೈತರು

ಮಳೆಗೆ ನಾಶವಾಗಿರುವ ವೀಳ್ಯೆದೆಲೆ ಬೆಳೆ

ಮಳೆಗೆ ನಾಶವಾಗಿರುವ ವೀಳ್ಯೆದೆಲೆ ಬೆಳೆ

ಹಿಂದೆ ಕೊರೋನಾ ಲಾಕ್ ಡೌನ್ ಹಿನ್ನೆಲೆ, ಗ್ರಾಮದ ರೈತರು ಬೆಳೆ ನಷ್ಟದಿಂದ ಬೇಸರಗೊಂಡು ಟ್ರ್ಯಾಕ್ಟರ್ ಸಹಾಯದಿಂದ ಬೆಳೆಯನ್ನ ನಾಶ ಮಾಡಿದ್ದರು.  ಇದೀಗ ಮತ್ತೊಮ್ಮೆ ಅಲ್ಪ ಸ್ವಲ್ಪ ಬೆಳೆ ಹಾಕಿ ದುಡ್ಡು ಮಾಡುವ ಉದ್ದೇಶ ಹೊಂದಿದ್ದ ರೈತರ ಆಸೆಗೆ ಆಲಿಕಲ್ಲು ಮಳೆ ತಣ್ಣೀರು  ಎರಚಿದೆ.

  • Share this:

ಕೋಲಾರ(ಮೇ 28):ಕೊರೋನಾ ಲಾಕ್ ಡೌನ್ ವೇಳೆ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ಸಿಗದೆ, ರೈತರು ತಾವು ಬೆಳೆದ ಬೆಳೆಗಳನ್ನು ತಮ್ಮ ಕೈಯಿಂದಲೇ ನಾಶ ಮಾಡಿದ ಅನೇಕ ಉದಾಹರಣೆಗಳು ಇನ್ನೂ ನಮ್ಮ ಕಣ್ಣ‌ ಮುಂದೆಯೇ ಇವೆ.

ಕೊರೋನಾ ಲಾಕ್ ಡೌನ್ 50 ದಿನ ಪೂರೈಸಿ ಮುನ್ನುಗ್ಗುತ್ತಿದ್ದರೂ ಚಿನ್ನದ ನಾಡು ಕೋಲಾರದ ರೈತರು ಧೃತಿಗೆಟ್ಟಿರಲಿಲ್ಲ. ಮುಂದೆ ಹಣ ಗಳಿಸುವ ದೃಷ್ಟಿಯಿಂದ ಉತ್ತಮ ಬೆಳೆ ಬೆಳೆದು ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ರೈತ ಕಷ್ಟಪಟ್ಟು ಹಾಕಿದ ಬೆಳೆ ಆಲಿಕಲ್ಲು ಮಳೆಗೆ ಕೊಚ್ಚಿ ಹೋಗಿದೆ. ಈ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬತ್ತಲಾಯೂರು ಗ್ರಾಮದಲ್ಲಿ ನಡೆದಿದೆ.  ಗ್ರಾಮದಲ್ಲಿ ನೆನ್ನೆ ರಾತ್ರಿ ಸುರಿದ ಮಳೆಯಿಂದ ಭಾರೀ ಪ್ರಮಾಣದ ಬೆಳೆ ನಾಶವಾಗಿದೆ. 

ಇಲ್ಲಿಯ ಬತ್ತೆಪ್ಪ,  ಮುನಿಯಪ್ಪ, ಮಂಜುನಾಥ್, ಕೃಷ್ಣಾರೆಡ್ಡಿ ಸೇರಿದಂತೆ 40ಕ್ಕೂ ಹೆಚ್ಚು ರೈತರು ಹತ್ತಾರು ಎಕರೆ ಪ್ರದೇಶದ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸು, ಟೊಮೆಟೊ, ವೀಳ್ಯೆದೆಲೆ, ಜೋಳದ ಬೆಳೆಗಳು ಆಲಿಕಲ್ಲು ಮಳೆ ಬಿದ್ದ ಪರಿಣಾಮ ಸಂಪೂರ್ಣವಾಗಿ ನೆಲ ಕಚ್ಚಿವೆ. ಲಕ್ಷಾಂತರ ರೂ ಮೌಲ್ಯದ ಟೊಮೆಟೊ, ಎಲೆಕೋಸು, ಜೋಳ ಬೆಳೆ ಮಣ್ಣು ಪಾಲಾಗಿದೆ.

ಗ್ರಾಮದ ಮಂಜುನಾಥ್ ಎನ್ನುವರು ಕಳೆದ 5 ವರ್ಷಗಳಿಂದ ಬೆಳೆಸುತ್ತಿದ್ದ ವೀಳ್ಯೆದೆಲೆ ತೋಟವು ಸಂಪೂರ್ಣವಾಗಿ ನೆಲಕಚ್ಚಿದ್ದು, ಇದೀಗ ದಿಕ್ಕೇ ತೋಚದಂತಾಗಿದೆ. ಎಲೆಕೋಸು, ಹೂಕೋಸು, ಟೊಮೆಟೊ  ಬೆಳೆಗಳ ಮೇಲೆ ಆಲಿಕಲ್ಲು ಬಿದ್ದ ರಭಸಕ್ಕೆ  ಎಲೆಗಳು ಹಾಗೂ ಟೊಮೆಟೊ ಗಿಡಗಳು ಹೋಳಾಗಿದೆ.

ಈ ಹಿಂದೆ ಕೊರೋನಾ ಲಾಕ್ ಡೌನ್ ಹಿನ್ನೆಲೆ, ಗ್ರಾಮದ ರೈತರು ಬೆಳೆ ನಷ್ಟದಿಂದ ಬೇಸರಗೊಂಡು ಟ್ರ್ಯಾಕ್ಟರ್ ಸಹಾಯದಿಂದ ಬೆಳೆಯನ್ನ ನಾಶ ಮಾಡಿದ್ದರು.  ಇದೀಗ ಮತ್ತೊಮ್ಮೆ ಅಲ್ಪ ಸ್ವಲ್ಪ ಬೆಳೆ ಹಾಕಿ ದುಡ್ಡು ಮಾಡುವ ಉದ್ದೇಶ ಹೊಂದಿದ್ದ ರೈತರ ಆಸೆಗೆ ಆಲಿಕಲ್ಲು ಮಳೆ ತಣ್ಣೀರು  ಎರಚಿದೆ. ಈ ಕುರಿತು ಮಾತನಾಡಿದ ರೈತರು ಕೋಲಾರ ಜಿಲ್ಲಾಡಳಿತ ಸೂಕ್ತ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿಸಲ್ಲಿ ಸಿಗುವ  ಪರಿಹಾರದಿಂದ ಆದರೂ ಮುಂದೆ ಕೃಷಿ ಮಾಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ. 

ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ; ರಾಮನಗರದಲ್ಲಿ ಕೊರೋನಾ ಕೇಸ್ ಪತ್ತೆ, ಆತಂಕದಲ್ಲಿ ಜನಸಾಮಾನ್ಯರು

ಆಲಿಕಲ್ಲು ಮಳೆಯಿಂದ ಬೆಳೆನಾಶ, ಸಮೀಕ್ಷೆ ನಡೆಸಿ ವರದಿ ನೀಡಲು ಡಿಸಿ ಸೂಚನೆ

ಕಳೆದ  20 ದಿನಗಳ ಹಿಂದೆಯೂ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿತ್ತು. ಆಗ ರೈತರು ಬೆಳೆದಿದ್ದ ಒಂದು ಕೋಟಿಗೂ  ಹೆಚ್ಚು ಬೆಲೆ ಬಾಳುವ ಟೊಮೊಟೊ, ಚಿಕ್ಕಡಿಕಾಯಿ, ಮೂಲಂಗಿ, ತೊಂಡೆಕಾಯಿ ಬೆಳೆಗಳು ನಾಶವಾಗಿದ್ದವು.  ಆಗಲೂ ಸಹ ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ರೈತರಿಗೆ ಪರಿಹಾರ ಸಿಗುವ ಮುನ್ಸೂಚನೆ ಸಿಕ್ಕಿಲ್ಲ,

ಇದೀಗ ಬುಧವಾರ ಸುರಿದ  ಆಲಿಕಲ್ಲು ಮಳೆಯಿಂದ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಬೆಳೆನಾಶ ಆಗಿದೆ. ರೈತರು ಮತ್ತೆ ಅದೇ ಸರ್ಕಾರದ ಕಡೆಗೆ ಪರಿಹಾರಕ್ಕಾಗಿ ಮುಖ ಮಾಡಿದ್ದಾರೆ.  ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಹಾನಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಸೂಚನೆ ನೀಡಿದ್ದಾರೆ. ವರದಿ ಬಂದ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

First published: