ದಾವಣಗೆರೆ(ಆ.12): ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರೈತರು ಸರ್ಕಾರದ ಯೋಜನೆಗಳನ್ನು ಪಡೆಯಲು ಈ ಸಮೀಕ್ಷೆ ಅಡಿಯಲ್ಲಿ ನಿಖರವಾಗಿ ಬೆಳೆಯನ್ನು ನಮೂದಿಸುವುದು ಅತ್ಯಗತ್ಯವಾಗಿದೆ. ಕಳೆದ ಸಾಲಿನಲ್ಲಿ ನಿಯೋಜಿತ ಖಾಸಗಿ ನಿವಾಸಿಗಳಿಂದ, ಇಲಾಖಾ ಸಿಬ್ಬಂದಿಗಳಿಂದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಆದರೆ 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಬೆಳೆ ಸಮೀಕ್ಷೆ ಯೋಜನೆಗೆ ಬಹು ದೊಡ್ಡ ಬದಲಾವಣೆಯನ್ನು ತಂದು ಸ್ವತಃ ರೈತರು ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ವಾರು ಬೆಳೆದ ವಿವಿಧ ಬೆಳೆಗಳ ವಿವರ, ಕ್ಷೇತ್ರ, ಖುಷ್ಕಿ, ನೀರಾವರಿ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆಯ ವಿವರಗಳನ್ನು ‘ಬೆಳೆ ಸಮೀಕ್ಷೆ ಆ್ಯಪ್’ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ. ‘ಬೆಳೆ ಸಮೀಕ್ಷೆ ಆ್ಯಪ್’ನ್ನು ಗೂಗಲ್ ಪ್ಲೇಸ್ಟೋರ್ನಲ್ಲಿ ಮೂಲಕ ಡೌನ್ಲೋಡ್ಮಾಡಿಕೊಳ್ಳಬೇಕಾಗಿದೆ.
ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ಈ ಕೆಳಗಿನ ಚಟುವಟಿಕೆಗಳಿಗೆ ಬಳಸಬಹುದಾಗಿದೆ:
• ಕೃಷಿ, ರೇಷ್ಮೆ, ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಎಣಿಕೆ ಕಾರ್ಯಗಳಲ್ಲಿ.• ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಸರ್ವೆ ನಂಬರ್ ಆಯ್ಕೆ ಮಾಡಲು.• ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು.• ಆರ್.ಟಿ.ಸಿ.ಯಲ್ಲಿ ಬೆಳೆ ವಿವರಗಳ ದಾಖಲಾತಿಗಾಗಿ.• ಎನ್.ಡಿ.ಆರ್.ಎಫ್/ಎಸ್.ಬಿ.ಆರ್.ಎಫ್ ಅಡಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೊಳಗಾದ ಬೆಳೆಯ ವಿಸ್ತೀರ್ಣದ ವಿವರ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ.
ಮೇಲೆ ತಿಳಿಸಿದ ಕಾರ್ಯಗಳಿಗೆ ಬೆಳೆ ಸಮೀಕ್ಷೆಯ ಮಾಹಿತಿಯು ಅತ್ಯಗತ್ಯವಾಗಿದ್ದು, ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ನಮೂದಿಸಲು ಕೋರಿದೆ.
ಆಯಾ ಗ್ರಾಮದಲ್ಲಿರುವ ವಿದ್ಯಾವಂತ ಯುವಕರನ್ನು ಖಾಸಗಿ ನಿವಾಸಿಗಳೆಂದು ಗುರುತಿಸಲಾಗಿದ್ದು ಅವರ ಸಹಾಯದಿಂದಲೂ ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ತಾವು ಬೆಳೆದ ಬೆಳೆಯನ್ನು ದಾಖಲಿಸಬಹುದಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವಿವರಗಳನ್ನು ರೈತರೇ ಖುದ್ದು ಖಾಸಗಿ ನಿವಾಸಿಗಳ ಸಹಾಯ ಪಡೆದು ಆಗಸ್ಟ್ 24ನೇ ತಾರೀಖಿನವರೆಗೆ ನಮೂದಿಸಲು ಅವಕಾಶ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀನಿವಾಸ ಚಿಂತಾಲ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ