ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದ ಕೃಷ್ಣಾ ನದಿಯಲ್ಲಿ ಅಮಾವಾಸ್ಯೆ ದಿನವಾದ ನಿನ್ನೆ ಒಬ್ಬ ಕುರಿಗಾಯಿ ಮೊಸಳೆಯೊಂದಕ್ಕೆ ಬಲಿಯಾಗಿದ್ದಾನೆ. ಕುರಿಗಳಿಗೆ ಸ್ನಾನ ಮಾಡಿಸಲು ನೀರಿಗಿಳಿದಿದ್ದಾಗ ಮೊಸಳೆಯು ಲಕ್ಷ್ಮಣ್ಣನ ಕಚ್ಚಿ ಹಿಡಿದು ಹೊತ್ತೊಯ್ದಿದೆ. ಇಂದು ಈ ಕುರಿಗಾಹಿಯ ಶವ ಪತ್ತೆಯಾಗಿದೆ. ಈ ಘಟನೆಯು ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಜನರನ್ನು ಬೆಚ್ಚಿಬೀಳಿಸಿದೆ.
ಶಹಾಪುರ ತಾಲೂಕಿನ ಶಾರದಾಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಣ್ಣ ಕಡುಬಡತನದಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದನು. ಆದರೆ, ಲಕ್ಷ್ಮಣ್ಣ ತನ್ನ ಊರಿನವರ ಜೊತೆ ತನ್ನ 40 ಕುರಿಗಳೊಂದಿಗೆ ಕುರಿ ಮೇಯಿಸಲು ಯಕ್ಷಿಂತಿ ಗ್ರಾಮಕ್ಕೆ ತೆರಳಿದನು. ಕುರಿ ಹಟ್ಟಿ ಹಾಕಿದನು. ಆದರೆ, ಇಂದು ಅಮಾವಾಸ್ಯೆ ಹಿನ್ನೆಲೆ ಲಕ್ಷ್ಮಣ್ಣ ಕುರಿಗಳನ್ನು ಹೊಡೆದುಕೊಂಡು ಕೃಷ್ಣಾ ನದಿ ತೀರಕ್ಕೆ ಹೋಗಿದ್ದನು. ತನ್ನ ಊರಿನವರ ಜೊತೆ ಕುರಿಗಳಿಗೆ ಸ್ನಾನ ಮಾಡಿಸಲು ಹೋಗಿದನು.
ಕುರಿಗಳಿಗೆ ಸ್ನಾನ ಮಾಡಿಸುವಾಗ, ವಿಧಿಯಾಟ ಬೇರೆ ಎಂಬಂತೆ ಬೃಹತ್ ಮೊಸಳೆಯೊಂದು ಲಕ್ಷ್ಮಣ್ಣನ ಮೇಲೆ ದಾಳಿ ಮಾಡಿದೆ. ಹಸಿವಿನಿಂದ ಬಳಲುತ್ತಿದ್ದ ಮೊಸಳೆ ಲಕ್ಷ್ಮಣ್ಣನ ಕಾಲು ಹಿಡಿದು ನದಿಯೊಳಗೆ ಎಳೆದೊಯ್ದಿದಿದೆ. ಈ ವೇಳೆ ಅಲ್ಲಿಯೇ ಇದ್ದ ಕುರಿಗಾಹಿಗಳು ಬಟ್ಟೆಯನ್ನು ಬಿಸಾಕಿ ಹಾಗೂ ಕಟ್ಟಿಗೆ ಬಿಸಾಕಿ ರಕ್ಷಣೆ ಮಾಡಲು ಮುಂದಾದರು. ಅವರ ಪ್ರಯತ್ನ ವಿಫಲವಾಗಿದೆ. ಕೊನೆಗೂ ಒದ್ದಾಡುತ್ತಾ ಲಕ್ಷ್ಮಣ್ಣ ಮೋಸಳೆ ಬಾಯಿ ಪಾಲಾಗಿದ್ದಾನೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸಂತ್ರಸ್ತೆಗೆ ನೋಟೀಸ್; ವಿಡಿಯೋ ಬಿಡುಗಡೆಗೆ ಮುನ್ನ ಸಭೆ ಸೇರಿದ್ದ ಯುವಕರು
ಮೊಸಳೆ ಕಂಡೊಡನೆ ಮೂರು ಜನ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಆದರೆ, ಲಕ್ಷ್ಮಣ್ಣನನ್ನು ಬದುಕಿಸಬೇಕೆಂಬ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ಮೊಸಳೆ ಎಳೆದೊಯ್ದ ಘಟನೆ ನಂತರ ಸ್ಥಳಕ್ಕೆ ತಡವಾಗಿ ತಹಶಿಲ್ದಾರ ಪ್ರಕಾಶ್, ಅಗ್ನಿಶಾಮಕದಳ ಹಾಗೂ ಪೊಲೀಸರು ತಡವಾಗಿ ಆಗಮಿಸಿ ಬೋಟ್ ಹಾಗೂ ಮೀನುಗಾರರ ಸಹಾಯ ಪಡೆದು ಕಾಟಾಚಾರಕ್ಕೆ ಶವ ಶೋಧ ಕಾರ್ಯ ನಡೆಸುವ ಕೆಲಸ ಮಾಡಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಶೋಧ ಕಾರ್ಯ ಸ್ಥಗಿತಗೊಳಿಸಿದರು. ಮರುದಿನ, ಅಂದರೆ ಇಂದು ಈತನ ಶವ ಪತ್ತೆಯಾಗಿದೆ.
ಮೊಸಳೆ ದಾಳಿಯಿಂದ ಜನ ಭಯಗೊಂಡಿದ್ದಾರೆ. ಅಧಿಕಾರಿಗಳು ಶವ ಪತ್ತೆ ಹಚ್ಚಿ ಮೃತ ವ್ಯಕ್ತಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕಾಗಿದೆ. ಮೊಸಳೆ ದಾಳಿಯಾಗಿ ಮೃತ ಪಟ್ಟ ಘಟನೆ ಕೇಳಿ ತಂಡೋ ತಂಡದಲ್ಲಿ ಜನರು ನೋಡಲು ಬರುತ್ತಿದ್ದರು. ಕೃಷ್ಣಾ ನದಿಯಲ್ಲಿ ಮೋಸಳೆಗಳ ಕಾಟ ಹೆಚ್ಚಾದ್ರು ಜನರು ನದಿಯೊಳಗೆ ಶವ ಶೋಧ ಮಾಡುವ ನೆಪದಲ್ಲಿ ನದಿ ದಾಟುವ ಕೆಲಸ ಮಾಡುತ್ತಿದ್ದರು. ಮತ್ತೆ ಕೆಲವರು ನದಿ ತೀರದಲ್ಲಿ ಓಡಾಡುತ್ತಿದ್ದರು.
ವರದಿ: ನಾಗಪ್ಪ ಮಾಲಿಪಾಟೀಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ