ವಿಚಾರಣಾಧೀನ ಕೈದಿ ಜಿಲ್ಲಾಸ್ಪತ್ರೆಯಲ್ಲಿ ಸಾವು ; ಸಿಐಡಿ ತನಿಖೆ ನಡೆಸಲು ವಾಲ್ಮೀಕಿ ಸಮಾಜ ಮುಖಂಡರ ಆಗ್ರಹ

ಮೃತ ಯುವಕನ ಸಂಬಂಧಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದು, ಕಳ್ಳತನದ ಆರೋಪ ಎದುರಿಸುತ್ತಿದ್ದ ತಮ್ಮ ಮಗನ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಯುವಕನ ಸಂಬಂಧಿ ಸುರೇಶ ತಳವಾರ ಆಗ್ರಹಿಸಿದ್ದಾರೆ.

ಬಸಪ್ಪ ಸಂಜೀವಪ್ಪ ತಳವಾರ

ಬಸಪ್ಪ ಸಂಜೀವಪ್ಪ ತಳವಾರ

  • Share this:
ವಿಜಯಪುರ(ಅಕ್ಟೋಬರ್​. 06): ಕಳ್ಳತನ ಆರೋಪಕ್ಕೆ ಗುರಿಯಾಗಿ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ಸಾವಿಗೀಡಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಬೊಮ್ಮಣಗಿ ಗ್ರಾಮದ ಬಸಪ್ಪ ಸಂಜೀವಪ್ಪ ತಳವಾರ ವಿಜಯಪುರ ಜಿಲ್ಲೆಯ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದರು.  ಅಲ್ಲದೇ, ಈ ಕುರಿತು ವಿಚಾರಣೆ ನಡೆಸಿದ ಆಲಮಟ್ಟಿ ಪೊಲೀಸರು ಸೆಪ್ಟೆಂಬರ್ 28 ರಂದು ನ್ಯಾಯಾಲಯದ ಆದೇಶದಂತೆ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ಬಳಿಕ ನಿನ್ನೆ ಬೆಳಿಗ್ಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ವಿಚಾರಣಾಧೀನ ಕೈದಿಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಸಾವಿಗೀಡಾಗಿದ್ದಾನೆ. ಈ ಸುದ್ದಿ ತಿಳಿದ ಯುವಕನ ಸಂಬಂಧಿಕರು ವಿಜಯಪುರ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದು, ಕಳ್ಳತನದ ಆರೋಪ ಎದುರಿಸುತ್ತಿದ್ದ ತಮ್ಮ ಮಗನ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಯುವಕನ ಸಂಬಂಧಿ ಸುರೇಶ ತಳವಾರ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಕಳ್ಳತನ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿತ್ತು. ನಂತರ ಆತನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕಾರಾಗೃಹದ ಸಿಬ್ಬಂದಿ ಆರೋಪಿಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಆತನ ಸಾವಿನ ಬಗ್ಗೆ ಆರೋಪಗಳಿದ್ದರೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಯುವಕ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಾಲ್ಮೀಕಿ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : ಆನೇಕಲ್​ನ ರೌಡಿ ಶೀಟರ್ ಬರ್ಬರ ಹತ್ಯೆ; ಸ್ನೇಹಿತರಿಂದಲೇ ಕೊಲೆಯಾಗಿರುವ ಶಂಕೆ

ಯುವಕನನ್ನು ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಆಲಮಟ್ಟಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ಪೊಲೀಸ್ ಠಾಣೆಯಲ್ಲಿಯೇ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ದೌರ್ಜನ್ಯ ಎಸಗಿದ್ದಾರೆ. ನಂತರ ಜೈಲಿಗೆ ಕಳುಹಿಸಿದ್ದು, ಪೊಲೀಸರ ಚಿತ್ರಹಿಂಸೆಯ ಕಾರಣ ತಮ್ಮ ಸಮಾಜದ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಅಕ್ಟೋಬರ್​ 5 ರಂದು ರಾತ್ರಿ ಮೃತಪಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮೇಲೆ ತಮಗೆ ವಿಶ್ವಾಸವಿಲ್ಲ. ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ್​​​ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
Published by:G Hareeshkumar
First published: