Crime News: ಅಪ್ರಾಪ್ತೆ ಜೊತೆ ಪ್ರೀತಿಯ ನಾಟಕವಾಡಿ ಮಗು ಕೊಟ್ಟ; ಪ್ರೇಯಸಿಯನ್ನೇ ಕೊಂದು ಕೊಳವೆಬಾವಿಗೆ ಹಾಕಿದ!

Koppal Murder: ಕೊಪ್ಪಳದ ಯುವಕ ಯಲ್ಲಪ್ಪ ತನ್ನ ಪ್ರೇಯಸಿಯನ್ನು ಕೊಂದು, ಕೊಳವೆಬಾವಿಯಲ್ಲಿ ಹಾಕಿ, ಆಕೆ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಹಬ್ಬಿಸಿದ. ಕೊನೆಗೆ ಅವನ ಕೃತ್ಯ ಬಯಲಾಗಿದ್ದು ಹೇಗೆ? ಇಲ್ಲಿದೆ ಪೂರ್ತಿ ಕತೆ.

ಯಲ್ಲಪ್ಪ ಮತ್ತು ಮದ್ದಾನವ್ವ

ಯಲ್ಲಪ್ಪ ಮತ್ತು ಮದ್ದಾನವ್ವ

  • Share this:
ಕೊಪ್ಪಳ: ಇದು ಹದಿಹರೆಯದ ಹಸಿ ಬಿಸಿ ಪ್ರೇಮ ಕಹಾನಿ. ಅಪ್ರಾಪ್ತೆಯನ್ನು ಪ್ರೀತಿಸಿದ ವ್ಯಕ್ತಿಯೊಬ್ಬ ಆಕೆಗೆ ಮಗುವನ್ನು ಸಹ ಕೊಟ್ಟ. ಆದರೆ, ಮದುವೆಯಾಗಲು ಒಪ್ಪದೆ ದೂರ ಹೋದ. ಹಿರಿಯರ ಒತ್ತಡಕ್ಕೆ ಮಣಿದು ಆಕೆಯೊಂದಿಗೆ ಇದ್ದರೂ ಆಕೆಯನ್ನು ಬಿಟ್ಟು ಬೇರೆ ಮದುವೆ ಮಾಡಿಕೊಳ್ಳಬೇಕಿತ್ತು. ಈ ಕಾರಣಕ್ಕಾಗಿ ಆಕೆಯನ್ನು ಕೊಂದ. ಕೊಂದಿದ್ದು ಗೊತ್ತಾಗಬಾರದು ಎಂದು ಹೆಣವನ್ನು ಕೊಳವೆಬಾವಿಯಲ್ಲಿ ಹಾಕಿ ಮುಚ್ಚಿ, ಆಕೆ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂಬ ಸುದ್ದಿಯನ್ನೂ ಹಬ್ಬಿಸಿದ. ಕೊನೆಗೆ ಅವನ ಕೃತ್ಯ ಬಯಲಾಗಿದ್ದು ಹೇಗೆ? ಇಲ್ಲಿದೆ ಪೂರ್ತಿ ಕತೆ.

ಕೊಪ್ಪಳದಲ್ಲಿ ನಡೆದ ಘಟನೆಯಿದು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೇಗುಡ್ಡದ  ಹುಡುಗಿಯ  ಮದ್ದಾನವ್ವನ ವಯಸ್ಸು ಈಗ 19 ವರ್ಷ. ಕಳೆದ 20 ದಿನಗಳ ಹಿಂದೆ ಆಕೆಯನ್ನು ಪ್ರೀತಿಸಿದ್ದೇನೆ ಎಂದು ನಾಟಕ ಮಾಡಿದ್ದವನೇ ಕತ್ತು ಹಿಸುಕಿ ಕೊಲೆ ಮಾಡಿ ದೂರದಲ್ಲಿರುವ ಕೊಳವೆ ಬಾವಿಯಲ್ಲಿ ಹೂತು ಹಾಕಿದ್ದ. ಇದೇ ಗ್ರಾಮದ ಯಲ್ಲಪ್ಪ ಬಮ್ಮನಗೌಡ ಎಂಬ 22 ವರ್ಷದ ಯುವಕನ ಮೋಹದ ಬಲೆಗೆ ಬಿದ್ದಿದ್ದ. ಈಗ ಮದ್ದಾನವ್ವ ಕೊಲೆಯಾಗಿದ್ದಾಳೆ. ಇಬ್ಬರೂ ವರಸೆಯಲ್ಲಿ ದೂರದ ಸಂಬಂಧಿಗಳಾಗಿದ್ದರು. ಮದ್ದಾನವ್ವನಿಗೆ ತಂದೆ ಹಾಗೂ ತಾಯಿ ಇರಲಿಲ್ಲ. ಅಜ್ಜ ಹಾಗೂ ದೊಡ್ಡಮ್ಮನ ಮನೆಯಲ್ಲಿದ್ದಳು. ಇದೇ ಗ್ರಾಮದ ಯಲ್ಲಪ್ಪ ಕೃಷಿ ಕೆಲಸ ಮಾಡಿಕೊಂಡಿದ್ದ. ಆಕೆಯೂ ಸಹ ಕೂಲಿ ಕೆಲಸವನ್ನೇ ಮಾಡುತ್ತಿದ್ದಳು. ಅದು ಹೇಗೊ ಇಬ್ಬರಲ್ಲಿ ಪ್ರೀತಿ ಹುಟ್ಟಿದೆ. ಆಕೆಗೆ 16 ವರ್ಷವಿದ್ದಾಗ ಆಕೆಯ ಬೆನ್ನಿಗೆ ಬಿದ್ದ ಯಲ್ಲಪ್ಪ ಆಕೆಯನ್ನು ಪ್ರೀತಿಸುತ್ತೇನೆ ಎಂದು ಗಂಟು ಬಿದ್ದ.

ಇದನ್ನೂ ಓದಿ: Karnataka Weather Today: ಇಂದಿನಿಂದ 3 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ವಯೋಸಹಜವಾಗಿ ಮದ್ದಾನವ್ವ ಸಹ ಅವನ ಬಣ್ಣದ ಮಾತಿಗೆ ಬಲಿಯಾಗಿ ಪ್ರೀತಿಸಲು ಆರಂಭಿಸಿದಳು. ಈ ಪ್ರೀತಿ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಮದ್ದಾನವ್ವ ಬೇರೆ ಊರಿಗೆ ಕೂಲಿ ಕೆಲಸಕ್ಕೆ ಹೋದರೆ ಅಲ್ಲಿಗೇ ಹೋಗಿ ಆಕೆಯನ್ನು ಹಿಂಬಾಲಿಸಿದ. ಹೀಗೆ ಒಂದು ವರ್ಷ ಕಳೆದ ನಂತರ ಮನೆಯವರಿಗೆ ಗೊತ್ತಾಯಿತು. ಆಗ ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ಆದರೆ ಅವರಿಬ್ಬರು ಜೊತೆಯಾಗಿಯೇ ತಿರುಗಾಡುತ್ತಿದ್ದರು. ಕೊನೆಗೆ ಹೀಗೆ ಎರಡು ವರ್ಷದ ಹಿಂದೆ ಆಕೆ ಗರ್ಭಿಣಿ ಎಂಬುವುದು ಗೊತ್ತಾಯಿತು. ಇದರಿಂದಾಗಿ ಆಕೆ ತನ್ನನ್ನು ಮದುವೆಯಾಗುವಂತೆ ಅವನಿಗೆ ಗಂಟು ಬಿದ್ದಿದ್ದಾಳೆ. ಮನೆಯಲ್ಲಿಯೂ ಸಹ ಬಸುರಿಯಾದ ಆಕೆಯನ್ನು ಮದುವೆಯಾಗು ಎಂದು ಮದ್ದಾನವ್ವನ ಮನೆಯವರು ಒತ್ತಡ ಹಾಕಿದ್ದಾರೆ. ಆಗ ಆತ ಮದುವೆಗೆ ನಿರಾಕರಿಸಿದ್ದಾನೆ.

ಯಲ್ಲಪ್ಪ ತನ್ನನ್ನು ಮದುವೆಯಾಗಲು ನಿರಾಕರಿಸಿದಾಗ ಆಕೆ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಅಪ್ರಾಪ್ತೆಯಾಗಿದ್ದರಿಂದ ಬಾಲಮಂದಿರದಲ್ಲಿರಿಸಲು ಸೂಚಿಸಲಾಗಿತ್ತು. ಆದರೆ ನಾನು ಬಾಲಮಂದಿರಕ್ಕೆ ಸೇರಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಗ್ರಾಮದ ಹಿರಿಯರು ಮಾನವೀಯತೆಯ ಹಿನ್ನೆಲೆಯಲ್ಲಿ ಸಂಧಾನ ಮಾಡಿ ಆಕೆ ಹಾಗೂ ಯಲ್ಲಪ್ಪನ ಮನೆಯಲ್ಲಿ ಮದುವೆ ವಯಸ್ಸಿಗೆ ಬರುವವರೆಗೂ ಇರುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಮದ್ದಾನವ್ವನಿಗೆ ಹೆರಿಗೆಯಾಗಿದೆ. ಹೆರಿಗೆಯಾದ ನಂತರ ಯಲ್ಲಪ್ಪನೇ ಆಕೆಯ ಮಗುವನ್ನು ಸಹ ಕೊಂದಿದ್ದಾನೆ.

ಇದನ್ನೂ ಓದಿ: SSLC Exam Timetable: ಜುಲೈ 19, 22ರಂದು ಎಸ್ಎಸ್ಎಲ್​ಸಿ ಪರೀಕ್ಷೆ; ವೇಳಾಪಟ್ಟಿ, ನಿಯಮಗಳ ಮಾಹಿತಿ ಇಲ್ಲಿದೆ

ಮದ್ದಾನವ್ವನನ್ನು ಬಿಟ್ಟು ಬೇರೆ ಕಡೆ ಮದುವೆ ಮಾಡಲು ಯಲ್ಲಪ್ಪನ ತಾಯಿ ಹನುಮವ್ವ ಹುಡುಗಿ ನೋಡಲು ಮುಂದಾಗಿದ್ದಾಳೆ. ಇದರಿಂದ ಮದ್ದಾನವ್ವ ತನ್ನನ್ನು ಬಿಟ್ಟು ಯಲ್ಲಪ್ಪ ಬೇರೆ ಮದುವೆ ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂದು ಬೆದರಿಸಿದ್ದಾಳೆ.  ಆಕೆಯನ್ನು ಹೇಗಾದರೂ ಮಾಡಿ ಮುಗಿಸಿ ಬಿಟ್ಟರೆ ಈ ಸಮಸ್ಯೆ ಇರುವುದಿಲ್ಲ ಎಂದುಕೊಂಡು 21 ದಿನಗಳ ಹಿಂದೆ ರಾತ್ರಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆಕೆಯನ್ನು ಕೊಂದ ಯಲ್ಲಪ್ಪ ತನ್ನ ತಾಯಿ, ತಮ್ಮ ರಮೇಶನೊಂದಿಗೆ ಮುರುಡಿ ಬಳಿಯಲ್ಲಿರುವ ಕೆರೆಯ ಪಕ್ಕದಲ್ಲಿರುವ ಹಾಳು ಕೊಳವೆ ಬಾವಿಯಲ್ಲಿ ಹೆಣವನ್ನು ಹಾಕಿ ಬಂದಿದ್ದಾನೆ.

ಈ ಘಟನೆಯಲ್ಲಿ ಕೇವಲ ಮೂವರು ಮಾತ್ರವಲ್ಲ ಇನ್ನಷ್ಟು ಜನರಿದ್ದಾರೆ ಎಂಬುವುದು ಮದ್ದಾನವ್ವಳ ಚಿಕ್ಕಮ್ಮ ಅನಿಸಿಕೆ. ತಾವೇ ಕೊಲೆ ಮಾಡಿ ಬಂದು ಮೂರು ದಿನಗಳ ನಂತರ ಆಕೆ ಯಾರಿಗೊಂದಿಗೂ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾರೆ. ಆಕೆಯನ್ನು ಹುಡುಕಿಕೊಂಡು ಬರುತ್ತೇವೆ ಎಂದು ಹೇಳುತ್ತಾ ಕಾಲಹರಣ ಮಾಡಿದ್ದಾರೆ. ತಂದೆ ತಾಯಿ ಇಲ್ಲದ ಮದ್ದಾನವ್ವ ಕಾಣೆಯಾಗಿರುವದರಿಂದ ಆತಂಕಗೊಂಡ ಅಜ್ಜ ಶಿವಬಸಪ್ಪ ಸೋಂಪುರ ಗ್ರಾಮದ ಹಿರಿಯರಿಗೆ ಹೇಳಿದ್ದಾನೆ. ಅವರೂ ಸಹ ಯಲ್ಲಪ್ಪನನ್ನು ವಿಚಾರಣೆ ಮಾಡಿದಾಗ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾನೆ. ಆದರೆ ಅವರೇ ಕೊಲೆ ಮಾಡಿದ್ದಾರೆ ಎಂಬ ಬಲವಾದ ಅನುಮಾನವಿರುವದರಿಂದ ಶಿವಬಸಪ್ಪ ಯಲಬುರ್ಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮಾಡಿದಾಗ ತಾನೇ ಕೊಂದು ಆಕೆಯನ್ನು ಬೊರೆವೆಲ್ ನಲ್ಲಿ ಹಾಕಿದ್ದಾಗಿ ಯಲ್ಲಪ್ಪ ಒಪ್ಪಿಕೊಂಡಿದ್ದಾನೆ.

ಈ ಘಟನೆಯ ನಂತರ ಆಕೆ ಪೊಲೀಸರು ತನಿಖೆ ನಡೆಸಿದಾಗ ಬೊರೆವೆಲ್ ನಲ್ಲಿ ಹೆಣ ಹಾಕಿರುವುದು ಗೊತ್ತಾಗಿ ಕಂದಾಯ ಇಲಾಖೆ ಹಾಗೂ ನ್ಯಾಯಾಲಯದ ಅನುಮತಿ ಪಡೆದು ಬೋರೆವೆಲ್ ತೆಗೆದಾಗ 27 ಅಡಿ ಆಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮದ್ದಾನವ್ವಳ ಶವ ಪತ್ತೆಯಾಗಿದೆ. ಕೊಲೆ ಮಾಡಿರುವ ಯಲ್ಲಪ್ಪ ಹಾಗೂ ರಮೇಶರನ್ನು ಯಲಬುರ್ಗಾ ಪೊಲೀಸರು ಬಂಧಿಸಿದ್ದಾರೆ.

ಹದಿನೈದು ಎಕರೆ ಭೂಮಿ ಹೊಂದಿರುವ ಯಲ್ಲಪ್ಪ ಮದ್ದಾನವ್ವನನ್ನು ದೈಹಿಕವಾಗಿ ಬಳಸಿಕೊಂಡು ಮಗುವಾದ ನಂತರವೂ ಆಕೆಯನ್ನು ಬಿಡಲು ಮುಂದಾಗಿದ್ದ.  ಆದರೆ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬಂತೆ ಈಗ ಜೈಲೂಟ ಮಾಡುತ್ತಿದ್ದಾನೆ.  ಈ ಘಟನೆಯಲ್ಲಿ ಆತನ ತಾಯಿ ಹಾಗೂ ಇತರರಿದ್ದಾರೆ. ಅವರ ಬಗ್ಗೆಯೂ ತನಿಖೆ ಮಾಡಿ
ಶಿಕ್ಷೆ ನೀಡಬೇಕೆಂಬುದು ಮದ್ದಾನವ್ವಳ ಕುಟುಂಬದವರ ಒತ್ತಾಯವಾಗಿದೆ.
Published by:Sushma Chakre
First published: