ಕಲಬುರ್ಗಿ(ಸೆಪ್ಟೆಂಬರ್. 01): ಈಜಲು ಹೋಗಿದ್ದ ಯುವಕ ಕೆರೆಯಲ್ಲಿ ನೀರು ಪಾಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಧಂಗಾಪುರ ಗ್ರಾಮದ ಬಳಿ ನಡೆದಿದೆ. ಮೃತ ಯುವಕನನ್ನು ಧಂಗಾಪುರ ಗ್ರಾಮದ ನಿವಾಸಿ ಶಿವಶಂಕರ ಧರ್ಮಣ್ಣ ಮಾಂಗ(24) ಎಂದು ಗುರುತಿಸಲಾಗಿದೆ.
ಪ್ರತಿ ವರ್ಷ ನೀರಿಲ್ಲದೆ ಒಣಗಿರುತ್ತಿದ್ದ ಧಂಗಾಪುರ ಕೆರೆ ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಭರ್ತಿಯಾಗಿದೆ. ಭರ್ತಿಯಾಗಿರುವ ಧಂಗಾಪುರ ಗ್ರಾಮದ ಕೆರೆಗೆ ನಾಲ್ವರು ಯುವಕರು ಬೆಳಿಗ್ಗೆ ವೇಳೆ ಈಜಲೆಂದು ನೀರಿಗೆ ಧುಮುಕ್ಕಿದ್ದಾರೆ. ಮುಂದೆ ಈಜಿಕೊಂಡು ಹೋದ ಗೆಳೆಯರು ವಾಪಸ್ಸಾಗಿದ್ದಾರೆ. ಹಿಂದೆ ಈಜಿಕೊಂಡು ಹೊರಟಿದ್ದ ಶಿವಶಂಕರ ಕೆರೆಯ ಮಧ್ಯದಲ್ಲಿ ನಾಪತ್ತೆಯಾಗಿದ್ದಾನೆ.
ಎಲ್ಲಿಯೂ ಹುಡುಕಾಡಿದರೂ ಸಿಗದೇ ಇದ್ದಾಗ ಯುವಕರು ಆತಂಕಗೊಂಡಿದ್ದಾರೆ. ತಕ್ಷಣ ಉಳಿದ ಯುವಕರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಆತನ ಸುಳಿವು ಸಿಗದಿದ್ದಾಗ ಗ್ರಾಮಸ್ಥರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಿಂಬರ್ಗಾ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯ ಮೀನುಗಾರರ ಸಹಾಯದಿಂದ ಯುವಕನ ಶವವನ್ನು ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ : ಇಂದಿನಿಂದ ರಾಜ್ಯಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ; ಬಾಗಲಕೋಟೆಯಲ್ಲಿ ಮಾತ್ರ ವಿಘ್ನ ಯಾಕೆ ಗೊತ್ತಾ..?
ನಾಲ್ವರು ಗೆಳೆಯರು ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ನಾವು ನಿತ್ಯ ಇದೇ ಕೆರೆಯಲ್ಲಿ ಈಜಾಡುತ್ತಿದ್ದೆವು. ಆದರೆ ಇಂದು ಶಿವಶಂಕರ್ ನಮ್ಮ ಹಿಂದೆ ನಿಧಾನವಾಗಿ ಕೆರೆಯಲ್ಲಿ ಈಜಿಕೊಂಡು ಬಂದ. ನಾವು ವಾಪಸ್ ದಡ ಸೇರಿದರೂ ಆತ ಮಾತ್ರ ಕಾಣಿಸಲೇ ಇಲ್ಲ. ಕೆರೆ ಮಧ್ಯದಲ್ಲಿಯೇ ಆತ ಮುಳುಗಿರಬೇಕೆಂದುಕೊಂಡು ಹುಡುಕಾಟ ನಡೆಸಿದೆವು. ಕೆರೆಯ ಆಳಕ್ಕೆ ಈಜಲು ಹೋಗಿದ್ದರಿಂದ ಈ ಘಟನೆ ನಡೆದಿದೆ ಎಂದು ಆತನ ಜೊತೆ ಈಜಲು ಹೋಗಿದ್ದ ಯುವಕರು ಮಾಹಿತಿ ನೀಡಿದ್ದಾರೆ. ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪರವಾನಗಿ ಇಲ್ಲದೆ ಮರಳು ಸಾಗಿಸ್ತಿದ್ದ ಎರಡು ಟಿಪ್ಪರ್ ಜಪ್ತಿ
ಕಲಬುರ್ಗಿ ಜಿಲ್ಲೆ ಕಮಲಾಪುರ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿ ಪರವಾನಗಿ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಎರಡು ಚಿಪ್ಪರ್ಗಳನ್ನು ವಶಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ಮಾಡಿದ ಕಮಲಾಪುರ ತಹಶೀಲ್ದಾರ್ ಎರಡು ಟಿಪ್ಪರ್ ಗಳನ್ನು ಜಪ್ತಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ