HOME » NEWS » District » CRIME NEWS HAVERI POLICE ARRESTED THIEF GANG WHO LOOTED LAKHS TOGETHER MONEY DURING HOLI FESTIVAL SCT

Crime News: ಹಾವೇರಿಯಲ್ಲಿ ಹೋಳಿ ಹಬ್ಬದಲ್ಲಿ ಕೈಚಳಕ ತೋರಿದ್ದ ಕಳ್ಳರು ಪೊಲೀಸರ ಬಲೆಗೆ

ಹೋಳಿ ಹುಣ್ಣಿಮೆ ಹಿಂದಿನ ದಿನ ಕಳ್ಳತನ ಆಗಿದ್ದ ಮನೆ ನಗರದ ಬಟ್ಟೆ ವ್ಯಾಪಾರಿ ರವಿ ಜೈನ್ ಎಂಬುವವರದು ಅಂತ ಗೊತ್ತಾಗಿತ್ತು. ಬಂಧಿತರನ್ನ ಇಪ್ಪತ್ತೆಂಟು ವರ್ಷದ ಧಾರವಾಡದ ಮಹಮ್ಮದ ಹುಸೇನ್ ಶೇಖ ಮತ್ತು ಹುಬ್ಬಳ್ಳಿಯ ಇಪ್ಪತ್ತೆಂಟು ವರ್ಷದ ಅಮೀದ ಬೇಪಾರಿ ಅಂತಾ ಗುರ್ತಿಸಲಾಗಿದೆ.

news18-kannada
Updated:April 15, 2021, 7:40 AM IST
Crime News: ಹಾವೇರಿಯಲ್ಲಿ ಹೋಳಿ ಹಬ್ಬದಲ್ಲಿ ಕೈಚಳಕ ತೋರಿದ್ದ ಕಳ್ಳರು ಪೊಲೀಸರ ಬಲೆಗೆ
ಹಾವೇರಿಯ ಕಳ್ಳರ ಗ್ಯಾಂಗ್
  • Share this:
ಹಾವೇರಿ: ಮಾರ್ಚ್ 28, 2021ರಂದು ಹಾವೇರಿ ನಗರದ ಜನರು ಅದರಲ್ಲೂ ಯಾಲಕ್ಕಿ ಓಣಿಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಯಾಕಂದರೆ, ಮಾರ್ಚ್ 28, 2021ರಂದು ರಾತ್ರಿಯಿಡೀ ಜನರು ಹೋಳಿ ಹುಣ್ಣಿಮೆ ಪ್ರಯುಕ್ತ ಹಲಗೆ ಬಾರಿಸುವುದರಲ್ಲಿ ಬ್ಯುಸಿ ಆಗಿದ್ದರು. ಹೀಗೆ ಜನರು ಹಬ್ಬದ ಸಂಭ್ರಮದಲ್ಲಿ ಇದ್ದಾಗಲೇ ಹುಬ್ಬಳ್ಳಿ ಕಡೆಯಿಂದ ಬಂದಿದ್ದ ಮೂವರು ಖದೀಮರ ಗ್ಯಾಂಗ್ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಹುಡುಕಾಡ್ತಿದ್ದರು‌. ಆಗ ಯಾಲಕ್ಕಿ ಓಣಿಯ ಗುಡಿಸಲು ಕೇರಿ ಓಣಿಯಲ್ಲಿ ಬೀಗ ಹಾಕಿದ್ದ ಮನೆಯೊಂದು ಖದೀಮರ ಕಣ್ಣಿಗೆ ಬಿದ್ದಿದೆ. ಆಗ ಖದೀಮರು ತಾವು ತಂದಿದ್ದ ರಾಡ್ ನಿಂದ ಬೀಗ ಒಡೆದು ಮನೆಯಲ್ಲಿದ್ದ ಹದಿನೈದು ಲಕ್ಷ ಎಂಬತ್ತು ಸಾವಿರ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ಕದ್ದುಕೊಂಡು ಪರಾರಿ ಆಗಿದ್ದರು.

ಖದೀಮರು ತಮ್ಮ ಕೃತ್ಯ ಎಸಗಿದ ಮೇಲೆ ಮನೆಯಲ್ಲಿ ಯಾರೋ ಇರಬೇಕು ಅನ್ನೋ ಭಾವನೆ ಮೂಡಬೇಕು ಅಂತ ಮನೆಯ ಬಾಗಿಲನ್ನ ಅರ್ಧಂಬರ್ಧ ತೆರೆದು ಮನೆಯಲ್ಲಿ ಯಾರೋ ಇದ್ದಾರೆ ಅನ್ನೋ ಸೀನ್ ಕ್ರಿಯೇಟ್ ಮಾಡಿ ಹೋಗಿದ್ದರು. ಮನೆಯವರು ಮರುದಿನ ಬಂದು ನೋಡಿದಾಗ ಮನೆಯಲ್ಲಿದ್ದ ಲಕ್ಷ ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ನಾಪತ್ತೆ ಆಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಖದೀಮರ ಪತ್ತೆಗೆ ತಂಡ ರಚಿಸಿದರು‌‌. ಮೂವರ ಗ್ಯಾಂಗ್ ನಲ್ಲಿ ಇಬ್ಬರು ಖದೀಮರು ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ‌.

ಹೋಳಿ ಹುಣ್ಣಿಮೆ ಹಿಂದಿನ ದಿನ ಕಳ್ಳತನ ಆಗಿದ್ದ ಮನೆ ನಗರದ ಬಟ್ಟೆ ವ್ಯಾಪಾರಿ ರವಿ ಜೈನ್ ಎಂಬುವವರದು ಅಂತ ಗೊತ್ತಾಗಿತ್ತು. ವ್ಯಾಪಾರಿ ರವಿ ಜೈನ್ ತಮ್ಮ ಪತ್ನಿಗೆ ಆರೋಗ್ಯ ಸರಿಯಿರದ ಕಾರಣಕ್ಕೆ ದಾವಣಗೆರೆ ಆಸ್ಪತ್ರೆಗೆ ಹೋಗಿ ಮರುದಿನ ವಾಪಸ್ ಆಗಿದ್ರು. ವಾಪಸ್ ಬಂದು ನೋಡಿದಾಗ ವ್ಯಾಪಾರಿ ಅಕ್ಷರಶಃ ಕಂಗಾಲಾಗಿದ್ದರು. ವ್ಯಾಪಾರಿ ಮಾತ್ರವಲ್ಲ ಇಡೀ ಓಣಿಯ ಜನರೆ ಬೆಚ್ಚಿ ಬಿದ್ದಿದ್ದರು. ಯಾಕಂದ್ರೆ ಅರ್ಧಂಬರ್ಧ ಬಾಗಿಲು ತೆರೆದಿದ್ದ ಮನೆಯಲ್ಲಿ ಮನೆಯವರು ಇದ್ದಾರೆ ಎಂದೇ ಭಾವಿಸಿ ಓಣಿಯ ಜನರು ಅವರ ಮನೆಯ ಬಗ್ಗೆ ಗಮನ ಹರಿಸಿರಲಿಲ್ಲ. ಆದರೆ ಮನೆಯವರು ಬಂದು ನೋಡಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿತ್ತು. ಮನೆ ಕಳ್ಳತನ ಆಗಿದ್ದು ಬೆಳಕಿಗೆ ಬರ್ತಿದ್ದಂತೆ ವ್ಯಾಪಾರಿ ಜೈನ್ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: KSRTC BMTC Strike: ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್​; 8 ದಿನಗಳಲ್ಲಿ ಸರ್ಕಾರಕ್ಕೆ 146 ಕೋಟಿ ರೂ. ನಷ್ಟ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹದಿನೈದು ದಿನಗಳಲ್ಲಿ ಪ್ರಕರಣ ಬೇಧಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಖದೀಮರ ಪತ್ತೆಗೆ ಜಾಲ ಬೀಸಿದ್ದರು. ಪೊಲೀಸರು ಖದೀಮರ ಪತ್ತೆಗೆ ತೊಡಗಿದ್ದಾಗಲೇ ಏಪ್ರಿಲ್ 11, 2021ರ ರಾತ್ರಿ 11.15 ನಿಮಿಷದ ವೇಳೆಯಲ್ಲಿ ಹಾನಗಲ್ ರಸ್ತೆ ಎನ್.ಎಚ್.48 ಹೆದ್ದಾರಿಯ ಅಂಡರ್ ಬ್ರಿಡ್ಜ್ ಕೆಳಗೆ ಇಬ್ಬರು ಪೊಲೀಸರನ್ನ ಕಂಡು ಓಡುತ್ತಿದ್ದರು. ಪೊಲೀಸರು ಅವರನ್ನ ಹಿಡಿದು ತಂದು ವಿಚಾರಿಸಿದಾಗ ನಗರದ ಬಟ್ಟೆ ವ್ಯಾಪಾರಿಯ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರನ್ನ ಇಪ್ಪತ್ತೆಂಟು ವರ್ಷದ ಧಾರವಾಡದ ಮಹಮ್ಮದ ಹುಸೇನ್ ಶೇಖ ಮತ್ತು ಹುಬ್ಬಳ್ಳಿಯ ಇಪ್ಪತ್ತೆಂಟು ವರ್ಷದ ಅಮೀದ ಬೇಪಾರಿ ಅಂತಾ ಗುರ್ತಿಸಲಾಗಿದೆ. ಮತ್ತೋರ್ವ ಆರೋಪಿ ಹುಬ್ಬಳ್ಳಿಯ ಇಪ್ಪತ್ತಾರು ವರ್ಷದ ಸಲೀಮ್ ಬೇಪಾರಿ ಎಂಬಾತ ಗೋವಾ ರಾಜ್ಯದ‌ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದಾನೆ. ಬಂಧಿತರಿಂದ ನಾಲ್ಕು ಲಕ್ಷ ಎಂಬತ್ತೈದು ಸಾವಿರ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಈ ಕಾರ್ಯಕ್ಕೆ ಸ್ಥಳೀಯರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮೂರು ಜನ ಖದೀಮರು ಸೇರ್ಕೊಂಡು ವ್ಯಾಪಾರಿ ರವಿ ಜೈನ್ ಮನೆಗೆ ಕನ್ನ ಹಾಕಿ ಕದ್ದ ವಸ್ತುಗಳಲ್ಲಿ ಕೆಲವು ವಸ್ತುಗಳನ್ನ ಮಾರಾಟ ಮಾಡಿ ಮಜಾ‌ ಮಾಡಿದ್ರು. ಮತ್ತೆ ಕೆಲವು ವಸ್ತುಗಳನ್ನ ಪೈನಾನ್ಸ್ ನಲ್ಲಿ ಅಡವಿಟ್ಟಿದ್ರು. ಉಳಿದ ಕೆಲವು ವಸ್ತುಗಳನ್ನ ತಮ್ಮ ಬಳಿಯೇ ಇಟ್ಟುಕೊಂಡಿದ್ರು. ಹಾವೇರಿ ನಗರಠಾಣೆ ಪೊಲೀಸರ ಕಾರ್ಯಾಚರಣೆಯಿಂದ ಪ್ರಕರಣದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದ್ರೆ ಓರ್ವ ಆರೋಪಿ ಗೋವಾ ಪೊಲೀಸರ ವಶದಲ್ಲಿರೋದ್ರಿಂದ ಆತನನ್ನ ವಶಕ್ಕೆ ಪಡೆದು ಇನ್ನಷ್ಟು ಚಿನ್ನ, ಬೆಳ್ಳಿ ಆಭರಣ ಜಪ್ತಿ ಮಾಡಬೇಕಿದೆ. ಒಟ್ನಲ್ಲಿ ಖದೀಮರ ಕೃತ್ಯಕ್ಕೆ ಬೆಚ್ಚಿ ಬಿದ್ದಿದ್ದ ಹಾವೇರಿ ನಗರದ ಜನರು ನಗರ ಠಾಣೆ ಪೊಲೀಸರ ಕಾರ್ಯದಿಂದ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

(ವರದಿ: ಮಂಜುನಾಥ್ ತಳವಾರ)
Published by: Sushma Chakre
First published: April 15, 2021, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories