ರಾಮನಗರ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ನಡುವಿನ ವಾಕ್ಸಮರದ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸುರೇಶ್, ಆ ವಿಚಾರದ ಬಗ್ಗೆ ಇನ್ನೊಮ್ಮೆ ಮಾತನಾಡೋಣ ಅದರ ಬಗ್ಗೆ ಈಗ ಚರ್ಚೆ ಬೇಡ. ಆದರೆ, ಯೋಗೇಶ್ವರ್ಗೆ ಎಂಎಲ್ಸಿ ಆಗಲು ಅವಕಾಶ ಕೊಟ್ಟವರಿಗೆ ನಂಬಿಕೆಯಿಂದ ಇದ್ದರೆ ಸಾಕು ಎನ್ನುವ ಮೂಲಕ ತಿರುಗೇಟು ನೀಡಿದರು.
ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಲ್ಲ, ಅವರಿಗೆ ಅಧಿಕಾರವಷ್ಟೇ ಮುಖ್ಯ. ಯಾರನ್ನು ಎಂಎಲ್ಸಿ ಮಾಡಬೇಕು, ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಬೇಕು, ಮಂತ್ರಿ ಮಂಡಲ ರಚನೆ ಮಾಡಬೇಕು ಅನ್ನೋ ಚಿಂತೆ ಅವರಿಗೆ ಜಾಸ್ತಿ. ಜೊತೆಗೆ ಕೊರೋನಾ ಹೆಸರಿನಲ್ಲಿ ಹಣ ಮಾಡಬೇಕು ಅನ್ನೋ ಉದ್ದೇಶವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೋರಾಟ ಮಾಡಲು ಕಷ್ಟ, ಸದ್ಯದ ಸ್ಥಿತಿಯಲ್ಲಿ ಜನರು ಒಟ್ಟಿಗೆ ಸೇರಲು ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಹೊಂದಾಣಿಕೆಯೇ ಇಲ್ಲ. ಈ ಮಧ್ಯೆ ವರ್ಗಾವಣೆ ದಂಧೆಯೂ ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಹಾಗೂ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ದಾಖಲೆ ಪುಸ್ತಕ ಬಿಡುಗಡೆ ಮಾಡಿದರು.
ಇದನ್ನು ಓದಿ: ಬೆಂಗಳೂರಲ್ಲೇ 11 ಸಾವಿರ ಕೊರೋನಾ ಸೋಂಕಿತರು ನಾಪತ್ತೆಯಾಗಿದ್ದಾರೆ; ಮಾಜಿ ಸಚಿವ ಎಚ್.ಕೆ.ಪಾಟೀಲ
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಣ್ಣ, ಎಂಎಲ್ಸಿಗಳಾದ ಎಸ್.ರವಿ, ಸಿ.ಎಂ.ಲಿಂಗಪ್ಪ, ಇಕ್ಬಾಲ್ ಹುಸೇನ್ ಸೇರಿ ಹಲವರು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ