ಮೋಸ ಮಾಡಿದ್ದಾರೆಂಬ ವಿಶ್ವನಾಥ್ ಆರೋಪಕ್ಕೆ ಸಿ.ಪಿ. ಯೋಗೇಶ್ವರ್ ತಿರುಗೇಟು

ಹುಣಸೂರು ಚುನಾವಣೆಗೆ ಪ್ರಚಾರಕ್ಕಾಗಿ ಕೊಟ್ಟ ಹಣವನ್ನು ಯೋಗೇಶ್ವರ್ ಮತ್ತು ಸಂತೋಷ್ ಲಪಟಾಯಿಸಿದರೆಂದು ವಿಶ್ವನಾಥ್ ಮಾಡಿದ ಆರೋಪಕ್ಕೆ ಸಿಪಿವೈ ತಿರುಗೇಟು ನೀಡಿದ್ಧಾರೆ. ಮಂತ್ರಿಗಿರಿ ಸಿಗುತ್ತಿಲ್ಲವೆಂಬ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದಾರೆ.

ಸಿ.ಪಿ. ಯೋಗೇಶ್ವರ್

ಸಿ.ಪಿ. ಯೋಗೇಶ್ವರ್

  • Share this:
ರಾಮನಗರ: ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ರಾಮನಗರದಲ್ಲಿ ಸಿ.ಪಿ. ಯೋಗೇಶ್ವರ್ ನ್ಯೂಸ್ 18 ಗೆ ಎಕ್ಸ್ ಕ್ಲೂಸೀವ್ ಸಂದರ್ಶನ ನೀಡಿ ಸಿಎಂಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಸಿಪಿವೈ, ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲ ಇದ್ದೇ ಇರುತ್ತೆ, ಪಕ್ಷದೊಳಗಿನ ಗೊಂದಲಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸಿಎಂ ಯಾವ ಖಾತೆ ಕೊಟ್ರು ನಿಭಾಯಿಸುವೆ ಎಂದರು.

ನನಗೆ ಯಾರ ಲಾಬಿಯಿಂದಲೂ ಸಚಿವ ಸ್ಥಾನ ಸಿಗಲ್ಲ. ಇದರಲ್ಲಿ ನಮ್ಮ ಶ್ರಮವೂ ಇದೆ. ಜೊತೆಗೆ ನನ್ನ ವಿರುದ್ಧ ಯಾರೇ ಪಿತೂರಿ ಮಾಡಿದರೂ ಮಾಡಲಿ, ಅದು ರಾಜಕೀಯದಲ್ಲಿ ಸಾಮಾನ್ಯ. ನಾವು ಸಹ ನಮ್ಮ ಪರವಾಗಿ ಹೋರಾಟ ಮಾಡ್ತೇವೆ. ಈಗ ನಮ್ಮ ಹೋರಾಟ ಸಫಲವಾಗಿದೆ ಎಂದು ತಿಳಿಸಿದರು.

ಇನ್ನು ತನ್ನ ವಿರುದ್ಧ ಮಾತನಾಡಿದ್ದ ಎಚ್. ವಿಶ್ವನಾಥ್ ಅವರಿಗೆ ಸಿಪಿವೈ ಇದೇ ವೇಳೆ ತಿರುಗೇಟು ನೀಡಿದರು. ಯೋಗೇಶ್ವರ್ ಹುಣಸೂರು ಚುನಾವಣೆಯಲ್ಲಿ ನನಗೆ ಮೋಸ ಮಾಡಿದರು. ಯಡಿಯೂರಪ್ಪ ಅವರು ಚುನಾವಣೆಗೆ ಕೊಟ್ಟ ಹಣವನ್ನ ಯೋಗೇಶ್ವರ್ ಮತ್ತು ಸಂತೋಷ್ ನನಗೆ ಕೊಡದೇ ಲಪಟಾಯಿಸಿದರು. ನನ್ನ ಸೋಲಿಗೆ ಅವರೇ ಕಾರಣ. ಆದರೆ ಪಕ್ಷ ಅಂತಹವರಿಗೆ ಸಚಿವಗಿರಿ ಕೊಡೋದು ಯಾಕೆ ಎಂಬುದು ಮಾಜಿ ಸಚಿವ ಎಚ್ ವಿಶ್ವನಾಥ್ ಅವರ ಆರೋಪ. ಈ ವಿಚಾರವಾಗಿ ಮಾತನಾಡಿದ ಯೋಗೇಶ್ವರ್, ವಿಶ್ವನಾಥ್ ಅವರು ಹಿರಿಯರಿದ್ದಾರೆ, ಅವರು ಹತಾಶರಾಗಿದ್ದಾರೆ. ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದಿದೆ. ಆದರೆ ನಾವು ಅವರ ಪರವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಿಲ್ಲುತ್ತೇವೆ. ಹಾಗೆಯೇ ಅವರು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಮನುಷ್ಯನಿಗೆ ಕೆಲವೊಮ್ಮೆ ಬುದ್ಧಿ  ಕಂಟ್ರೋಲ್ ಇರಲ್ಲ. ಅವರ ರಾಜಕೀಯದ ಅಂತಿಮ ದಿನಗಳಲ್ಲಿ ಮಂತ್ರಿಯಾಗುವ ಆಸೆ ಇತ್ತು ಅವರಿಗೆ. ಆದರೆ ಅದು ಆಗಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್​ರನ್ನು ಅಪಹರಿಸಿ 30 ಕೋಟಿ ಹಣಕ್ಕಾಗಿ ಬೇಡಿಕೆ; ಪ್ರಕರಣ ದಾಖಲು

ಇದೇ ಸಂದರ್ಭದಲ್ಲಿ ಯೋಗೇಶ್ವರ್ ವಿರುದ್ಧ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿ, ಯೋಗೇಶ್ವರ್ ಪರವಾಗಿ ಬ್ಯಾಟಿಂಗ್ ಮಾಡಿದರು.

ಕೆಲವರು ಅವರವರ ಅಭಿಪ್ರಾಯ ಹೇಳ್ತಾರೆ. ವಿಶ್ವನಾಥ್ ಅವರು ಹಿರಿಯರು. ಬೇರೆಯವರಿಗೆ ಅವಕಾಶ ಬೇಕಿದೆ, ಹಾಗಾಗಿ ಇವರಿಗೆ ಅವಕಾಶ ತಪ್ಪಿಸಲು ನೋಡ್ತಾರೆ. ಆದರೆ ಪಕ್ಷ ಹಾಗೂ ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಮಾಡ್ತಾರೆಂದು ರಾಮನಗರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಮಗು ಕಳೆದುಕೊಂಡ ಪುರಸಭಾ ಸದಸ್ಯೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಉಮಾಶ್ರೀ

ಒಟ್ಟಾರೆ ಈ ಹಿಂದೆಯೂ ಸಹ ವಿಶ್ವನಾಥ್ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದರು. ಈಗ ಮತ್ತೆ ಅವರ ವಿರುದ್ಧ ಮೋಸದ ವಿಚಾರವಾಗಿ ಗಂಭೀರವಾಗಿ ಆರೋಪಿಸಿದ್ದಾರೆ.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: