ಕಲ್ಲಿನ ಖಣಿ ಎಂಬ ಮೃತ್ಯುಕೂಪ; ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಹಸು ರಕ್ಷಣೆ

ವಿಜಯಪುರ ನಗರದಲ್ಲಿರುವ ಕಲ್ಲಿನ ಖಣಿಗಳು ಮೃತ್ಯುಕೂಪವಾಗುತ್ತಿವೆ. ಆಹಾರ ಅರಸಿ ಹೋಗಿದ್ದ ಹಸುವೊಂದು 50 ಅಡಿ ಆಳದ ಕ್ವಾರಿಗೆ ಬಿದ್ದು ಗಂಭೀರ ಗಾಯಗೊಂಡಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ದನದ ರಕ್ಷಣೆ ಆಗಿದೆ.

ವಿಜಯಪುರದಲ್ಲಿ ಕಲ್ಲಿನ ಖಣಿಗೆ ಸಿಲುಕಿದ ಹಸುವಿನ ರಕ್ಷಣೆ ಮಾಡುತ್ತಿರುವುದು.

ವಿಜಯಪುರದಲ್ಲಿ ಕಲ್ಲಿನ ಖಣಿಗೆ ಸಿಲುಕಿದ ಹಸುವಿನ ರಕ್ಷಣೆ ಮಾಡುತ್ತಿರುವುದು.

  • Share this:
ವಿಜಯಪುರ: ಆಹಾರ ಅರಸಿ ಹೋಗಿದ್ದ ಆಕಳು ಕಲ್ಲಿನ ಖಣಿಯಲ್ಲಿ ಬಿದ್ದು ನರಕ ಯಾತನೆ ಅನುಭವಿಸಿದ ಘಟನೆ ವಿಜಯಪುರ ನಗರದಲ್ಲಿ ಸಂಭವಿಸಿದೆ. ನಗರದ ಆಶ್ರಮ ರಸ್ತೆಯಲ್ಲಿರುವ ಆದರ್ಶ ನಗರದ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಎದುರು ಇರುವ ಬೃಹದಾಕಾರದ ಕಲ್ಲಿನ ಖಣಿ ಇಂದು ಮತ್ತೋಂದು ಅವಘಡಕ್ಕೆ ಕಾರಣವಾಗಿತ್ತು. ಈ ಹಿಂದೆಯೂ ಇಲ್ಲಿ ಹಲವಾರು ಬಾರಿ ಇಂಥ ಅವಘಡಗಳು ಸಂಭವಿಸಿದ್ದರೂ ಯಾರೂ ಕ್ಯಾರೆ ಎನ್ನದಂತಾಗಿದೆ.

ಗುರುವಾರ ರಾತ್ರಿ ಆಹಾರ ಅರಸಿ ಹೋಗಿದ್ದ ಆಕಳು ಸುಮಾರು 50 ಅಡಿ ಆಳದ ಕಲ್ಲಿನ ಖಣಿಯಲ್ಲಿ ಬಿದ್ದು ನರಳಾಡುತ್ತಿತ್ತು. ಈ ಕಲ್ಲಿನ ಖಣಿಯ ಪಕ್ಕದಲ್ಲಿಯೇ ಇರುವ ಜನ ಅದರ ಧ್ವನಿಯನ್ನು ಕೇಳಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ.  ಬೆಳಿಗ್ಗೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲಿ ನೋಡಿದರೆ, ರಕ್ಷಣೆಗೆ ಸೂಕ್ತ ಸ್ಳಳವೂ ಇರಲಿಲ್ಲ.  ಈ ಹಿನ್ನೆಲೆಯಲ್ಲಿ ಆಪದ್ಭಾಂಧವನಾಗಿ ಬಂದ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಜೆ. ಎಂ. ಅತ್ತಾರ ಎಂಬುವರು ತಮ್ಮ ಬಟ್ಟೆ ತೆಗೆದು ಖಾಲಿ ಸಿಮೆಂಟ್ ಚೀಲಗಳನ್ನು ಧರಿಸಿ ಹಗ್ಗದ ಸಹಾಯದಿಂದ ಕೊಚ್ಚೆಯಿಂದ ತುಂಬಿರುವ ಕಲ್ಲಿನ ಖಣಿಗೆ ಇಳಿದಿದ್ದಾರೆ.  ಆಗ, ಮೊದಲೇ ಗಾಯಗೊಂಡಿದ್ದ ಹಸು ಇವರನ್ನು ಹತ್ತಿರಕ್ಕೆ ಬಿಟ್ಟುಕೊಟ್ಟಿಲ್ಲ.  ಆದರೂ, ಧೈರ್ಯಗೆಡದ ಜೆ. ಎಂ. ಅತ್ತಾರ, ಬಳಿಕ ಸಾರ್ವಜನಕರಿಂದ ಆಹಾರ ತರಿಸಿ ಆಕಳಿಗೆ ಹಾಕಿದ್ದಾರೆ.  ಅದರ ಮೈದಡವಿದ್ದಾರೆ.  ಪ್ರೀತಿ ತೋರಿದ್ದಾರೆ.  ಆಗ ಹಸು ಸುಮ್ಮನಾಗಿದೆ.

ಇದನ್ನೂ ಓದಿ: ಪ್ರವಾಹ ಎಫೆಕ್ಟ್- ಅನ್ನಾಹಾರವಿಲ್ಲದೆ ಸತ್ತ ಮಂಗಕ್ಕೆ ಗ್ರಾಮಸ್ಥರಿಂದ ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ

ಇಷ್ಟಾಗಿದ್ದೇ ತಡ, ಆ ಹಸುವಿನ ಹೊಟ್ಟೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಸಾಗಿಸಲು ಬಳಸುವ ಮತ್ತು ಮಡಚಬಹುದಾದ ಪೈಪನ್ನು ಕಟ್ಟಿದ್ದಾರೆ.  ಮೊದಲು ಹಗ್ಗದ ಸಹಾಯದಿಂದ ಅವರು ಮೇಲಕ್ಕೇರಿ ಬಂದಿದ್ದಾರೆ. ಆಗ ಅವರ ಮಾರ್ಗದರ್ಶನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಸುವನ್ನು ಮೇಲಕ್ಕೆ ಎತ್ತಿದ್ದಾರೆ.  ಈ ಸಂದರ್ಭದಲ್ಲಿ ಖಣಿಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿದು ಬಿದ್ದು ಕೆಲಕ್ಷಣ ಆತಂಕ ಉಂಟಾಗಿತ್ತು. ಆದರೂ ನಂತರ ಸುಧಾರಿಸಿಕೊಂಡ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಆಕಳನ್ನು ಮೇಲೆತ್ತಿದ್ದಾರೆ.  ಈ ಸಂದರ್ಭದಲ್ಲಿ ಹಸು ರಕ್ಷಕ ಜೆ. ಎಂ. ಅತ್ತಾರ ಹೇಳಿದ ಮಾತು ಅರ್ಥಪೂರ್ಣವಾಗಿತ್ತು. ನಾವು ಕೇವಲ ಗೋರಕ್ಷಕರು ಎಂದು ಹೇಳಿದರೆ ಸಾಲದು. ಇಂಥ ಸಂದರ್ಭದಲ್ಲಿ ಬಂದು ಗೋಮಾತೆಯನ್ನು ಸಂರಕ್ಷಿಸಿದರೆ ಅದು ಪುಣ್ಯದ ಕೆಲಸ ಎಂಬ ಮಾತು ಅಲ್ಲಿದ್ದವರನ್ನು ಒಂದು ಕ್ಷಣ ಮಂತ್ರಮುಗ್ದರನ್ನಾಗಿಸಿತ್ತು.

ಇದನ್ನೂ ಓದಿ: ಸರಳ ದಸರಾದಿಂದ ನಲುಗಿದ ಹೊಟೇಲ್​ ಉದ್ಯಮ; ಕೋಟ್ಯಾಂತರ ರೂ ನಷ್ಟ ಎಂದ ಮಾಲೀಕರು

ಹೊರಗೆ ಬಂದು ಸುಮಾರು 15 ರಿಂದ 20 ನಿಮಿಷ ಬಳಲಿದಂತೆ ಕಂಡು ಬಂದ ಆಕಳು ನಂತರ ಸಾವರಿಸಿಕೊಂಡು ಓಡಿ ಹೋಯಿತು. ಆದರೆ, ನಂತರ ಅದನ್ನು ಬೆನ್ನಟ್ಟಿ ಹಿಡಿದ ಕಗ್ಗೋಡ ಗೋಶಾಲೆಯ ಸಿಬ್ಬಂದಿ ವಾಹನದಲ್ಲಿ ತೆಗೆದುಕೊಂಡು ಹೋದರು.

J M Attara
ಅಗ್ನಿಶಾಮಕ ದಳ ಸಿಬ್ಬಂದಿ ಜೆ.ಎಂ. ಅತ್ತಾರ


ಈ ಸಂದರ್ಭದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಸ್ಥಳೀಯ ಆನಂದ ನಗರ ನಿವಾಸಿ ಅಪ್ಪು ಇಟ್ಟಂಗಿ, ಈ ಖಣಿಯಿಂದಾಗುತ್ತಿರುವ ತೊಂದರೆಯ ಬಗ್ಗೆ ಹಲವಾರು ಬಾರಿ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ಹೇಳಿದ್ದು ಮಾತ್ರ ವಾಸ್ತವಿಕ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿತ್ತು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: