• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗೋ ಹತ್ಯೆ ನಿಷೇಧ ಬಿಜೆಪಿ ಅಜೆಂಡಾ, ಗೋ ಹತ್ಯೆ ನಿಷೇಧ ಕಾಯ್ದೆ ನೂರಕ್ಕೆ ನೂರು ಜಾರಿ; ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ

ಗೋ ಹತ್ಯೆ ನಿಷೇಧ ಬಿಜೆಪಿ ಅಜೆಂಡಾ, ಗೋ ಹತ್ಯೆ ನಿಷೇಧ ಕಾಯ್ದೆ ನೂರಕ್ಕೆ ನೂರು ಜಾರಿ; ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ

ಸಚಿವ ಪ್ರಭು ಚವ್ಹಾಣ್​​

ಸಚಿವ ಪ್ರಭು ಚವ್ಹಾಣ್​​

ದೇಶದ ಹಲವು ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಅನುಷ್ಠಾನಕ್ಕೆ ತಂದಿದ್ದು, ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ ಎಂದು ತಿಳಿಸಿದರು. 

ಮುಂದೆ ಓದಿ ...
  • Share this:

ಬಾಗಲಕೋಟೆ (ನವೆಂಬರ್ 20): ಗೋಹತ್ಯೆ ನಿಷೇಧ ಬಿಜೆಪಿ ಅಜೆಂಡಾ. ಗೋ ಹತ್ಯೆ ನಿಷೇಧ ನೂರಕ್ಕೆ ನೂರು ಮಾಡೇ ಮಾಡ್ತೀವಿ. ವಿರೋಧ ಪಕ್ಷದವರು ಅವರ ಕೆಲ್ಸ ಅವರು ಮಾಡ್ತಾರೆ ಎಂದು ಬಾಗಲಕೋಟೆಯಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದರು. ಈ ಮೂಲಕ ಮುಂದಿನ ಅಧಿವೇಶನದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಕ್ರಮ ವಹಿಸಲಾಗುವುದು ಎಂದು ಪರೋಕ್ಷವಾಗಿ ತಿಳಿಸಿದರು.


ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಭು ಚವ್ಹಾಣ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಪದೇ ಪದೇ ಹೇಳ್ತಿದ್ದೀನಿ. ನಾನು ಸಾಮಾನ್ಯ ಕಾರ್ಯಕರ್ತ. 30ವರ್ಷ ಕೆಲ್ಸ ಮಾಡಿದ್ದಿನಿ. ಪಕ್ಷ ನನ್ನ ಸೇವೆ ಗುರುತಿಸಿ, ‌ ಮಂತ್ರಿ ಸ್ಥಾನ ನೀಡಿದೆ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಮಂತ್ರಿ ಆಗ್ತೀನಿ ಎಂದು ನನಗೂ ಗೊತ್ತಿರಲಿಲ್ಲ. ಪಕ್ಷದ ನಿರ್ಣಯ ಅಂತಿಮ ಎಂದರು.


ಸಕಾಲದಲ್ಲಿ ರೈತರ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ರಾಜ್ಯದ 16 ಜಿಲ್ಲೆಗೆಳಿಗೆ ಪಶು ಸಂಚಾರಿ ಆ್ಯಂಬುಲೆನ್ಸ್ ನೀಡಲಾಗಿದ್ದು, ಉಳಿದ ಜಿಲ್ಲೆಗಳಿಗೂ ಸದ್ಯದಲ್ಲಿಯೇ ವಿಸ್ತರಿಸಲಾಗುತ್ತಿದೆ. ಸಂಚಾರಿ ಆ್ಯಂಬುಲೆನ್ಸ್ ವಿಶೇಷವಾದ ಪಶು ಸೇವಾ ಸೌಲಭ್ಯ, ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್, ತುರ್ತು ಚಿಕಿತ್ಸಾ ಘಟಕ ಹೊಂದಿದೆ. ಒಟ್ಟಾರೆಯಾಗಿ ಪಶು ಆಸ್ಪತ್ರೆಯೇ ರೈತರ ಮನೆ ಬಾಗಿಲಿಗೆ ಬರಲಿದೆ ಎಂದು ತಿಳಿಸಿದರು.


ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಪಶುವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ನಿಗದಿತ ಕಾಲಮಿತಿಯಲ್ಲಿ ಕೈಗೊಳ್ಳಲು ವಾರ್ ರೂಮ್ ಮಾಡಲು ತಯಾರಿ ನಡೆಸಲಾಗುತ್ತಿದೆ. ದಿನದ 24 ಗಂಟೆಗಳ ಸೌಲಭ್ಯ, ಟೋಲ್ ಪ್ರೀ ನಂಬರ್ ವ್ಯವಸ್ಥೆ, ಕರೆ ಮಾಡಿದ 4 ಗಂಟೆಗಳಲ್ಲಿ ಸೇವೆ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ವಾರ್ ರೂಮ್ ಮೂಲಕ ರೈತರಿಗೆ ಕೋಳಿ, ಕುರಿ, ಹಂದಿ ಸಾಕಾಣಿಕೆದಾರರಿಗೆ ಆರೋಗ್ಯ ಸಂಬಂಧಿ ವಿಷಯ, ಆಪ್ತ ಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.


ಇದನ್ನು ಓದಿ: 30 ಕಿಲೋಮೀಟರ್ ಪಾದಯಾತ್ರೆ ಮೂಲಕ ಮನೆ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ ವಿಕಲಾಂಗ ಚೇತನ!


ಪ್ರಾಣಿ ಹಿಂಸೆ ತಡೆಯಲು ಕಾನೂನುಗಳನ್ನು ಬಿಗಿಗೊಳಿಸಲು ಕ್ರಮ ವಹಿಸಲಾಗಿದ್ದು, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಆರ್​ಟಿಟಿಪಿಸಿಆರ್ ಯಂತ್ರಗಳನ್ನು ಕೋವಿಡ್ ಪತ್ತೆಗೆ ಹಸ್ತಾಂತರಿಸಲಾಗಿದೆ. ಪರಿಸರ ದಿನಾಚರಣೆ ಅಂಗವಾಗಿ ಪಶು ವೈದ್ಯ ಸಂಸ್ಥೆಗಳಲ್ಲಿ ಮತ್ತು ಫಾರಂಗಳಲ್ಲಿ ಗಿಡಗಳನ್ನು ಏಕಕಾಲಕ್ಕೆ ನೆಡಲಾಗಿದೆ ಎಂದು ತಿಳಿಸಿದರು.


ದೇಶದ ಹಲವು ರಾಜ್ಯಗಳಲ್ಲಿ ಗೋ ಹತ್ಯೆ ನಿಷೇಧ ಅನುಷ್ಠಾನಕ್ಕೆ ತಂದಿದ್ದು, ಕರ್ನಾಟಕದಲ್ಲಿಯೂ ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ ಎಂದು ತಿಳಿಸಿದರು.

Published by:HR Ramesh
First published: