ಕೊಡಗು : ಓಮಿಕ್ರಾನ್ ವೈರಸ್ (Omicron Variant) ಕರ್ನಾಟಕದಲ್ಲಿ (Karnataka) ಆತಂಕ ಮೂಡಿಸಿದ್ದರೆ, ಇತ್ತ ಮತ್ತೊಂದೆಡೆ ಗಡಿ ಜಿಲ್ಲೆ ಕೊಡಗಿಗೆ (kodagu) ಕೇರಳದ್ದೇ ಆತಂಕವಿದೆ. ಕೇರಳ(Kerala)ದೊಂದಿಗೆ ಕೊಡಗು ಜಿಲ್ಲೆ ಮೂರು ಕಡೆಗಳಲ್ಲಿ ಗಡಿ ಚೆಕ್ಪೋಸ್ಟ್ (Checkpost) ಹಂಚಿಕೊಂಡಿದೆ. ಕೊಡಗಿನ ಸಾವಿರಾರು ಕಾರ್ಮಿಕರು (Labours), ಕೇರಳಕ್ಕೆ ಮತ್ತು ಕೇರಳದ ಸಾವಿರಾರು ಕಾರ್ಮಿಕರು ಕೊಡಗಿಗೆ ಕೂಲಿಗಾಗಿ ನಿತ್ಯ ಬಂದು ಹೋಗುತ್ತಾರೆ. ಸದ್ಯ ಕೇರಳದಲ್ಲಿ ಕೋವಿಡ್ ಸೋಂಕಿನ (COVID Positivity Rate)ಪ್ರಕರಣಗಳು ಬಾರಿ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಹೀಗಾಗಿ ನಿತ್ಯ ಬಂದು ಹೋಗುವವರಿಂದ ಕೊಡಗಿಗೂ ಸೋಂಕು ವಕ್ಕರಿಸಿ ಬಿಡುತ್ತಾ ಎನ್ನೋ ಆತಂಕ ಎದುರಾಗಿದೆ.
ಕಾರ್ಮಿಕರಷ್ಟೇ ಅಲ್ಲ, ಜೊತೆಗೆ ಸಾಕಷ್ಟು ವಿದ್ಯಾರ್ಥಿಗಳು (Students) ಕೂಡ ಕೇರಳ ಮತ್ತು ಕೊಡಗಿಗೆ ಹೀಗೆ ನಿತ್ಯ ಬಂದು ಹೋಗುವುದರಿಂದ ಮತ್ತು ಕಾರ್ಮಿಕರು ಬಂದು ಹೋಗುವುದರಿಂದ ಇದೇ ಕೊಡಗಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆರ್ ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ರಾಜ್ಯಕ್ಕೆ ಎಂಟ್ರಿ
ಈ ಆತಂಕಕ್ಕೆ ಪರಿಹಾರವೇನು ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾಧಿಕಾರಿ ಡಾ. ಬಿ ಸಿ ಸತೀಶ್ ಕೋವಿಡ್ ಮತ್ತು ಓಮಿಕ್ರಾನ್ ವೈರಸ್ ನ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಕೊಡಗು ಕೇರಳ ಅಂತಾರಾಜ್ಯ ಚೆಕ್ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. 72 ಗಂಟೆಯೊಳಗಾಗಿ ಪಡೆದ ಆರ್ ಟಿಪಿಸಿಆರ್ ನೆಗೆಟಿವ್ ವರದಿ (RT PCR Negative Report) ಇದ್ದರೆ ಮಾತ್ರವೇ ರಾಜ್ಯಕ್ಕೆ ಎಂಟ್ರಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Karnataka Weather Today: ಕರುನಾಡಿನಲ್ಲಿ ಮತ್ತೆ ಮಳೆಯ ಸಿಂಚನ: ಚಳಿಗಾಲದಲ್ಲಿಯೂ ವರುಣನ ಅಬ್ಬರ
ತುರ್ತು ಸಂದರ್ಭಗಳಲ್ಲಿ ಅಲ್ಲಿಯೇ ಪರೀಕ್ಷೆ
ನೆಗೆಟಿವ್ ವರದಿ ಇಲ್ಲದಿದ್ದರೆ ಅಂತಹವರಿಗೆ ಯಾವುದೇ ಕಾರಣಕ್ಕೂ ಎಂಟ್ರಿ ಕೊಡುತ್ತಿಲ್ಲ. ಒಂದು ವೇಳೆ ತುರ್ತಾಗಿ ಕರ್ನಾಟಕಕ್ಕೆ ಬರಬೇಕಾಗಿದ್ದರೆ ಅಂತಹವರಿಗೆ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಚೆಕ್ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಆರ್ ಎಟಿ ಟೆಸ್ಟ್ ಮಾಡುತ್ತಿದ್ದಾರೆ.
ವಿದ್ಯಾರ್ಥಿ, ಕಾರ್ಮಿಕರಿಗೆ ವಿನಾಯಿತಿ
ಇನ್ನು ನಿತ್ಯ ಓಡಾಡುವ ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ಸರ್ಕಾರವೇ ವಿನಾಯಿತಿ ನೀಡಿದೆ. ಅಂತಹವರಿಗೆ ವಾರದಲ್ಲಿ ಒಮ್ಮೆ ಟೆಸ್ಟ್ ಮಾಡಲಾಗುತ್ತಿದೆ. ಏನಾದರೂ ರೋಗ ಲಕ್ಷಣಗಳು ಇದ್ದರೆ, ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ ಸತೀಶ್ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ವಿರಾಜಪೇಟೆಯಲ್ಲಿರುವ ಕೂರ್ಗ್ ಡೆಂಟಲ್ ಮೆಡಿಕಲ್ ಕಾಲೇಜಿನಲ್ಲಿ ಬಹುತೇಕ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಕೇರಳದವರೆ ಆಗಿರುವುದರಿಂದ ಮಂಗಳವಾರ ಕೊಡಗು ಡಿಎಚ್ಓ ವೆಂಕಟೇಶ್ ಅವರು ಖುದ್ದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Bengaluru Crime: ಓಮಿಕ್ರಾನ್ಗೆ ಹೊಸ ಲಸಿಕೆ ಹಾಕ್ತಿವಿ ಅಂತ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ!
ವಿದ್ಯಾರ್ಥಿಗಳೊಂದಿಗೆ ಡಿಎಚ್ಓ ವೆಂಕಟೇಶ್ ಸಂವಾದ
ಜೊತೆಗೆ ಕಾಲೇಜು ಪ್ರಾಂಶುಪಾಲರು ಮತ್ತು ಉಪನ್ಯಾಸಕರೊಂದಿಗೆ ಸಭೆ ನಡೆಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ ಅವರು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.
ಎಲ್ಲಾ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿನಿಂದ ಕಾಲೇಜಿನ ಹಾಸ್ಟೆಲ್ ನಲ್ಲಿಯೇ ಇದ್ದಾರೆ. ಒಬ್ಬ ವಿದ್ಯಾರ್ಥಿ ಮಾತ್ರ ಒಂದು ವಾರದ ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದಾನೆ. ಆತನಿಗೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕವಾಗಿಿ ಆತನನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಎಚ್ಓ ವೆಂಕಟೇಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು ಜಿಲ್ಲೆಗೆ ನಿತ್ಯ ಎರಡು ರಾಜ್ಯಗಳೊಂದಿಗೆ ಓಡಾಡುವ ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಂದಲೇ ಆತಂಕ ಎದುರಾಗಿರುವುದಂತು ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ