Coronavirus: ಕೋಲಾರದಲ್ಲಿ ಮಿತಿ ಮೀರಿದ ಕೋವಿಡ್ ಕೇಸ್, ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಮಾಡಲು ಜಿಲ್ಲಾಡಳಿತ ನಿರ್ಧಾರ

ಕೋಲಾರ ಜಿಲ್ಲೆಯಲ್ಲಿ ಕೊರೋ‌ನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ, ಹೀಗಾಗಿ ಕೋಲಾರದ ಎಸ್ ಎನ್ ಆರ್  ಜಿಲ್ಲಾಸ್ಪತ್ರೆಯ ಹೊರರೋಗಗಳ ವಿಭಾಗವನ್ನ, ಜಿಲ್ಲಾಸ್ಪತ್ರೆ ಪಕ್ಕದಲ್ಲಿನ ಇ.ಟಿ.ಸಿ.ಎಂ ಖಾಸಗಿ ಆಸ್ಪತ್ರೆಗೆ ಸ್ತಳಾಂತರಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಜಿಲ್ಲಾಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.

ಕೋಲಾರ ಜಿಲ್ಲಾಸ್ಪತ್ರೆ

ಕೋಲಾರ ಜಿಲ್ಲಾಸ್ಪತ್ರೆ

  • Share this:
ಕೋಲಾರ: ರಾಜ್ಯ ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿ ಇರುವ ಕೋಲಾರ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 3 ವಾರಗಳ ಹಿಂದೆ ಕೇವಲ 30 ರ ಆಸುಪಾಸಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ 150 ರ ಗಡಿದಾಟಿದೆ. ಕಳೆದೆರಡು  ವಾರದಿಂದ ಪ್ರತಿದಿನ ಸೋಂಕಿತರ ಸಂಖ್ಯೆ ನೂರರ ಗಡಿದಾಟುತ್ತಿದೆ.

ಏಪ್ರಿಲ್ 19 ರಂದು ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ,  ಕೋಲಾರದಲ್ಲಿ 54 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು  12,116 ಕೇಸ್ ಇದ್ದು, ಗುಣಮುಖರ ಸಂಖ್ಯೆ 12226 ಕ್ಕೆ ಏರಿಕೆಯಾಗಿದೆ.  ಜಿಲ್ಲೆಯಲ್ಲಿ ಒಟ್ಟು 701  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗದಿದ್ದರು ಇದುವರೆಗು 189 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟೆನ್ ನಲ್ಲಿ ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿತರ ಹೆಚ್ಚಳ‌,  ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ನಿರ್ಧಾರ: ಕೋಲಾರ ಜಿಲ್ಲೆಯಲ್ಲಿ ಕೊರೋ‌ನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ, ಹೀಗಾಗಿ ಕೋಲಾರದ ಎಸ್ ಎನ್ ಆರ್  ಜಿಲ್ಲಾಸ್ಪತ್ರೆಯ ಹೊರರೋಗಗಳ ವಿಭಾಗವನ್ನ, ಜಿಲ್ಲಾಸ್ಪತ್ರೆ ಪಕ್ಕದಲ್ಲಿನ ಇ.ಟಿ.ಸಿ.ಎಂ ಖಾಸಗಿ ಆಸ್ಪತ್ರೆಗೆ ಸ್ತಳಾಂತರಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಜಿಲ್ಲಾಸ್ಪತ್ರೆಯನ್ನ ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ.

ಈ ಬಗ್ಗೆ ಮಾತನಾಡಿರುವ  ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ  ನಾರಾಯಣಸ್ವಾಮಿ,  ಜಿಲ್ಲಾಸ್ಪತ್ರೆಯಲ್ಲಿ ಸದ್ಯ 200 ಬೆಡ್ ಕೋವಿಡ್ ಸೋಂಕಿತರಿಗೆ ಮೀಸಲಿದೆ,  122 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಆಸ್ಪತ್ರೆಯಲ್ಲಿನ ಎಲ್ಲಾ ಬೆಡ್ ಗಳು ಭರ್ತಿಯಾಗಲಿದೆ. ಜಿಲ್ಲಾಸ್ಪತ್ರೆಯಲ್ಲಿ 40 ಐಸಿಯು ಹಾಸಿಗೆಯಿದೆ, 7 ಮಂದಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆಕ್ಸಿಜನ್ ಉತ್ಪಾದನೆ ಕಡಿಮೆ ಹಿನ್ನಲೆ ಬೇಡಿಕೆಗೆ ತಕ್ಕಂತೆ ಲಭ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿನ ಬೆಡ್ ಸಮಸ್ಯೆ ತಡೆಯಲು ಖಾಸಗಿ ಆಸ್ಪತ್ರೆಗಳ ಜೊತೆಗೆ ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ವೈದ್ಯಾಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಒಂದೇ ಗ್ರಾಮದಲ್ಲಿ 40 ಕ್ಕು ಹೆಚ್ಚು ಕೇಸ್, ಎರಡು ಗ್ರಾಮಗಳಲ್ಲಿ ಕಂಟೈನ್ಮೆಂಟ್ ಜೋನ್ ಘೋಷಣೆ: ರಾಜಧಾನಿ ಬೆಂಗಳೂರು ಪಕ್ಕದಲ್ಲೆ ಇರುವ ಕೋಲಾರದಲ್ಲಿ ಕೊರೋನಾ ಕೇಸ್ ದಿನೇ ದಿನೇ ಹೆಚ್ಚುತ್ತಿದೆ. ಇದೀಗ  ಇರುವ ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಒಂದೇ ದಿನ  31 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು, ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಕಳೆದ ವಾರ ಬೆಂಗಳೂರಿಂದ‌ ಸ್ವಗ್ರಾಮಕ್ಕೆ ಓರ್ವ ವ್ಯಕ್ತಿ ಅನಾರೋಗ್ಯದಿಂದ ಬಂದಿದ್ದು, ಅವರ ಕುಟುಂಬಕ್ಕೆ ಕೊರೊನಾ ಹರಡಿ, ಬಳಿಕ ಗ್ರಾಮದಲ್ಲಿ ಇತರರೊಂದಿಗೆ ಸಂಪರ್ಕ ಬೆಳೆಸಿದ್ದರಿಂದ,  ಸೋಂಕು ಹರಡಿದೆ ಎಂದು ಗ್ರಾಮಸ್ತರು ಆರೋಪಿಸಿದ್ದು, ಸೋಂಕಿತರನ್ನ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆಂದು ಗ್ರಾಮಸ್ತರು ಆರೋಪಿಸಿದ್ದಾರೆ.

ಗ್ರಾಮದಲ್ಲಿ ಇದುವರೆಗು 101 ಮಂದಿಗೆ ಕೊರೋನಾ ಪರೀಕ್ಷೆ ಮಾಡಿದ್ದು 40 ಕ್ಕು ಹೆಚ್ಚು ಮಂದಿಯಲ್ಲಿ ಸೋಂಕು ದೃಢವಾಗಿದೆ.  ಮುಂದಿನ ಎರಡು ದಿನ ಗ್ರಾಮದಲ್ಲಿ  ಕೋವಿಡ್  ಪರೀಕ್ಷೆ ನಡೆಯಲಿದ್ದು, ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಗ್ರಾಮವನ್ನ ಮುಂದಿನ 14 ದಿನ  ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿರುವ ಹಿನ್ನಲೆ ವೇಮಗಲ್ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಬಂಗಾರಪೇಟೆ ತಾಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮದಲ್ಲು ಸರಣಿ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದ್ದರಿಂದ, ತಾಲೂಕು ವೈದ್ಯಾಧಿಕಾರಿ ಡಾ ಸರಸ್ವತಿ ನೇತೃತ್ವದಲ್ಲಿ ಗ್ರಾಮವನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

ಒಟ್ಟಿನಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿರುವ ವೇಳೆಯಲ್ಲಿ ಜರನು ತಮ್ಮ ನಿತ್ಯ ಚಟುವಟಿಕೆಯಲ್ಲಿ ಸ್ವಯಂ ಲಾಕ್ ಡೌನ್ ಮಾಡಿಕೊಳ್ಳದೆ ಹೋದಲ್ಲಿ, ಪರಿಸ್ಥಿತಿ ಕೈ ಮೀರಿದರೆ ಸರ್ಕಾರವೇ ಕಠಿಣ ಕ್ರಮಕ್ಕೆ ಮುಂದಾದರು ಅಚ್ಚರಿ ಪಡಬೇಕಿಲ್ಲ.
Published by:Soumya KN
First published: