Chamarajanagar Wife Murder Case: ಮದುವೆಯಾದ 9ನೇ ದಿನಕ್ಕೆ ಪತ್ನಿ ಕೊಲೆ ಮಾಡಿದ ಪೇದೆ.. ಕೋರ್ಟ್ ಹೇಳಿದ್ದೇನು?

ನಿಮ್ಮ ಜಮೀನು ನೋಡಿಕೊಂಡು ಬರೋಣ ಎಂದು ಪತ್ನಿಯನ್ನು  ನಂಬಿಸಿ ಕರೆದೊಯ್ದಿದ್ದ.  ಬಳಿಕ  ಜಮೀನಿನಲ್ಲಿದ್ದ ಬಾವಿಗೆ ತಳ್ಳಿ ನಿಮ್ಮ ಮಗಳು ಕಾಲು ಜಾರಿ ಬಾವಿಗೆ  ಬಿದ್ದಳು ಎಂದು ಸುಳ್ಳುಕಥೆ ಕಟ್ಟಿ  ಆಕೆಯ ಪೋಷಕರನ್ನು ನಂಬಿಸಲು ಪ್ರಯತ್ನಿಸಿದ್ದ.

ಕೊಳ್ಳೆಗಾಲ ಕೋರ್ಟ್​​

ಕೊಳ್ಳೆಗಾಲ ಕೋರ್ಟ್​​

  • Share this:
ಚಾಮರಾಜನಗರ : ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಪೊಲೀಸ್ ಕಾನ್ಸ್‌ಟೇಬಲ್ ಗೆ ಕೊಳ್ಳೆಗಾಲ  ಹೆಚ್ಚುವರಿ ಜಿಲ್ಲಾ  ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.  ಬೆಂಗಳೂರಿನ ಠಾಣೆಯೊಂದರಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಯಾಗಿ ಕೆಲಸ ನಿರ್ವಹಿಸುತ್ತಿದ್ದ  ವೆಂಕಟೇಶ್ ಮೂರ್ತಿ  ಎಂಬಾತ ಮದುವೆಯಾದ ಒಂಭತ್ತೇ  ದಿನದಲ್ಲಿ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ್ದ. ಈತನ ಮೇಲಿನ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ  ಮತ್ತು ಸತ್ರ  ನ್ಯಾಯಾಧೀಶ ಎನ್. ಆರ್. ಲೋಕಪ್ಪ ಅವರು ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.

ಅಂದು ಆಗಿದ್ದೇನು? 

2017 ರ ಫೆಬ್ರುವರಿ 13 ರಂದು ಕೊಳ್ಳೇಗಾಲ ತಾಲ್ಲೂಕಿನ ಧನಗೆರೆ ಗ್ರಾಮದ ಸಾವಿತ್ರಮ್ಮ ಬಸವಣ್ಣ ಅವರ  ಪುತ್ರಿ ದಿವ್ಯಾ  ಹಾಗು  ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ಮಾರಶೆಟ್ಟಿ ಎಂಬುವರ ಮಗ ಪೊಲೀಸ್ ಕಾನ್ಸ್‌ಟೇಬಲ್ ವೆಂಕಟೇಶ್ ಮೂರ್ತಿ ಮದುವೆಯಾಗಿತ್ತು. ಮದುವೆಯ  ನಿಶ್ಚಯ ಸಂದರ್ಭದಲ್ಲಿ 2.5 ಲಕ್ಷ  ರೂಪಾಯಿ ವರದಕ್ಷಿಣೆ ನೀಡಬೇಕೆಂದು ವರನ ಕಡೆಯವರು ಒತ್ತಾಯಿಸಿದ್ದರು. ಈ ಬಗ್ಗೆ ಮಾತುಕತೆ ನಡೆದು ವಧುವಿನ ಪೋಷಕರು 1,58,000 ನಗದು ಹಾಗು 42 ಸಾವಿರ ರೂಪಾಯಿಗೆ ಚೆಕ್ ನೀಡಿದ್ದರು. ಉಳಿದ 50 ಸಾವಿರ ರೂಪಾಯಿಗಳನ್ನು  ನಂತರ ಕೊಡುವುದಾಗಿ ಹೇಳಿದ್ದರು.

ಮದುವೆಯಾದ ಒಂದೇ ವಾರಕ್ಕೆ ಟಾರ್ಚರ್​..! 

ಮದುವೆಯಾದ ನಂತರ  ದಿವ್ಯಾಳು ಗಂಡನ ಮನೆಗೆ ಹೋದಾಗ ಬಾಕಿ ಉಳಿದಿರುವ 50 ಸಾವಿರ ರೂಪಾಯಿ ಹಾಗೂ ಮಾಂಗಲ್ಯ ಸರವನ್ನು ಮಾಡಿಸಿಕೊಂಡು ಬರುವಂತೆ ಮದುವೆಯಾದ ಒಂದು ವಾರದಲ್ಲೇ  ಗಂಡನ ಜೊತೆ  ಧನಗೆರೆ ಗ್ರಾಮಕ್ಕೆ  ವಾಪಸ್ಸು ಕಳುಹಿಸಲಾಯಿತು.  ಪತ್ನಿಯ ಮನೆಯಲ್ಲಿ ಎರಡು ದಿನ ಉಳಿದಿದ್ದ ವೆಂಕಟೇಶಮೂರ್ತಿ  2017 ರ ಫೆಬ್ರುವರಿ 22 ರಂದು  ನಿಮ್ಮ ಜಮೀನು ನೋಡಿಕೊಂಡು ಬರೋಣ ಎಂದು ಪತ್ನಿಯನ್ನು  ನಂಬಿಸಿ ಕರೆದೊಯ್ದಿದ್ದ.  ಬಳಿಕ  ಜಮೀನಿನಲ್ಲಿದ್ದ ಬಾವಿಗೆ ತಳ್ಳಿ ನಿಮ್ಮ ಮಗಳು ಕಾಲು ಜಾರಿ ಬಾವಿಗೆ  ಬಿದ್ದಳು ಎಂದು ಸುಳ್ಳುಕಥೆ ಕಟ್ಟಿ  ಆಕೆಯ ಪೋಷಕರನ್ನು ನಂಬಿಸಲು ಪ್ರಯತ್ನಿಸಿದ್ದ. ಆದರೆ ವರದಕ್ಷಿಣೆ ಕಿರುಕುಳ ನೀಡಿ  ತಮ್ಮ ಮಗಳನ್ನು ಬಾವಿಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಮೃತ ದಿವ್ಯಾಳ ತಾಯಿ ಸಾವಿತ್ರಮ್ಮ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೊಲೆ ಆರೋಪ ಸಾಬೀತಾಗಿತ್ತು

ನಂತರ ಪೊಲೀಸರು ತನಿಖೆ ನಡೆಸಿದಾಗ ವೆಂಕಟೇಶಮೂರ್ತಿ ತನ್ನ   ಪತ್ನಿ ದಿವ್ಯಾಳನ್ನು  ಬಾವಿಗೆ ತಳ್ಳಿರುವುದು ದೃಢ ಪುಟ್ಟಿತ್ತು . ಈ ಹಿನ್ನೆಲೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗು ಕೊಲೆ  ಪ್ರಕರಣ ದಾಖಲಿಸಿಕೊಂಡ   ಪೊಲೀಸರು  ಆರೋಪಿ ವೆಂಕಟೇಶ್ ಮೂರ್ತಿ ಹಾಗೂ ಆತನ ಸಹೋದರರಾದ ಮಹದೇವು, ನಾಗಸ್ವಾಮಿ, ರಘು ಎಂಬುವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು

ಇದನ್ನೂ ಓದಿ: Wife Murder Mystery: ಹೆಂಡತಿ ಮೇಲೆ ಅನುಮಾನ..ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ಐಡಿಯಾ.. ಕೊನೆಗೆ ಗಂಡ ಮಾಡಿದ್ದು ಭೀಕರ!

ಸುದೀರ್ಘ ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಭೀತಾದ ಹಿನ್ನಲೆಯಲ್ಲಿ ವೆಂಕಟೇಶ್ ಮೂರ್ತಿಗೆ ಜೀವಾವಧಿ ಶಿಕ್ಷೆ ಹಾಗು  35 ಸಾವಿರ ರೂಪಾಯಿ ದಂಡ ವಿಧಿಸಿದೆ. ಈತನ ಸಹೋದರರನ್ನು ಖುಲಾಸೆಗೊಳಿಸಿದೆ. . ಸರ್ಕಾರಿ ಅಭಿಯೋಜಕಿ ಎಂ.ಎಸ್. ಉಷಾ ಅವರು ಸರ್ಕಾರದ ಪರ  ವಾದ ಮಂಡಿಸಿದ್ದರು.
Published by:Kavya V
First published: