ಆನೇಕಲ್: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರುಪ್ಸಾ ಸಂಘದ ಅಡಿಯಲ್ಲಿ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಇತ್ತ ಆನೇಕಲ್ನಲ್ಲಿ ಮತ್ತೊಂದು ಖಾಸಗಿ ಅನುದಾನಿತ ಶಾಲೆಗಳ ಒಕ್ಕೂಟದ ಸಂಘ ತಿರುಗಿಬಿದ್ದಿದ್ದು, ರುಪ್ಸಾ ಕರೆ ಕೊಟ್ಟಿರುವ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಎ.ಪಿ.ಎಸ್ ಶಾಲೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆನೇಕಲ್ ತಾಲೂಕು ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಮುನಿರಾಜು, ರುಪ್ಸಾ ಸಂಘವು ಎರಡು ತಿಂಗಳ ಹಿಂದಷ್ಟೇ ನೋಂದಣಿ ಮಾಡಿಸಿದ್ದು ಅವರು ಕರೆ ನೀಡಿರುವ ಖಾಸಗಿ ಶಾಲೆಗಳ ಹಾಗೂ ಶಿಕ್ಷಕರ ಮುಷ್ಕರಕ್ಕೆ ಆನೇಕಲ್ ತಾಲೂಕಿನ ಖಾಸಗಿ ಶಾಲೆಗಳ ಒಕ್ಕೂಟದ ಬೆಂಬಲವಿಲ್ಲ ಎಂದು ತಮ್ಮ ನಿಲುವು ಪ್ರಕಟಿಸಿದ್ದಾರೆ.
ರುಪ್ಸಾ ಸಂಘದ ಅಧ್ಯಕ್ಷ ಲೋಕೇಶ್ವರಪ್ಪ ಅವರು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ರುಪ್ಸಾ ಸಂಘವು 12 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಹೊಂದಿದೆ ಎಂದು ಹೇಳಿಕೊಳ್ಳುತ್ತಿರುವುದು ಸತ್ಯಕ್ಕೆ ದೂರವಾದ ಮಾತಾಗಿದೆ. ಕೊರೋನಾದಂತಹ ಮಾರಕ ರೋಗ ಕಾಲಿಟ್ಟ ಘಳಿಗೆಯಿಂದ ಶಿಕ್ಷಣ ಸಂಸ್ಥೆಗಳು ಬುಡಮೇಲು ಆಗಿರುವ ಸಂದರ್ಭದಲ್ಲಿ ಇಂತಹ ನಿರ್ಣಯಗಳು ಕೈಗೊಳ್ಳುವುದು ಸರಿಯಲ್ಲ. ಸರ್ಕಾರ ನೀಡಿರುವ ನಿದರ್ಶನದಂತೆ ಎಸ್.ಓ.ಪಿ ಪ್ರಕಾರ ಶಾಲೆಗಳು ಆರಂಭ ಮಾಡಲಾಗಿದ್ದು, ಇದೀಗ ಖಾಸಗಿ ಶಾಲೆಯವರು ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಖಾಸಗಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿರುವ ರುಪ್ಸಾ ಸಂಘಟನೆಯ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ ಎಂದು ಮುನಿರಾಜು ತಿಳಿಸಿದ್ದಾರೆ.
ಇದನ್ನೂ ಓದಿ: Fire Accident - ರಾಮನಗರದ ಶಕ್ತಿ ಅಕ್ಯುಮುಲೇಟರ್ಸ್ ಕಂಪನಿ ಭಸ್ಮ; ಜೀವ ಉಳಿಸಿಕೊಂಡ ಕಾರ್ಮಿಕರು
ಕೊರೋನಾ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪೋಷಕರು, ಮಕ್ಕಳು ಮತ್ತು ಶಿಕ್ಷಕರು ಯಾವಾಗ ಶಾಲೆ ಆರಂಭವಾಗುತ್ತದೆಂದು ಆತುರದಿಂದ ಕಾದುಕುಳಿತಿದ್ದರು. ಸರ್ಕಾರ ನಮ್ಮ ಬೆಂಬಲಕ್ಕೆ ನಿಂತು 12ನೇ ತರಗತಿಯವರೆಗೆ ಶಾಲೆ ತೆರೆಯುವಂತೆ ಅವಕಾಶ ಮಾಡಿಕೊಟ್ಟಿದ್ದಾರೆ. ದೇಶ ಅಭಿವೃದ್ಧಿಯಾಗಲು ಶಿಕ್ಷಕರ ಪಾತ್ರ ಬಹಳ ಪ್ರಮುಖವಾದದ್ದು, ರೂಪ್ಸಾ ಸಂಘಟನೆಯವರು ಶಿಕ್ಷಕರನ್ನೇ ದಾರಿತಪ್ಪಿಸಲು ಹೊರಟಿದ್ದಾರೆ. ಇದ್ಯಾವುದಕ್ಕೂ ನಾವು ಕಿವಿಗೊಡುವುದಿಲ್ಲ. ಅವರು ಕರೆ ನೀಡಿರುವ ಹೋರಾಟಕ್ಕೆ ನಮ್ಮ ಆನೇಕಲ್ ತಾಲೂಕಿನ ಖಾಸಗಿ ಶಾಲೆ ಶಿಕ್ಷಕರ ಬೆಂಬಲವಿಲ್ಲ. ಜೊತೆಗೆ ರಾಜ್ಯದಾದ್ಯಂತ ಖಾಸಗಿ ಶಾಲೆಗಳು ಕೂಡ ಬೆಂಬಲ ನೀಡುವುದಿಲ್ಲ ಎಂದು ಆನೇಕಲ್ ತಾಲ್ಲೂಕು ಖಾಸಗಿ ಶಾಲೆಗಳ ಸಂಘದ ಕಾರ್ಯದರ್ಶಿ ಚಂದ್ರಯ್ಯ ನಾಯ್ಡು ಅವರು ಕೂಡ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಹುಲಕೋಟಿ ಗ್ರಾಮ ದೇಶಕ್ಕೆ ನಂಬರ್ ಒನ್; ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆಯಲ್ಲಿ ನಂಬರ್ ಶ್ರೇಣಿ
ಒಟ್ಟಿನಲ್ಲಿ ಅನುದಾನರಹಿತ ಖಾಸಗಿ ಶಾಲೆಗಳ ಒಂದು ಬಣವಾದ ರುಪ್ಸಾ ಪ್ರತಿಭಟನೆ ಮುಂದಾದರೆ, ಆನೇಕಲ್ ತಾಲ್ಲೂಕಿನ ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿರುವುದು ಕುತೂಹಲ ಮೂಡಿಸಿದೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ