ಕೊರೋನಾ ಕಲಿಸಿದ ಪಾಠ- ಗ್ರಾಮೀಣ ಮಕ್ಕಳ ಚಿತ್ತ ಕೃಷಿ ಚಟುವಟಿಕೆಯತ್ತ- ಭೂತಾಯಿಯ ಸೇವೆಯಲ್ಲಿ ಮಣ್ಣಿನ ಮಕ್ಕಳು

ಕೊರೋನಾ ವೈರಸ್​ ಎಫೆಕ್ಟ್​ನಿಂದ ಮನೆಯಲ್ಲಿಯೇ ಇದ್ದ ಬಸವನಾಡು ವಿಜಯಪುರದ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿದ್ದಾರೆ. 

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

  • Share this:
ವಿಜಯಪುರ(ಜುಲೈ.30): ಕೊರೋನಾ ಮಾನವನಿಗೆ ತರಹೇವಾರಿ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗಿದ್ದರೂ, ಹಲವಾರು ಬಗೆಯಲ್ಲಿ ಪಾಠವನ್ನೂ ಕೊರೋನಾ ಹೇಳಿ ಕೊಡುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ತೋರುವಂತೆ ಮಾಡಿದೆ.

ಪ್ರತಿ ಬಾರಿ ಮುಂಗಾರು ಆರಂಭವಾಗುತ್ತಿದ್ದಂತೆ ಶಾಲೆ, ಕಾಲೇಜುಗಳು ಪ್ರಾರಂಭವಾಗುತ್ತಿದ್ದವು.  ಆದರೆ, ಈ ಬಾರಿ ಕೊರೋನಾ ಕಾಟದಿಂದಾಗಿ ಶಾಲೆ ಕಾಲೇಜುಗಳಿೆಗೆ ರಜೆ ನೀಡಲಾಗಿದೆ. ಇದು ವಿದ್ಯಾರ್ಥಿಗಳ ಪಾಲಿಗಂತೂ ಮನೆಯಲ್ಲಿಯೇ ಇರುವಂತೆ ಮಾಡಿದೆ. ಆದರೆ, ಮನೆಯಲ್ಲಿಯೇ ಕುಳಿತುಕೊಳ್ಳಲು ಕೂಡ ಇವರಿಗೆ ಬೇಸರವಾಗುತ್ತಿತ್ತು. ಪರಿಣಾಮ ಈಗ ಮುಂಗಾರು ಆರಂಭವಾಗಿದ್ದರಿಂದ ಬಸವನಾಡು ವಿಜಯಪುರದಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ಕೃಷಿಯಲ್ಲಿ ತೊಡಗಿದ್ದಾರೆ.ಮುಂಗಾರು ಮಳೆಯಾದ ಪರಿಣಾಮ ಭೂಮಿ ಹದವಾಗಿದ್ದು, ನೇಗಿಲು ಹೊಡೆಯುವುದು, ಮಣ್ಣನ್ನು ಹರಗುವುದು, ಕಳೆ ಕೀಳುವುದು ಮತ್ತು ಬಿತ್ತನೆಯಂಥ ಚಟುವಟಿಕೆಗಳತ್ತ ಈಗ ಈ ಮಕ್ಕಳು ಮತ್ತು ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಮುಂಚೆ ಬೇಸಿಗೆ ರಜೆಯಲ್ಲಿ ಪೋಷಕರು ಕೃಷಿ ಕಡೆಗೆ ಮಕ್ಕಳನ್ನು ಸೆಳೆಯಲೆತ್ನಿಸಿದರೂ ಹೋಗವ್ವ ಬರೊಲ್ಲ. ಶಾಲೆಗೆ ಕೆಲವೇ ದಿನ ರಜೆ ಇದೆ ಎನ್ನುತ್ತಿದ್ದ ಮಕ್ಕಳು ಈಗ ಪಾಲಕರೊಂದಿಗೆ ಭೂತಾಯಿಯ ಸೇವೆಯಲ್ಲಿ ತೊಡಗಿದ್ದಾರೆ.ಕಳೆದ ನಾಲ್ಕು ತಿಂಗಳು ಮನೆಯಲ್ಲಿ ಕುಳಿತು ಬೇಜಾರಾಗಿರುವ ಮಕ್ಕಳು ಈಗ ಬೇಸಾಯದತ್ತ ದೃಷ್ಠಿ ನೆಟ್ಟಿರುವುದು ಪೋಷಕರಲ್ಲಿಯೂ ಸಂತಸ ತಂದಿದೆ ಎನ್ನುತ್ತಾರೆ ಜುಮನಾಳ ಗ್ರಾಮದ ರೈತ ಮಹಿಳೆ ಸುನಂದಾ ಭುಸಾರೆ.ಬೇಸಿಗೆಯಲ್ಲಿ ಎರಡು ತಿಂಗಳು ರಜೆ ಇರುತ್ತಿತ್ತು. ಮುಂಗಾರು ಆರಂಭದೊಂದಿಗೆ ಮಕ್ಕಳು ಶಾಲೆಗೆ ತೆರಳುತ್ತಿದ್ದೇವು. ಈಗ ಬಿತ್ತನೆ ಕಲಿಯುತ್ತಿದ್ದೇವೆ. ಅಡವಿಯಲ್ಲಿಯೇ ವಾಸಿಸುತ್ತಿದ್ದೇವೆ. ಯಾರ ಸಂಪರ್ಕವೂ ಬರದಿರುವುದರಿಂದ ಕೊರೋನಾ ಕೂಡ ನಮ್ಮ ಹತ್ತಿರ ಸುಳಿಯುವುದಿಲ್ಲ. ಮಕ್ಕಳು ಈಗ ಇಲ್ಲಿ ಬಿತ್ತನೆ ಮಾಡುವುದನ್ನು, ಗೊಬ್ಬರ ಹಾಕುವುದನ್ನು ಮತ್ತು ಬೆಳೆಗಳಿಗೆ ನೀರುಣಿಸುವುದನ್ನು ಕಲಿಯುತ್ತಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ವಿನೋದ ವಿಶ್ವನಾಥ ಸಂಕಗೊಂಡ, ಹಾಲಹಳ್ಳಿಯ ಮೋಹಿತ ಸುಸಲಾದಿ ಮತ್ತು ಮಿಥುನ ಸುಸಲಾದಿ.ಮಕ್ಕಳಿಗೆ ಬಾಲ್ಯದಲ್ಲಿ ಕಲಿಕೆಯ ಆಸಕ್ತಿ ಹೆಚ್ಚಾಗಿರುತ್ತದೆ. ಈಗ ಹಳ್ಳಿಗಳಲ್ಲಿ ಈ ಮಕ್ಕಳು ಕೃಷಿಯತ್ತ ಮುಖ ಮಾಡಿದ್ದು ಮತ್ತು ನಗರಗಳಲ್ಲಿ ವಾಸಿಸುತ್ತಿದ್ದ ಮಕ್ಕಳು ಕೊರೋನಾ ರಜೆಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದು, ಅವರೂ ಕೂಡ ಬೇಸಾಯವನ್ನು ಕಲಿಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎನ್ನುತ್ತಾರೆ ಉಮರಾಣಿಯ ಶಿಕ್ಷಕ ಮಲ್ಲಿಕಾರ್ಜುನ ಚಿಂಚೋಳಿ.ಕೊರೋನಾದಿಂದಾಗಿ ಈಗ ಅರ್ಥ ವ್ಯವಸ್ಥೆ ಕುಸಿದಿದೆ. ಹಲವಾರು ಉದ್ಯಮಗಳು ನೆಲ ಕಚ್ಚಿವೆ. ಸಾವಿರಾರು ಜನ ನಿರುದ್ಯೋಗಿಗಳಾಗಿದ್ದಾರೆ. ದೊಡ್ಡ ಕನಸುಗಳನ್ನು ಹೊತ್ತು ಮಹಾನಗರಗಳತ್ತ ಮುಖ ಮಾಡುತ್ತಿದ್ದ ಜನ ಈಗ ಕೆಲಸ ಕಳೆದುಕೊಂಡು ತಾಯ್ನಾಡಿಗೆ ಮರಳಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ರಫೇಲ್ ಯುದ್ಧ ವಿಮಾನ ಬಂತು ; ವಿಜಯಪುರ ಸೈನಿಕ ಶಾಲೆಗೆ ಅತೀವ ಸಂತಸ ತಂತು ಯಾಕೆ ಗೊತ್ತಾ?

ದೇಶದ ಬೆನ್ನೆಲುಬಾಗಿರುವ ಈ ಮಕ್ಕಳು ಮತ್ತು ಕೃಷಿ ಈ ಕೊರೋನಾ ಸಂದರ್ಭದಲ್ಲಿ ಒಂದು ವರದಾನವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಈ ಕೊರೊನಾ ಜೊತೆಗೆ ಕೃಷಿಯ ಪಾಠವನ್ನು ಕಲಿಯುತ್ತಿದ್ದಾರೆ.

ಇದೇ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಮಕ್ಕಳು ಮತ್ತು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡರೆ ಇವರ ಬಾಳು ಆರೋಗ್ಯ ಮತ್ತು ಆರ್ಥಿಕವಾಗಿ ಹಸನಾಗುವುದರಲ್ಲಿ ಸಂಶಯವಿಲ್ಲ.
Published by:G Hareeshkumar
First published: