HOME » NEWS » District » CORONAVIRUS TREATMENT WILL BE GIVEN IN 3 DIFFERENT SECTIONS IN UTTARA KANNADA DISTRICT HK

ಕೊರೋನಾ‌ ಸೋಂಕಿತರಿಗೆ ಮೂರು ‌ವಿಭಾಗವಾಗಿ ಪ್ರತ್ಯೇಕ ಚಿಕಿತ್ಸೆ ; ಹೊಸ ಪ್ಲಾನ್ ರೂಪಿಸಿದ ಉತ್ತರ ಕನ್ನಡ ಜಿಲ್ಲಾಡಳಿತ

ರೋಗದ ಲಕ್ಷಣ ಇರುವವರು, ಲಕ್ಷಣ ಇಲ್ಲದವರು ಹಾಗೂ ಗಂಭೀರ ಸ್ವರೂಪದ ಸೋಂಕಿತರನ್ನ ಪ್ರತ್ಯೇಕಿಸಲು ಜಿಲ್ಲಾಧಿಕಾರಿಗಳು ಪ್ಲಾನ್ ರೂಪಿಸಿದ್ದಾರೆ.

news18-kannada
Updated:July 2, 2020, 4:42 PM IST
ಕೊರೋನಾ‌ ಸೋಂಕಿತರಿಗೆ ಮೂರು ‌ವಿಭಾಗವಾಗಿ ಪ್ರತ್ಯೇಕ ಚಿಕಿತ್ಸೆ ; ಹೊಸ ಪ್ಲಾನ್ ರೂಪಿಸಿದ ಉತ್ತರ ಕನ್ನಡ ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜುಲೈ.02): ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲೇ ನೂರಕ್ಕೂ ಅಧಿಕ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಜತೆಗೆ ರಾಜ್ಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ಸಾಕಷ್ಟು ದೂರು ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲಾಡಳಿತ ಉತ್ತಮ ಚಿಕಿತ್ಸೆ ನೀಡಿ ಮಾದರಿ ಜಿಲ್ಲೆಯಾಗಲಿ ಪಣತೊಟ್ಟಿದೆ.

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಜೋರಾಗಿದ್ದು, ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಕೊರೋನಾ ಪ್ರಕರಣಗಳ ಸಂಖ್ಯೆ ಮುನ್ನೂರರ ಗಡಿಯತ್ತ ಸಾಗಿದೆ. ಇಷ್ಟು ದಿನ ಕೇವಲ ಹೊರರಾಜ್ಯಗಳಿಂದ ಬಂದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಹಾಮಾರಿ ಕೊರೋನಾ ಸೋಂಕು ಇದೀಗ ಇತರರಿಗೂ ಹಬ್ಬುತ್ತಿದೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳಲ್ಲಿ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವ ಪ್ರಕರಣಗಳೇ ಶೇಕಡ 30 ರಷ್ಟಿವೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಸೋಂಕಿತರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವುದಕ್ಕೆ ಇನ್ನಷ್ಟು ಸಿದ್ಧತೆಗಳನ್ನ ಮಾಡಿಕೊಳ್ಳಲು ಮುಂದಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ 293 ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದು 132 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಕೋವಿಡ್-19 ವಾರ್ಡ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆಯನ್ನ ನೀಡಲಾಗುತ್ತಿದ್ದು, 159 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದೊಂದು ವಾರದ ಅವಧಿಯಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು ಇದರಿಂದಾಗಿ ಜನತೆಯಲ್ಲೂ ಆತಂಕ ಮೂಡುವಂತಾಗಿದೆ.

ಇನ್ನು ಸೋಂಕಿನ ಲಕ್ಷಣ ಇರುವ ಹಾಗೂ ಇಲ್ಲದಿರುವ ಸೋಂಕಿತರಿಗೆ ಒಂದೇ ಕಡೆಯಲ್ಲಿ ಚಿಕಿತ್ಸೆ ನೀಡಬೇಕಾಗಿದ್ದು, ಇದರಿಂದ ಸೋಂಕಿನ ಲಕ್ಷಣ ಇಲ್ಲದಿರುವವರು ಸೋಂಕಿತರಿಂದ ಆತಂಕಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಹೀಗಾಗಿ ಕ್ರಿಮ್ಸ್‌ನ ಕೊರೋನಾ ವಾರ್ಡ್​​ನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿದ್ದು, ರೋಗದ ಲಕ್ಷಣ ಇರುವವರು, ಲಕ್ಷಣ ಇಲ್ಲದವರು ಹಾಗೂ ಗಂಭೀರ ಸ್ವರೂಪದ ಸೋಂಕಿತರನ್ನ ಪ್ರತ್ಯೇಕಿಸಲು ಜಿಲ್ಲಾಧಿಕಾರಿಗಳು ಪ್ಲಾನ್ ರೂಪಿಸಿದ್ದಾರೆ.

ಕೋವಿಡ್ ವಾರ್ಡನಲ್ಲಿ ಇಷ್ಟುದಿನ ಚಿಕಿತ್ಸೆ ಪಡೆದವರಲ್ಲಿ ಸೋಂಕಿನ ಲಕ್ಷಣ ಇಲ್ಲದವರ ಸಂಖ್ಯೆಯೇ ಹೆಚ್ಚಿದ್ದು ಇದರಿಂದಾಗಿ ಎಲ್ಲ ಸೋಂಕಿತರನ್ನ ಒಂದೇ ವಾರ್ಡ್‌ನಲ್ಲಿ ಇರಿಸಲಾಗುತ್ತಿತ್ತು. ಆದರೆ, ನಾಲ್ಕು ದಿನಗಳ ಹಿಂದೆ ದಾಖಲಾದ ಅಂಕೋಲಾ ಮೂಲದ ಓರ್ವ ಸೋಂಕಿತನಿಗೆ ತೀವ್ರ ಸ್ವರೂಪದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಇತರೆ ಸೋಂಕಿತರಿಗೆ ಇದರಿಂದ ಆತಂಕ ಸೃಷ್ಟಿಯಾಗಿತ್ತು. ಇದೀಗ ಆ ಸೋಂಕಿತ ಚೇತರಿಸಿಕೊಳ್ಳುತ್ತಿದ್ದು ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳಲಾಗುತ್ತಿದೆ ಎನ್ನುವುದು ಜಿಲ್ಲಾಧಿಕಾರಿಗಳ ಅಭಿಪ್ರಾಯವಾಗಿದೆ.

ಇನ್ನು ಕೊರೋನಾ ಆತಂಕದ ನಡುವೆ ಎಸ್ಎಸ್ಎಲ್‌ಸಿ ಪರೀಕ್ಷೆಗಳು ಸಹ ನಡೆಯುತ್ತಿದ್ದು ಸೋಂಕಿನ ಪ್ರಕರಣಗಳ ಹೆಚ್ಚಳ ವಿದ್ಯಾರ್ಥಿಗಳ ಪಾಲಕರಲ್ಲಿ ಆತಂಕ ಉಂಟುಮಾಡಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮುಂಜಾಗ್ರತಾ ಕ್ರಮವನ್ನ ಕೈಗೊಂಡಿದ್ದು ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ರೀತಿಯ ಕ್ರಮಗಳನ್ನ ಕೈಗೊಂಡಿರುವುದಾಗಿ ಜಿಲ್ಲಾ ಪಂಚಾಯತ್​ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ : ಡಿಕೆ ಶಿವಕುಮಾರ್ ನನ್ನ ಮಿತ್ರನಲ್ಲ, ಅವರೊಬ್ಬ ಒಂದು ಪಕ್ಷದ ಅಧ್ಯಕ್ಷರಷ್ಟೆ ; ಸಚಿವ ರಮೇಶ್ ಜಾರಕಿಹೊಳಿಇನ್ನು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಿಂದ ಯಲ್ಲಾಪುರಕ್ಕೆ ಆಗಮಿಸಿದ್ದ 69 ವರ್ಷ ವೃದ್ಧೆ ಕ್ವಾರಂಟೈನ್ ನಲ್ಲಿರುವಾಗಲೇ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಆಕೆಗೆ ಕೊರೋನಾ ಇದ್ದಿದ್ದು ದೃಢಪಟ್ಟಿದೆ. ಇನ್ನೊಂದೆಡೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಭಟ್ಕಳ ಮೂಲದ 71 ವರ್ಷದ ವೃದ್ಧ ಸಹ ನಿನ್ನೆ ಕೊರೋನಾದಿಂದಾಗಿ ಮೃತಪಟ್ಟಿದ್ದಾರೆ. ಯಲ್ಲಾಪುರ ವೃದ್ಧೆ ಮೃತರಾದ ಬಳಿಕ ಸೋಂಕು ದೃಢಪಟ್ಟಿದ್ದರೂ ಈ ಮೂಲಕ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಇಬ್ಬರು ಸಾವನ್ನಪ್ಪಿದಂತಾಗಿದೆ.

ಒಟ್ಟಾರೆ ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿರುವ ಬೆನ್ನಲ್ಲೇ ಜಿಲ್ಲಾಡಳಿತ ಸೋಂಕಿತರ ಚಿಕಿತ್ಸೆಗೆ ಮತ್ತಷ್ಟು ಸಿದ್ಧತೆ ಮಾಡಿಕೊಳ್ಳಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
First published: July 2, 2020, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories